ADVERTISEMENT

ಲೋಪವೆಸಗಿದ ಗುತ್ತಿಗೆದಾರರಿಗೆ ನೋಟಿಸ್: ಶಾಸಕ

ಮರವಂತೆ ಹೊರಬಂದರು: ₹24 ಕೋಟಿ ಮಂಜೂರಿಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 9:45 IST
Last Updated 7 ಮಾರ್ಚ್ 2017, 9:45 IST

ಮರವಂತೆ (ಬೈಂದೂರು): ಮರವಂತೆಯ ಮೀನುಗಾರಿಕಾ ಹೊರಬಂದರು ಕಾಮಗಾರಿ ಪೂರ್ಣಗೊಳ್ಳಲು ವಿಧಿಸಿದ್ದ ಮೂರು ವರ್ಷಗಳ ಗಡುವು ಮುಗಿದಿದ್ದರೂ ಶೇ 40 ರಷ್ಟು ಕೆಲಸ ಇನ್ನೂ ಆಗಬೇಕಿದೆ. ಅದೂ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ಮೀನುಗಾರರಿಗೆ ಕೆಲವು ಸಮಸ್ಯೆಗಳಾಗಿವೆ.

ಲೋಪವೆಸಗಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬಂದರು ಪ್ರದೇಶದಲ್ಲಿ ಭಾನುವಾರ ಕಾಮಗಾರಿ ಪ್ರಗತಿ ಹಾಗೂ ಬೇಸಿಗೆಯಲ್ಲೂ ಎಗ್ಗಿಲ್ಲದೆ ನಡೆಯುತ್ತಿರುವ ಕಡಲ್ಕೊರೆತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದ ಬಳಿಕ ನಡೆದ ಮೀನುಗಾರರ ಸಭೆಯಲ್ಲಿ ಮಾತನಾಡಿದರು.

ಕಾಮಗಾರಿ ಮುಕ್ತಾಯಗೊಳ್ಳದ ಕಾರಣ ಬಂದರಿನ ಲಾಭ ದೊರೆಯುತ್ತಿಲ್ಲ. ಬಂದರಿನ ಪಶ್ಚಿಮದ ತಡೆಗೋಡೆ ಪೂರ್ಣಗೊಳ್ಳದಿರುವ ಕಾರಣ ಇಲ್ಲಿ ವರ್ಷವಿಡೀ  ಕಡಲ್ಕೊರೆತಕ್ಕೆ ಸಂಭವಿಸಿ ಜಮೀನು, ಮರಮಟ್ಟು, ಮೀನುಗಾರರ ವಿಶ್ರಾಂತಿ ಕೊಠಡಿ ಸಮುದ್ರ ಪಾಲಾಗಿವೆ.

ಮಳೆಗಾಲಕ್ಕೆ ಮುನ್ನ ಪರಿಹಾರ ಕಲ್ಪಿಸದಿದ್ದಲ್ಲಿ ಗಂಭೀರ ಸ್ವರೂಪದ ಅಪಾಯ ಖಚಿತ. ಗುತ್ತಿಗೆದಾರರು ಇಲ್ಲಿ ನಡೆಯುವ ಕಾಮಗಾರಿಯ ಜತೆಗೆ ಕೊಡೇರಿ ಬಂದರಿಗೆ ಅಗತ್ಯವಿರುವ ಟೆಟ್ರಾಪಾಡ್ ಮಿಶ್ರಣವನ್ನು ಇಲ್ಲಿ ಸಿದ್ಧಪಡಿಸಿ ಸಾಗಿಸುತ್ತಿದ್ದಾರೆ. ಅವರ ವಾಹನಗಳ ಓಡಾಟದಿಂದ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ ಎಂದು ಮೀನುಗಾರರು ದೂರಿದರು.

ADVERTISEMENT

ಸಭೆಯಲ್ಲಿದ್ದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ಆರ್. ದಯಾನಂದ್ ಅವರೊಂದಿಗೆ ಚರ್ಚಿಸಿದ ಶಾಸಕರು, ಕಾಮಗಾರಿಯ ವೇಗ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಬಂದರಿನ ಎರಡನೇ ಹಂತದ ಕಾಮಗಾರಿಗೆ ಅಗತ್ಯವಿರುವ ₹ 24 ಕೋಟಿಯ ಪ್ರಸ್ತಾವನೆಗೆ ಶೀಘ್ರ ಸಚಿವ ಸಂಪುಟದ ಮಂಜೂರಾತಿ ಪಡೆಯಲಾಗುವುದು.

ಇಲ್ಲಿ ₹ 5 ಕೋಟಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳುವುದರ ಜತೆಗೆ ತಕ್ಷಣ ತಾತ್ಕಾಲಿಕ ತಡೆಗೋಡೆ ರಚನೆಗೆ ಚಾಲನೆ ನೀಡಲಾಗುವುದು. ಇಲ್ಲಿನ ರಸ್ತೆಯನ್ನು ಪ್ರವಾಸೋದ್ಯಮ ನಿಧಿಯಿಂದ ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು. ಸದ್ಯ ಟಾರು ಹಾಕಿ ಸಂಚಾರ ಯೋಗ್ಯಗೊಳಿಸಲಾಗುವುದು ಎಂದು ಭರವಸೆಯಿತ್ತರು. 

ಮೀನುಗಾರಿಕಾ ದೋಣಿ ಹೊಂದಲು ಬೇಡಿಕೆ ಸಲ್ಲಿಸಿದ ಎಲ್ಲರಿಗೆ ಕಾರ್ಯ ಸಾಧ್ಯತಾ ಪತ್ರ ನೀಡಲಾಗುವುದು. ಬೈಂದೂರು ಕ್ಷೇತ್ರಕ್ಕೆ ಮಂಜೂರಾದ 250 ಮತ್ಸ್ಯಾಶ್ರಯ ಮನೆಗಳಲ್ಲಿ 20 ಮರವಂತೆಯ ಮೀನುಗಾರರಿಗೆ ಸಿಗಲಿದೆ ಎಂದು ಹೇಳಿದರು. ಮೀನುಗಾರರ ಸೇವಾ ಸಮಿತಿಯ ಮಾಜಿ ಕಾರ್ಯದರ್ಶಿ ಶ್ರೀಧರ ಖಾರ್ವಿ ಸ್ವಾಗತಿಸಿ ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಸ್ಥಳದ ಸ್ಥಿತಿಗತಿಯನ್ನು ವಿವರಿಸಿದರು.

ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ರಘುರಾಮ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್, ಮಾಜಿ ಸದಸ್ಯರಾದ ಮೋಹನ ಖಾರ್ವಿ, ರಾಮಕೃಷ್ಣ ಖಾರ್ವಿ, ಗುತ್ತಿಗೆದಾರ ಗೋಕುಲ ಶೆಟ್ಟಿ, ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ವೆಂಕಟರಮಣ ಖಾರ್ವಿ, ಮಾಜಿ ಅಧ್ಯಕ್ಷರಾದ ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ, ಎಂಜಿನಿಯರ್ ವಿಜಯ ಶೆಟ್ಟಿ, ಡಯಾಸ್ ಇದ್ದರು. ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಪ್ರಯುಕ್ತ ಶಾಸಕರನ್ನು ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

* ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಕೃತಕ ಕಡಲ್ಕೊರೆತ ತಡೆಗೆ ₹ 5 ಕೋಟಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲಾಗುವುದು.
ಕೆ. ಗೋಪಾಲ ಪೂಜಾರಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.