ADVERTISEMENT

ಯಕ್ಷಗಾನ ಸೇವೆಯಲ್ಲಿ ಭಕ್ತಿಯೇ ಪ್ರಧಾನ

ಯಕ್ಷಧ್ರುವ ಪಟ್ಲ ಸಂಭ್ರಮ ಉದ್ಘಾಟಿಸಿ ಆಸ್ರಣ್ಣರು

​ಪ್ರಜಾವಾಣಿ ವಾರ್ತೆ
Published 23 ಮೇ 2016, 5:49 IST
Last Updated 23 ಮೇ 2016, 5:49 IST

ಮಂಗಳೂರು: ಯಕ್ಷಗಾನ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಯಕ್ಷಧ್ರುವ ಪಟ್ಲ ಸಂಭ್ರಮ 2016 ಭಾನುವಾರ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ವೈವಿಧ್ಯಮಯವಾಗಿ ನಡೆಯಿತು.

ಸಮಾರಂಭದಲ್ಲಿ ಮುಖ್ಯವಾಗಿ ಕಲಾವಿದರ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ತುರ್ತು ಚಿಕಿತ್ಸೆಯ ನೆರವು ಮತ್ತು ದುರ್ಮರಣಕ್ಕೆ ಈಡಾದ ಕಲಾವಿದರ ಕುಟುಂಬಗಳಿಗೆ  ನೆರವು ವಿತರಿಸಲಾಯಿತು. ಇದರೊಂದಿಗೆ ಗಾನ ವೈಭವ, ತಾಳಮದ್ದಳೆ ಮತ್ತು ಯಕ್ಷಗಾನ ಪ್ರದರ್ಶನದೊಂದಿಗೆ ದಿನವಿಡೀ ಕಲಾ ಸಕ್ತರು ಮೆಚ್ಚುವ ಕಾರ್ಯಕ್ರಮಗಳು ನಗರದ ಪುರಭನವನದಲ್ಲಿ ನಡೆದವು.

ಪಟ್ಲ ಸಂಭ್ರಮವನ್ನು ಉದ್ಘಾಟಿಸಿದ ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ರಾದ ಹರಿನಾರಾಯಣದಾಸ ಅಸ್ರಣ್ಣರು,
ಯಕ್ಷಗಾನವು ಭಕ್ತಿ ರಸವನ್ನು ಉದ್ದೀಪಿಸಬೇಕೇ ಹೊರತು ಅಶ್ಲೀಲ ಹಾಸ್ಯದ ಮೂಲಕ ಜನಪ್ರಿಯತೆಯನ್ನು ಪಡೆಯುವ ಉದ್ದೇಶ ಹೊಂದಿರಬಾರದು ಎಂದು ಅವರು ಕಿವಿಮಾತು ಹೇಳಿದರು.

ಕಟೀಲು ಮೇಳವು ಭಕ್ತಿ ಪ್ರಧಾನವಾದ ಪ್ರಸಂಗಗಳನ್ನೇ ಆಡುತ್ತ ಬಂದಿದ್ದು, ಪರಂಪರೆಗೆ ಹೆಚ್ಚು ಒತ್ತು ನೀಡುತ್ತದೆ. ಆದ್ದರಿಂದ ಆಶ್ಲೀಲತೆಗಾಗಲೀ, ಯಕ್ಷಗಾನೀಯವಲ್ಲದ ಕುಣಿತಕ್ಕಾಗಲೀ ಅವಕಾಶ ನೀಡದೇ ಪ್ರೇಕ್ಷಕರ ಮನಸ್ಸನ್ನು ಭಗವಂತನತ್ತ ಕೊಂಡೊಯ್ಯುವ ಕೆಲಸ ವನ್ನು ಭಾಗವತರಾದವರು ಮಾಡಬೇಕು. ಸೇವೆಯ ಆಟದಲ್ಲಿ ಭಕ್ತಿಯೇ ಮುಖ್ಯವಾಗಬೇಕೇ ಹೊರತು ಅಶ್ಲೀಲತೆ ಅಥವಾ ಜನಪ್ರಿಯತೆ ಮುಖ್ಯವಾಗಬಾರದು. ಇಂತಹ ಪರಂಪರೆಯನ್ನು ಉಳಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಪಟ್ಲ ಸತೀಶ್‌ ಶೆಟ್ಟಿ ಅವರು ಸಮಾಜಮುಖಿಯಾಗಿ ನಡೆಸುವ ಕೆಲಸವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.

ಡಾ. ಶಾಂತಾರಾಮ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಾದದ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ ಕುಮಾರ್  ಕಲ್ಕೂರ, ಹರಿಕೃಷ್ಣ ಪುನರೂರು, ಬಲಿಪ ನಾರಾಯಣ ಭಾಗವತರು, ಸವಣೂರು ಸೀತಾರಾಮ ಶೆಟ್ಟಿ, ಎಂ.ಬಿ. ಪುರಾಣಿಕ್‌, ಎ. ಸದಾನಂದ ಶೆಟ್ಟಿ, ಐಕಳ ಗಣೇಶ್‌, ಡಾ. ಸತೀಶ್‌ ಭಂಡಾರಿ, ಡಾ. ಪದ್ಮನಾಭ ಕಾಮತ್‌, ರವಿಶೆಟ್ಟ ಮೂಡಂಬೈಲು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.