ADVERTISEMENT

ನಿನ್ನಿಕಲ್‌: ಅನಧಿಕೃತ ನರ್ಸರಿ ತೆರವಿಗೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 7:26 IST
Last Updated 31 ಅಕ್ಟೋಬರ್ 2014, 7:26 IST

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾ­ಯಿತಿ ವ್ಯಾಪ್ತಿಯ ನಿನ್ನಿಕಲ್ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನರ್ಸರಿ ಕಾರ್ಯಾ­ಚರಿಸುತ್ತಿದೆ. ಇದನ್ನು ತಕ್ಷಣ ತೆರವುಗೊಳಿಸಿ, ಆ ಜಾಗವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಹಂಚುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯನ್ನು ಕೇಳಿಕೊಂಡು ನಿರ್ಣಯ ಅಂಗೀಕರಿಸಲಾಗಿದೆ.

ಗ್ರಾ.ಪಂ.ಅಧ್ಯಕ್ಷೆ ನಳಿನಾಕ್ಷಿ ಶೆಟ್ಟಿ ಅಧ್ಯಕ್ಷತೆ­ಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ವ್ಯಾಪಾರ ಪರವಾನಗಿ ನೀಡುವ ಬಗ್ಗೆ ಬಂದ ಅರ್ಜಿಯಲ್ಲಿ ವೆಂಕಟರಮಣ ಭಟ್ ಎಂಬವರು ಸುರಕ್ಷಾ ಫಾರಂ ನಡೆಸುವ ಬಗ್ಗೆ ಪರವಾನಗಿ ಕೇಳಿಕೊಂಡಿದ್ದ ಅರ್ಜಿಯನ್ನು ಪಿಡಿಒ ಓದುತ್ತಿದ್ದಂತೆ ಸಭೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.

‘ಅಲ್ಲಿ ಈಗಾಗಲೇ ನರ್ಸರಿ ಕಾರ್ಯಾ­ಚರಿಸುತ್ತಿದೆ, ಅದು ಸರ್ಕಾರಿ ಜಾಗದಲ್ಲಿ ನಡೆಯುತ್ತಿದೆ. ಈ ಜಾಗವನ್ನು ಕಬಳಿಸುವ ನಿಟ್ಟಿ­ನಲ್ಲಿ ಇಲ್ಲಿ ವ್ಯವಸ್ಥಿತವಾಗಿ ನರ್ಸರಿ ಮಾಡ­ಲಾಗಿ­ದೆ. ನರ್ಸರಿ ವ್ಯವಹಾರಕ್ಕೆ ನಮ್ಮ ಆಕ್ಷೇಪ ಇಲ್ಲ, ಆದರೆ ಈ ಸರ್ಕಾರಿ ಜಾಗದಲ್ಲಿ ಅವರು ನರ್ಸರಿ ಮಾಡುವಂತಿಲ್ಲ, ಅವರ ವರ್ಗ ಜಾಗ­ದಲ್ಲಿ ಮಾಡುವುದಿದ್ದಲ್ಲಿ ಪರವಾನಗಿ ನೀಡ­ಬಹುದು’ ಎಂದು ಸದಸ್ಯರು ಒಕ್ಕೊರಲಿನಿಂದ ಹೇಳಿದರು.

