ADVERTISEMENT

ಮನೆಯೇ ಸಂಗ್ರಹಾಲಯ!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:26 IST
Last Updated 11 ಸೆಪ್ಟೆಂಬರ್ 2017, 9:26 IST
ತೀರದ ತುಡಿತ
ತೀರದ ತುಡಿತ   

‘ಈ ಪುಟ್ಟ ಮನೆಯನ್ನು ಸದ್ಯ ದಲ್ಲೇ ಮಿನಿ ಮ್ಯೂಸಿಯಂ ಆಗಿ ಮಾಡಿಬಿಡ್ತೇನೆ’ ಮೂವತ್ತರ ಹರಯದ ಯುವಕ ಶಿವಶಂಕರ ಭಟ್ಟರು ಅವರ ಮನೆಯ ಬೀರುವಿನಲ್ಲಿ, ಹಜಾರದಲ್ಲಿ, ದೇವರ ಕೋಣೆಯಲ್ಲಿ ಒಂದೊಂದಾಗಿ ಸೇರಿಕೊಳ್ಳುತ್ತಿರುವ ಹಳೆಯ ವಸ್ತುಗಳನ್ನು ತೋರಿಸುತ್ತ ಹೀಗೆ ಹೇಳುತ್ತಾರೆ. ವಸ್ತುಗಳನ್ನು ತಂದುಕೊಡುವಲ್ಲಿ ಅವರ ಅಕ್ಕ ಶಶಿರೇಖಾ ಭಟ್ ಕೂಡ ತಮ್ಮನಿಗೆ ಸಾಥ್ ನೀಡುತ್ತಿದ್ದಾರೆ.

ನಮ್ಮ ಜನಪದ ಸಂಸ್ಕೃತಿಯ ಭಾಗವಾಗಿದ್ದ ವಸ್ತು ವಿಶೇಷಗಳು ಬಹುತೇಕ ಮನೆಗಳಲ್ಲಿ ಮೂಲೆ ಸೇರಿವೆ. ಕೆಲವು ಗೆದ್ದಲು ತಿಂದು, ತುಕ್ಕು ಹಿಡಿದು ಹಾಳಾಗುತ್ತಿದ್ದರೂ ಮನೆಯವರಿಗೆ ಅದರ ಮೌಲ್ಯದ ಬಗೆಗೆ ಕಾಳಜಿಯೇ ಇಲ್ಲ. ಮನೆಯೊಳಗೆ ಒಂದಿಂಚು ಜಾಗ ಉಳಿಯದಿದ್ದರೂ ಸರಿ, ಈ ಬಗೆಯ ವಸ್ತುಗಳನ್ನು ಸಂಗ್ರಹಿಸಿ ತಂದು ಜೋಪಾನ ಮಾಡುತ್ತಿದ್ದೇನೆ ಎನ್ನುವ ಅವರ ಮನೆ ಈಗ ವೈವಿಧ್ಯಮಯ ಸಾಮಗ್ರಿಗಳಿಗೆ ಭದ್ರ ನೆಲೆಯಾಗುವ ಲಕ್ಷಣಗಳನ್ನು ತೋರಿಸುತ್ತಿದೆ.

ಬಂಟ್ವಾಳ ತಾಲ್ಲೂಕಿನ ಮಂಚಿಯ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ತನ್ನದೇ ಮನೆಯಲ್ಲಿ ಹೆಂಡತಿ, ಮಗು, ಹೆತ್ತವರ ಜೊತೆಗೆ ವಾಸಿಸುತ್ತಿರುವ ಭಟ್ಟರಿಗೆ ಕುಕ್ಕಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಉದ್ಯೋಗವಿದೆ. ಒಂದಿಷ್ಟು ಸಮಯ ಸಿಕ್ಕಿದರೆ ಸಾಕು, ಯಾರದೋ ಮನೆಗೆ ಭೇಟಿ ನೀಡಿ ಹಳೆಯ ವಸ್ತುಗಳಿದ್ದರೆ ಕೊಡುವಂತೆ ಮನವಿ ಮಾಡುತ್ತಾರೆ. ಕೆಲವು ಮಂದಿ ತಮ್ಮಲ್ಲಿರುವ ಸಾಮಗ್ರಿ ಉಳಿದುಕೊಳ್ಳಲಿ ಎಂದು ಕೊಡುತ್ತಾರಾದರೆ ಕೆಲ ವರು ಅದಕ್ಕೆ ಕಿಸೆಗೆಟುಕದ ಬೆಲೆ ಕೇಳುತ್ತಾರಂತೆ.

ADVERTISEMENT

ಅಂತಹ ಸಂದರ್ಭ ಕೊಳ್ಳುವುದಕ್ಕೆ ತಾನೇನೂ ಭಾರೀ ಶಕ್ತ ನಲ್ಲ. ಕಿಸೆಗೆಟುಕುವ ಬೆಲೆಗೆ ಕೊಟ್ಟರೆ ಕೊಳ್ಳುತ್ತೇನೆ, ಇಲ್ಲವಾದರೆ ಬಿಟ್ಟು ಬರುತ್ತೇನೆ ಎನ್ನುವ ಅವರು ಹಳೆಯ ಕಾಲದಲ್ಲಿ ಮಧುರವಾಗಿ ಹಾಡುಗಳನ್ನು ಕೇಳಿಸುತ್ತಿದ್ದ ಗ್ರಾಮಾಫೋನ್ ಒಂದಕ್ಕೆ ಐದೂವರೆ ಸಾವಿರ ರೂಪಾಯಿ ಕೊಡ ಬೇಕಾಯಿತಂತೆ. ಈಗಲೂ ಹಾಡಿನ ತಟ್ಟೆ ಕೊಟ್ಟರೆ ಅದು ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚಿ ನಮ್ಮೆದುರಿಗಿಡುತ್ತದೆ. ಬಿ. ಎಸ್. ರಾಜಯ್ಯಂಗಾರ್ಯರ ಜಗ ದೋದ್ಧಾರನ ಆಡಿಸಿದಳೆಶೋದೇ ಕೀರ್ತನೆಯನ್ನು ಸುಶ್ರಾವ್ಯವಾಗಿ ಕಿವಿಯೊ ಳಗೆರೆಯುತ್ತದೆ.

