ADVERTISEMENT

ಯೋಗ -ಭೋಗ ಸಮನ್ವಯ ಸಾಧಿಸಿದ ಕೃತಿ ‘ಭರತೇಶ ವೈಭವ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2015, 5:55 IST
Last Updated 23 ಜನವರಿ 2015, 5:55 IST

ಕಾರ್ಕಳ: ಕಾರ್ಕಳದ ಭೈರವ ಅರಸರ ಆಸ್ಥಾನ ಕವಿಯಾಗಿ ಮೆರೆದ ಮಹಾಕವಿ, ಸಾಂಗತ್ಯ ಚಕ್ರವರ್ತಿ ಮೂಡುಬಿದಿರೆಯ ರತ್ನಾಕರ ವರ್ಣಿ ರಚಿಸಿದ ‘ಭರತೇಶ ವೈಭವ’ ಕೃತಿಯಲ್ಲಿ ಯೋಗ ಭೋಗ ಸಮನ್ವಯವನ್ನು ಸಾಧಿಸಿ ತೋರಿಸಿರು­ವುದು ನಮಗೆಲ್ಲ ಸದಾ ಜೀವನಸ್ಫೂರ್ತಿ­ಯನ್ನು ನೀಡುತ್ತದೆ. ಶೃಂಗಾರದಿಂದ ಆಧ್ಯಾತ್ಮಿಕ ಸುಖದ ವೈಭವದ ಸೊಗ­ಡನ್ನು ಈ ಅಪೂರ್ವ ಕೃತಿ ಪ್ರತಿಬಿಂಬಿ­ಸುತ್ತದೆ ಎಂದು ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.

ಕಾರ್ಕಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಗುರುವಾರ ಏರ್ಪಡಿಸಿದ ಮಹಾಕವಿ ರತ್ನಾಕರವರ್ಣಿ ಸಂಸ್ಮರಣೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

84 ಸಂಧಿಗಳಲ್ಲಿ 10,000 ಪದ್ಯಗಳನ್ನು ಹೊಂದಿರುವ ಭರತೇಶ ವೈಭವ ಕೃತಿಯನ್ನು ಓದುವುದಕ್ಕಿಂತಲೂ ಹಾಡಿ ಅದರ ರಸಗ್ರಹಣ ಮಾಡಬೇಕು. ಯೋಗ ಭೋಗ ಸಮನ್ವಯದ ಸಾಧನೆ ಮಾಡಿದ ರತ್ನಾಕರವರ್ಣಿ ಲೌಕಿಕ ಹಾಗೂ ಧಾರ್ಮಿಕ ಕೃತಿಗಳನ್ನು ರಚಿಸಿ ಖ್ಯಾತಿ ಪಡೆದಿರುವ ಮಹಾಕವಿ ಎಂದು ಅವರು ಬಣ್ಣಿಸಿದರು. ಸಂಸಾರದಲ್ಲಿದ್ದು­ಕೊಂಡೂ ಆಧ್ಯಾತ್ಮಿಕ ಸಾಧನೆ ಮಾಡಬಹುದು ಎಂದು ತೋರಿಸುವ ಕೃತಿ ಭರತೇಶ ವೈಭವ ಎಂದು ಮುನಿರಾಜ ರೆಂಜಾಳ ಹೇಳಿದರು.

ಈ ಮಹಾಕವಿಯ ಕೃತಿಗಳನ್ನು ನಾವು ಓದುವುದೇ ಅವರಿಗೆ ವ್ಯಕ್ತ ಪಡಿಸುವ ನಿಜವಾದ ಅಭಿಮಾನ, ಗೌರವ ಆಗಿದೆ ಎಂದು ಅವರು ತಿಳಿಸಿದರು.

ಕವಿ ಗೋಷ್ಠಿ: ಬಳಿಕ ನಡೆದ ಕವಿ ಗೋಷ್ಠಿ­ಯಲ್ಲಿ ಬೆಂಗಳೂರಿನ ಪಿ. ಜಯಲಕ್ಷ್ಮಿ ಅಧಿಕಾರಿ, ಮಂಗಳೂರಿನ ಎಂ.ವಿ ಶೆಟ್ಟಿ, ಗಣೇಶ್ ಪ್ರಸಾದ್ ಜಿ, ಜಿನೇಶ್ ನಲ್ಲೂರು, ನಿರ್ಮಲಾ ಕೃಷ್ಣರಾಜ ಮೂಡ­ಬಿದ್ರೆ, ಶ್ವೇತಾ ಜೈನ್ ದರೆಗುಡ್ಡೆ, ನಲ್ಲೂರು ಸುಭಾಶ್ಚಂದ್ರ ಜೈನ್, ಉಜಿರೆ ಸುಗುಣಾ ಎಸ್.ಡಿ ಶೆಟ್ಟಿ, ಜಯಕೀರ್ತಿ ಜೈನ್ ಹಿರಿಯಂಗಡಿ, ಜಿನೇಶ್ ಇರ್ವ­ತ್ತೂರು ಕವನ ವಾಚನ ಮಾಡಿದರು.

ಅಧ್ಯಕ್ಷತೆ ವಹಿಸಿದ ಪ್ರೊ. ನಾ’ಉಜಿರೆ ಸ್ವರಚಿತ ಕವನ ವಾಚಿಸಿ ತನ್ನ ಆಶಯ ವ್ಯಕ್ತ ಪಡಿಸಿದರು. ಕಾರ್ಕಳದ ಬಾಹುಬಲಿ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುವ ರಥೋತ್ಸವ ಸಂದರ್ಭದಲ್ಲಿ ಕವಿಗೋಷ್ಠಿ ಏರ್ಪಡಿಸಿ ಬಾಹುಬಲಿಗೆ ಕಾವ್ಯದ ರಸಾಭಿಷೇಕ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.