ADVERTISEMENT

‘ಲಾಭದಾಯಕ ಕೃಷಿಗೆ ಯೋಜನೆ ಅಗತ್ಯ’

ಬಂಟ್ವಾಳ: ತಾಲ್ಲೂಕು ಮಟ್ಟದ ‘ಕೃಷಿ ಉತ್ಸವ’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:47 IST
Last Updated 12 ಜನವರಿ 2017, 9:47 IST
ಬಂಟ್ವಾಳ: ‘ಕೃಷಿ ಭೂಮಿ ಹಸನುಗೊ ಳಿಸಿ ಸಮೃದ್ಧ ಫಸಲು ಪಡೆಯುವುದಕ್ಕಾಗಿ ಆಧುನಿಕ ಯಂತ್ರೋಪಕರಣ ಬಳಕೆ ಮತ್ತು ದೂರದೃಷ್ಟಿಯ ಯೋಜನೆ ಹಾಕಿ ಕೊಳ್ಳುವವನು ನಿಜವಾದ ರೈತನಾಗಲು ಸಾಧ್ಯವಿದೆ. ಇದರಿಂದಾಗಿ ಯುವಜನತೆಗೆ ಕೂಡಾ ತಾಳ್ಮೆ ಮತ್ತು ಸಹನೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಜತೆಗೆ ಪರಸ್ಪರ ಶ್ರಮ ವಿನಿಮಯ ಮತ್ತು ಆರೋಗ್ಯ ದಾಯಕ ಜೀವನ ನಡೆಸಲು ಸಾಧ್ಯವಾ ಗುತ್ತದೆ’ ಎಂದು ಧರ್ಮಸ್ಥಳ ಧರ್ಮಾಧಿ ಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
 
ಬಿ.ಸಿ.ರೋಡ್ ಸಮೀಪದ ಗಾಣದ ಪಡ್ಪುವಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ನಡೆದ ಎರಡು ದಿನಗಳ ತಾಲ್ಲೂಕು ಮಟ್ಟದ ‘ಕೃಷಿ ಉತ್ಸವ’  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಬಂಟ್ವಾಳ ತಾಲ್ಲೂಕಿನಲ್ಲಿ ಒಟ್ಟು 3,385 ಸ್ವಸಹಾಯ ಸಂಘಗಳು ಸಕ್ರಿಯ ವಾಗಿದ್ದು, ಎಲ್ಲವೂ ‘ಎ’ ಗ್ರೇಡ್‌ನಲ್ಲಿದೆ. ಒಟ್ಟು 44 ಮದ್ಯವರ್ಜನ ಶಿಬಿರ ನಡೆಸಿ ದುಶ್ಚಟಮುಕ್ತ ಸಮಾಜವಾಗಲು ಜನ ಜಾಗೃತಿ ಮೂಡಿಸಿದೆ. ಈಗಾಗಲೇ ಇಲ್ಲಿನ 3000 ಮಂದಿ ಸದಸ್ಯರು ಒಟ್ಟು 62 ದೇವಸ್ಥಾನಗಳಲ್ಲಿ ‘ಶ್ರದ್ಧಾಕೇಂದ್ರ ಶುಚಿತ್ವ’ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಂದು ತಿಳಿಸಿದರು.
 
ಮಾಣಿಲ ಮೋಹನದಾಸ ಪರಮ ಹಂಸ ಸ್ವಾಮಿಜಿ ಮಾತನಾಡಿ, ‘ಕೃಷಿ ಜೀವನ ಪದ್ಧತಿ ಜೊತೆಗೆ ಜಲ ಸಂರಕ್ಷಣೆ ಮತ್ತು ಅರಣ್ಯ ಸಂರಕ್ಷಣೆಗೂ ಒತ್ತು ನೀಡ ಬೇಕು. ಮಣ್ಣಿನ ಸಂಸ್ಕೃತಿ ಉಳಿಸುವ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯಿಂದ ಕೃಷಿ ಲಾಭದಾಯಕ ವಾಗಿಸಬಹುದು’ ಎಂದರು.
 
ಸಚಿವ ರಮಾನಾಥ ರೈ ಮಾತನಾಡಿ, ‘ಧರ್ಮಸ್ಥಳ ಯೋಜನೆ ಸಮಾಜದಲ್ಲಿ ಸ್ವಾವಲಂಬನೆ, ಸಾಮರಸ್ಯದ ಬದುಕಿಗೆ ಪೂರಕವಾಗಿ ಈ ಮಣ್ಣಿನ ಸಂಸ್ಕೃತಿ ಉಳಿಸುವ ಕೆಲಸ ನಡೆಸುತ್ತಿದೆ’ ಎಂದರು.
 
