ADVERTISEMENT

ನೀರಿಗೆ ₹16.72 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 6:14 IST
Last Updated 7 ಏಪ್ರಿಲ್ 2017, 6:14 IST

ಮಂಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಸಮಸ್ಯೆ ಪರಿಹಾರಕ್ಕೆ ತುರ್ತು ಕಾಮಗಾ ರಿಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ₹16.72 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್‌ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ನೇತ್ರಾ ವತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರಿನ ಕೊರತೆ ಕುರಿತ ಚರ್ಚೆ ಸಂದರ್ಭದಲ್ಲಿ ಮಾತನಾ ಡಿದ ಅವರು, ‘ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಸಲು ಶಾಸಕರ ಅಧ್ಯಕ್ಷತೆಯ ಕಾರ್ಯ ಪಡೆಗಳಿಗೆ ₹ 9.72 ಕೋಟಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ₹ 7 ಕೋಟಿ ಬಿಡು ಗಡೆ ಮಾಡಲಾಗಿದೆ. ವಿಪತ್ತು ಪರಿಹಾರ ನಿಧಿಯ ಅನುದಾನವನ್ನೂ ತುರ್ತು ಅಗತ್ಯಗಳಿಗೆ ಬಳಸಿಕೊಳ್ಳಬಹುದು’ ಎಂದರು.

ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕುಗಳಲ್ಲಿ ಗ್ರಾಮೀಣ ಪ್ರದೇಶಗ ಳಲ್ಲಿ ತುರ್ತಾಗಿ ಕುಡಿಯುವ ನೀರು ಪೂರೈಸಲು ತಲಾ ₹40 ಲಕ್ಷ ಒದಗಿಸ ಲಾಗಿದೆ. ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕುಗಳಿಗೆ ತಲಾ ₹ 20 ಲಕ್ಷ ಅನುದಾನ ಬಿಡುಗಡೆ ಮಾಡಲಾ ಗಿದೆ. ತುರ್ತು ಸಂದರ್ಭಗಳು ಎದುರಾ ದರೆ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಲ್ಲಿರುವ ಹಣ ಬಳಸಿಕೊಳ್ಳುವು ದಕ್ಕೂ ಅವಕಾಶವಿದೆ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯ ಕೆಲವು ಭಾಗಗಳಲ್ಲಿ ಖಾಸಗಿ ಟ್ಯಾಂಕರ್‌ಗಳ ಮಾಲೀಕರು ದುಬಾರಿ ಬೆಲೆಗೆ ನೀರು ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ತಕ್ಷಣವೇ ಅದನ್ನು ನಿಯಂತ್ರಿಸಬೇಕು. ಯಾವುದೇ ಪ್ರದೇಶದಲ್ಲಿ ನೀರಿನ ಕೊರತೆ ಉಲ್ಬಣಿಸಿದರೆ ತಕ್ಷಣವೇ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಕೇವಲ ಹತ್ತು ಮನೆಗಳಿಗೆ ನೀರು ಲಭ್ಯವಿಲ್ಲ ಎಂಬ ಪರಿಸ್ಥಿತಿ ಇದ್ದರೂ ಟ್ಯಾಂಕರ್‌ ಮೂಲಕ ನೀರು ಪೂರೈಸು ವುದು ಕಡ್ಡಾಯ’ ಎಂದು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

12 ಗ್ರಾಮಗಳಲ್ಲಿ ಕೊರತೆ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಸ್ಥಿತಿ ಕುರಿತು ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್‌.ಆರ್‌.ಉಮೇಶ್, ‘ಹಿಂಗಾರು ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವಿಸಿದೆ. ಬರ ಪರಿಹಾರ ಕಾಮಗಾರಿ ಗಳಿಗಾಗಿ ₹ 22 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಕೆರೆಗಳ ಪುನರುಜ್ಜೀವನಕ್ಕೆ ₹ 15 ಕೋಟಿ ಕೋರ ಲಾಗಿದೆ. ಗ್ರಾಮೀಣ ಪ್ರದೇಶದ ಕುಡಿ ಯುವ ನೀರಿನ ಕಾರ್ಯಪಡೆಗಳಿಗೆ ₹ 9.5 ಕೋಟಿ ಅನುದಾನ ಒದಗಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಮಂಗಳೂರು ತಾಲ್ಲೂಕಿನ 12 ಗ್ರಾಮಗಳಲ್ಲಿ ನೀರಿನ ಕೊರತೆ ತೀವ್ರ ವಾಗಿದೆ. ಅಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸಮಸ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚು ನೀರು ಲಭ್ಯವಿರುವ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದು, ಅಗತ್ಯ ಕಂಡುಬಂದಲ್ಲಿ ಅವುಗಳನ್ನು ವಶಕ್ಕೆ ಪಡೆಯಲಾಗುವುದು. ಜಿಲ್ಲಾಧಿಕಾರಿಯ ವರು ಎಲ್ಲ ತಾಲ್ಲೂಕು ಪಂಚಾಯಿತಿಗಳಿಗೆ ತಲಾ ₹ 10 ಲಕ್ಷ ಅನುದಾನವನ್ನು ತುರ್ತು ಬಳಕೆಗಾಗಿ ನೀಡಿದ್ದಾರೆ. ನೀರಿನ ಕೊರತೆಯ ದೂರುಗಳಿಗೆ 24 ಗಂಟೆಗ ಳೊಳಗೆ ಪರಿಹಾರ ಒದಗಿಸಲಾಗುವುದು’ ಎಂದು ಹೇಳಿದರು.