ಅಲ್ಲಿ ಕಾರ್ಯಾಚರಿಸುತ್ತಿರುವ ನರ್ಸರಿಯನ್ನು ತಕ್ಷಣ ತೆರವು ಮಾಡುವುದಕ್ಕೆ ಕಂದಾಯ ಇಲಾಖೆಗೆ ಬರೆಯಬೇಕು, ಆ ಜಾಗವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಅದೆಷ್ಟೋ ಮಂದಿ ಮನೆ ನಿವೇಶನ ಇಲ್ಲದೆ ಸಮಸ್ಯೆಯಲ್ಲಿದ್ದಾರೆ. ಅಂತಹವರಿಗೆ ಕನಿಷ್ಠ 2 ಸೆಂಟ್ಸ್‌ನಂತೆ ಕೊಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು, ಈ ಬಗ್ಗೆ ಕಂದಾಯ ಇಲಾಖೆಯನ್ನು ಕೋರಿ ನಿರ್ಣಯ ಅಂಗೀಕರಿಸುವಂತೆ ಸೂಚಿಸಲಾಯಿತು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಪಂಚಾಯಿತಿ ನೀರು ಪಡೆಯುವ ಗಾಂಧಿ­ಪಾರ್ಕ್ ನಿವಾಸಿ ಅಬೂಬಕ್ಕರ್ ಎಂಬವರು ನೀರಿನ ಮೀಟರ್ ಅಳತೆ ಮಾಪನ ನೋಡಲು ಅಡ್ಡಿಪಡಿಸುತ್ತಿದ್ದಾರೆ. ಕಳೆದ 5 ವರ್ಷದಿಂದ ಈ ರೀತಿಯಾಗಿ ಅಡ್ಡಿ ಪಡಿಸುತ್ತಲೇ, ನೀರಿನ ಮೀಟರ್ ಅಳತೆ ನೋಡುವ ಬಿಲ್ ಕಲೆಕ್ಟರ್‌ಗೆ ಮನೆಯ ಹೆಂಗಸರ ಮೂಲಕ ಬೆದರಿಕೆ ಹಾಕುತ್ತಿದ್ದಾರೆ.

ನೀರಿನ ಬಿಲ್ ಸರಿಯಾಗಿ ಪಾವತಿಸದೆ ಸುಳ್ಳು ದೂರು ನೀಡುತ್ತಿದ್ದಾರೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ನೀರಿನ ಮೀಟರ್ ಸುಲಭ­ವಾಗಿ ನೋಡುವ ರೀತಿಯಲ್ಲಿ ಅಳವಡಿಸಬೇಕು, ಪಂಚಾಯಿತಿ ನೀರಿನ ನಿಯಮಾವಳಿ ಪ್ರಕಾರ ಪಾಲಿಸುವಂತೆ ಸೂಚಿಸಲಾಯಿತು. ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸಿದಲ್ಲಿ ಮುಂದೆ ನೀರಿನ ಸಂಪರ್ಕ ಕಡಿತ ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಜನಧನಕ್ಕೆ ಅಸಹಕಾರ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜನಧನ ಯೋಜನೆಗೆ ಇಲ್ಲಿನ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸಹಕಾರ ದೊರಕು­ತ್ತಿಲ್ಲ. ಅರ್ಹರು ಖಾತೆ ತೆರೆಯಲು ಬ್ಯಾಂಕ್ ಹೋದರೆ ಫಲಾನುಭವಿಯೊಂದಿಗೆ ತೀರಾ ಕ್ಷುಲ್ಲಕವಾಗಿ ಮಾತನಾಡಿ ತಿರಸ್ಕರಿಸಿ ಕಳುಹಿಸುತ್ತಾರೆ. ಇಲ್ಲಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವುದಕ್ಕೆ ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.

ಪಂಚಾಯಿತಿ ಉಪಾಧ್ಯಕ್ಷ ಗಂಗಾಧರ, ಸದಸ್ಯರುಗಳಾದ ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಕೆ. ಇಬ್ರಾಹಿಂ, ಅಬ್ಬಾಸ್ ಬಸ್ತಿಕ್ಕಾರ್, ಹರೀಶ್ ನಾಯಕ್, ರಾಮಚಂದ್ರ ಮಣಿಯಾಣಿ, ಪ್ರಶಾಂತ್ ಮಾತನಾಡಿದರು. ಸದಸ್ಯರುಗಳಾದ ಉಷಾ ನಾಯ್ಕ್, ಮಾಲತಿ, ರಾಧಾ, ರುಕ್ಮಿಣಿ, ಯೋಗಿನಿ, ಜಮೀಲ ಇದ್ದರು. ಪಿಡಿಒ ಅಬ್ದುಲ್ಲಾ ಅಶ್ರಫ್‌ ಸ್ವಾಗತಿಸಿ, ಕಾರ್ಯದರ್ಶಿ ಕೀರ್ತಿ ಪ್ರಸಾದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.