 ಸಂಸದ ನಳಿನ್ ಕುಮಾರ್ ಕಟೀಲು, ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಿ. ನಾಗರಾಜ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಗತಿಪರ ಕೃಷಿಕ  ರಾಜೇಶ ನಾಯ್ಕ್, ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಇದ್ದರು. ಸ್ಥಳ ದಾನಿ ಅಬ್ದುಲ್ ಅಝೀಝ್ ತುಂಬೆ ಮತ್ತು ದಾನಿ ಸಂಜೀವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
 
***
ಆಕರ್ಷಕ ಮೆರವಣಿಗೆ, ಗಮನ ಸೆಳೆದ ಕೀಲು ಕುದುರೆ
ಆರಂಭದಲ್ಲಿ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಬ್ಯಾಂಡು ವಾದ್ಯ, ಕೊಂಬು ಸಹಿತ ಕೀಲು ಕುದುರೆ ನೃತ್ಯ ಗಮನ ಸೆಳೆಯಿತು. ಪ್ರಮುಖರಾದ ಎ.ಸಿ.ಭಂಡಾರಿ, ಎನ್. ಪ್ರಕಾಶ್ ಕಾರಂತ, ಸುದರ್ಶನ್ ಜೈನ್, ಕೈಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ,  ಬೇಬಿ ಕುಂದರ್, ನಾರಾಯಣ ಹೆಗ್ಡೆ, ಎ. ರುಕ್ಮಯ ಪೂಜಾರಿ, ರವೀಂದ್ರ ಕಂಬಳಿ,  ಅರುಣ್ ಕುಮಾರ್ ಶೆಟ್ಟಿ ನುಲಿಯಾಲ್ ಗುತ್ತು, ಶ್ರೀನಿವಾಸ ಮೆಲ್ಕಾರ್ ಮತ್ತಿತರು ಪಾಲ್ಗೊಂಡಿದ್ದರು.
 
ತೆಂಗಿನ ಗರಿಗಳಿಂದಲೇ ನಿರ್ಮಿಸಿದ ಆಕರ್ಷಕ ಚಪ್ಪರ, ಸಭಾಂಗಣದ ಸುತ್ತಲೂ ಮಾವಿನ ಎಲೆ ಸಹಿತ ಅಡಿಕೆ ಮತ್ತು ತೆಂಗಿನ ಗರಿಗಳಿಂದ ಅಲಂಕಾರ, ಗಂಗೆಯನ್ನು ಜಟೆಯಲ್ಲಿ ಧರಿಸಿದ ಶಿವನ ವಿಗ್ರಹ, ಬೈಹುಲ್ಲಿನಿಂದಲೇ ರಚಿಸಿದ ಕೊಡಲಿ ಹಿಡಿದ ವಿಶ್ವಾಮಿತ್ರ, ಕಂಬಳ ಕೋಣಗಳ ಕನೆಹಲಗೆ ಓಟದ ಪ್ರಾತ್ಯಕ್ಷಿಕೆ, ಕುಲುಮೆ ಕುಟ್ಟುವ ಕರಕುಶಲ ಪ್ರದರ್ಶನ, ದೇವಸ್ಥಾನ ಮಾದರಿ ಗುಡಿ, ಹಣ್ಣಡಿಕೆಯಿಂದ ರಚಿಸಿದ ಸ್ವಾಗತ ಗೋಪುರ, ಪಂಚವಟಿ ಪರ್ಣಕುಟೀರ, ರಾಸುಗಳ ಹಟ್ಟಿ, ಏತ ನೀರಾವರಿ ಪ್ರಾತ್ಯಕ್ಷಿಕೆ, ಸಮವಸ್ತ್ರಧಾರಿ ಶಿಸ್ತುಬದ್ಧ ಸ್ವಯಂ ಸೇವಕರು, ಯಂತ್ರೋಪಕರಣ ಪ್ರಾತ್ಯಕ್ಷಿಕೆ, ಪುಸ್ತಕ, ಹೂಗಿಡ, ತರಕಾರಿ ಬೀಜ ಮಾರಾಟ ಗಮನ ಸೆಳೆಯಿತು.
 
***
ಕೃಷಿಯಲ್ಲಿ ಸೀಮಿತ ಆದಾಯ ಮತ್ತು ಅಸ್ಥಿರ ದರ ಪ್ರಕ್ರಿಯೆ ಇರುವ ಹಿನ್ನೆಲೆಯಲ್ಲಿ ರೈತರ ಖರ್ಚಿನಲ್ಲಿಯೂ ಹಿಡಿತ ಇರಬೇಕು.
-ಡಿ.ವೀರೇಂದ್ರ ಹೆಗ್ಗಡೆ 
ಧರ್ಮಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.