‘ಮೂಲ್ಕಿ ಪಟ್ಟಣ ಪಂಚಾಯಿತಿಯ 12 ವಾರ್ಡ್‌ಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಪುತ್ತೂರು ನಗರಸಭೆಯ ಒಂದು ವಾರ್ಡ್‌ನಲ್ಲಿ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ. ಕೋಟೆಕಾರ್‌ ಮತ್ತು ವಿಟ್ಲ ಪಟ್ಟಣ ಪಂಚಾಯಿತಿಗಳಲ್ಲಿಯೂ ಸಮಸ್ಯೆ ಉಲ್ಬ ಣಿಸುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರು ಪೂರೈಕೆ ತುರ್ತು ಕಾಮಗಾರಿಗಳಿಗಾಗಿ ₹ 4.23 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾ ಗಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ ಮಾಹಿತಿ ನೀಡಿದರು.

ಮಂಗಳೂರು ನಗರದಲ್ಲಿನ ಕುಡಿ ಯುವ ನೀರು ಪೂರೈಕೆ ಸ್ಥಿತಿ ಕುರಿತು ವಿವರ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ‘ತುಂಬೆ ಅಣೆಕಟ್ಟೆಯಲ್ಲಿ 4.59 ಮೀಟರ್‌ ನೀರಿನ ಸಂಗ್ರಹವಿದೆ. ಎಎಂಆರ್‌ ಅಣೆ ಕಟ್ಟೆಯಲ್ಲೂ ಸಾಕಷ್ಟು ನೀರಿದೆ. ಈಗ ಮೂರು ದಿನ ನಿರಂತರವಾಗಿ ನೀರು ಪೂರೈಸಿ, ಎರಡು ದಿನ ಬಿಡುವು ಕೊಡಲಾಗುತ್ತಿದೆ. ನಗರದಲ್ಲಿನ ಕೊಳವೆ ಬಾವಿಗಳು ಮತ್ತು ತೆರೆದ ಬಾವಿಗಳನ್ನು ಸುಸ್ಥಿತಿಯಲ್ಲಿ ಇಡಲಾಗುತ್ತಿದೆ.  ಲಕ್ಯಾ ಅಣೆಕಟ್ಟೆಯಿಂದ ಪೂರೈಕೆಯಾಗುವ ನೀರನ್ನೂ ಬಳಸಿಕೊಳ್ಳಲಾಗುತ್ತಿದೆ. ಲಕ್ಯಾ ದಿಂದ ಮಂಗಳೂರಿಗೆ ಶಾಶ್ವತವಾಗಿ ನೀರು ತರುವ ಪ್ರಸ್ತಾವದ ಕುರಿತು ಸುಪ್ರೀಂಕೋರ್ಟ್‌ ಏಪ್ರಿಲ್‌ 30ರಂದು ಮಧ್ಯಂತರ ಆದೇಶ ನೀಡುವ ಸಾಧ್ಯತೆ ಇದೆ’ ಎಂದರು.

**

ಪರಿಹಾರದ ಭರವಸೆ
‘ತುಂಬೆ ಅಣೆಕಟ್ಟೆಯಲ್ಲಿ ಏಳು ಮೀಟರ್‌ ನೀರು ನಿಲ್ಲಿಸಿದಾಗ ಮುಳುಗಡೆ ಆಗುವ ಜಮೀನಿನ ಮಾಲೀಕರಿಗೆ ಬಾಡಿಗೆ ರೂಪದ ಪರಿಹಾರ ನೀಡಲು ರಾಜ್ಯ ಸರ್ಕಾರ ₹ 7 ಕೋಟಿ ಬಿಡುಗಡೆ ಮಾಡಿದೆ. ಅಣೆಕಟ್ಟೆಯನ್ನು ಎಂಟು ಮೀಟರ್‌ಗೆ ಎತ್ತರಿಸಿದಾಗ ಮುಳುಗಡೆ ಆಗುವ ಜಮೀನುಗಳಿಗೆ ಶಾಶ್ವತ ಪರಿಹಾರ ನೀಡಲು ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದು ಸಚಿವ ಬಿ.ರಮಾನಾಥ ರೈ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.