ಭಾರತದ ಸ್ವಾತಂತ್ರ್ಯ ಇತಿಹಾಸದ ಮಹತ್ವದ ಸಾಕ್ಷಿಯಾಗುವ ಕಬ್ಬಿಣದ ಚರಕದೊಂದಿಗೆ ಭಟ್ಟರ ಈ ಸಂಗ್ರಹ ಆರಂಭವಾಯಿತಂತೆ. ಸನಿಹದ ಪತ್ತುಮುಡಿಯಲ್ಲಿ ಖ್ಯಾತ ರಂಗ ನಿರ್ದೇಶಕ ಬಿ. ವಿ.ಕಾರಂತರ ಅಜ್ಜನ ಮನೆಯಿದೆ. ಅಲ್ಲಿ ಮೂಲೆಗುಂಪಾಗಿದ್ದ ನೂಲೆಳೆಯುವ ಚರಕವನ್ನು ನೀಡಿ ಮನೆಯವರು ಸಂಗ್ರಹ ಕಾರ್ಯಕ್ಕೆ ಶುಭ ಹಾರೈಸಿದರಂತೆ.

ಗಾಂಧೀಜಿಯ ನೆನಪು ಮೂಡಿಸುವ ಈ ಚರಕ ಮಾತ್ರವಲ್ಲ, ಒಂದೂವರೆ ಶತಮಾನ ಹಿಂದೆ ಅದರ ನೂಲಿನಿಂದ ಬಟ್ಟೆ ನೇಯುತ್ತಿದ್ದ ಕೈಮಗ್ಗದ ಯಂತ್ರವನ್ನೂ ಕೊಟ್ಟುಬಿಟ್ಟರಂತೆ. ಬಳಿಕ ಅವರ ಮನೆ ಯಲ್ಲಿ ಒಂದೊಂದಾಗಿ ಸಾಮಗ್ರಿಗಳು ಸೇರಿಕೊಳ್ಳುತ್ತಲೇ ಇವೆ. ಅವುಗಳ ಪಟ್ಟಿಯೂ ಬರೇ ಚಿಕ್ಕದಲ್ಲ. ಉಗಿ ಎಂಜಿನ್ ಮೂಲಕ ಓಡುತ್ತಿದ್ದ ರೈಲಿಗೆ ರಾತ್ರಿ ಸಂಕೇತ ನೀಡಲು ಬಳಕೆಯಾಗುತ್ತಿದ್ದ ಕೆಂಪು, ಹಸಿರು ವರ್ಣದ ದೀಪಗಳು ಉರಿಯುತ್ತಿದ್ದ ಲಾಟೀನು, ಹಾಗೆಯೇ ಎತ್ತಿನ ಗಾಡಿಗೆ ಕಟ್ಟುವ ಲಾಟೀನುಗಳಿವೆ. ಗೋಡೆ ಗಡಿಯಾರಗಳ ದೊಡ್ಡ ಸಾಲೇ ಇದ್ದು ಎಲ್ಲವೂ ಪೆಂಡುಲಂ ತೂಗಾಡಿಸುತ್ತ ಸಮಯ ಸಾರುತ್ತಿವೆ.

ಹಳೆ ಕ್ಯಾಮೆರಾ, ಟೇಪ್‌ರೆಕಾರ್ಡರ್, ಹಿತ್ತಾಳೆಯ ಫಿರಂಗಿಯ ಪ್ರತಿಕೃತಿ, ಗೋಲಿ ಸೋಡಾದ ಬಾಟಲಿ, ಹಿಂದಿನ ಕಾಲದ ದೂರವಾಣಿ, ತಾಂಬೂಲ ಉಗು ಳುವ ಪೀಕದಾನಿ, ಮೊಸರು ಮಥಿಸುವ ಮರದ ಕಡೆಗೋಲು ಇತ್ಯಾದಿಗಳಲ್ಲದೆ ಹತ್ತಾರು ದೇಶಗಳ ಕರೆನ್ಸಿ ನೋಟುಗಳು, ನಾಣ್ಯಗಳು ಇವೆ. ಭಾರತದ ಮುಕ್ಕಾಲು ಎಂಬ ತಾಮ್ರದ ನಾಣ್ಯಗಳೂ ಇದ ರಲ್ಲಿವೆ. ಇಂತಹ ಸಂಗ್ರಹಕ್ಕೆ ಶ್ರಮಿಸುವ ಭಟ್ಟರಿಗೆ ಮನೆಯನ್ನು ಮಿನಿ ಮ್ಯೂಸಿಯಂ ಮಾಡುವ ಬಯಕೆಯಿದ್ದು ಅದು ಈಡೇರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.