ADVERTISEMENT

ವಾರಾಹಿ ಯೋಜನೆ ಪೂರ್ಣಗೊಳಿಸಲು ಸೂಚನೆ

ಕುಂದಾಪುರ ತಾಲ್ಲೂಕು ಕೆಡಿಪಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 7:01 IST
Last Updated 26 ನವೆಂಬರ್ 2014, 7:01 IST

ಕುಂದಾಪುರ: ತಾ.ಪಂ ಸಭೆಗೆ ಹಾಜರಾಗದ ವಾರಾಹಿ ಇಲಾಖಾ ಅಧಿಕಾರಿಗಳಿಗೆ ನೋಟಿಸ್‌ ನೀಡಲು ಹಾಗೂ ವಾರಾಹಿ ಯೋಜನೆ ಶೀಘ್ರಗತಿಯಲ್ಲಿ ಪೂರ್ಣ­ಗೊಳಿಸಲು ಸೋಮವಾರ ನಡೆದ ತಾಲ್ಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಸಚಿವ ವಿನಯಕುಮಾರ್‌ ಸೊರಕೆ ಸೂಚಿಸಿದರು.

ತಾ.ಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಾಸ್ತಾಪ ಮಾಡಿದ ತಾ.ಪಂ ಅಧ್ಯಕ್ಷ ಭಾಸ್ಕರ್ ಬಿಲ್ಲವ ಅವರು, ವಾರಾಹಿ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸಭೆಗೆ ಹಾಜರಾಗುವಂತೆ ಅನೇಕ ಬಾರಿ ನೋಟಿಸು ನೀಡಿದ್ದರೂ, ವಾರಾಹಿ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರು ತಾ.ಪಂ ಹಾಗೂ ಜಿ.ಪಂ ಗಳ ನೇರ ವ್ಯಾಪ್ತಿಗೆ ಸಂಬಂಧಿಸಿದ ಇಲಾಖಾ ಆಧಿಕಾರಿಗಳಿಗೆ ಮಾತ್ರ ಸಭೆಗೆ ಹಾಜರಾಗಲು ಅವಕಾಶವಿದೆ. ಬೃಹತ್ ನೀರಾವರಿ ರಾಜ್ಯ ಮಟ್ಟಕ್ಕೆ ಸಂಬಂಧಿಸಿದ ಇಲಾಖೆ­ಯಾ­ಗಿ­ರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಕರೆದ ಸಭೆಯಲ್ಲಿ ಅವರು ಹಾಜರಿರಬೇಕು ಎಂದು ಸಮಜಾಯಿಷಿ ನೀಡಿದರು.

ಡಿಸೆಂಬರ್ ಅಂತ್ಯದ ವೇಳೆಯಲ್ಲಿ ವರಾಹಿ ಕಾಲುವೆಗಳಲ್ಲಿ ನೀರು ಹರಿಸುತ್ತೇವೆ ಎನ್ನುವ ಹೇಳಿಕೆಗೆ ಇಲಾಖೆ ಬದ್ದವಾಗಿದೆಯೇ ಎನ್ನುವ ಪ್ರತಾಪ್‌ಚಂದ್ರ ಶೆಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ವಾರಾಹಿ ಅಧಿಕಾರಿ ನಟರಾಜ್ ಅವರು, ಡಿಸೆಂಬರ್ ಒಳಗೆ ಬಲ ದಂಡೆ ಯೋಜನಾ ಪ್ರದೇಶ ಸೇರಿದಂತೆ ಪ್ರಮುಖ ಕಾಲುವೆಗಳಲ್ಲಿ ನೀರು ಹರಿಸಬೇಕು ಎನ್ನುವ ಉದ್ದೇಶವಿದ್ದರೂ, ಕೆಲವೊಂದು ತಾಂತ್ರಿಕ ಕಾರಣಗ­ಳಿಂದಾಗಿ ತೊಡಕಾಗುತ್ತಿದೆ ಎಂದರು.

ಆಧಿಕಾರಿಗಳ ಉತ್ತರಕ್ಕೆ ಆಕ್ರೋಶಗೊಂಡ ಸಚಿವರು  ಹಾಗೂ ವಿಧಾನಪರಿಷತ್ ಸದಸ್ಯರು, ಕಳೆದ 35 ವರ್ಷಗಳಿಂದ ಇದೆ ರೀತಿ ಸಬೂಬು ಹೇಳಿ ಸರ್ಕಾರವನ್ನು ಹಾಗೂ ಜನರನ್ನು ದಾರಿ ತಪ್ಪಿಸುತ್ತಿ­ದ್ದೀರಿ. ಶೀಘ್ರಗತಿಯಲ್ಲಿ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಳೆದ 2 ಆರ್ಥಿಕ ವರ್ಷದಿಂದ ತಾ.ಪಂ ಗೆ ಬಂದಿರುವ ಅನುದಾನದ ಬಳಕೆಯಾಗದೆ ಉಳಿದಿ­ರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಬಾಕಿ ಉಳಿದಿರುವ ಹಾಗೂ ಪ್ರಗತಿ ಆರ್ಥಿಕ ವರ್ಷದ ಅನುದಾನಗಳನ್ನು ಮಾರ್ಚ್‌ ತಿಂಗಳ ಮೊದಲೇ ಖರ್ಚು ಮಾಡುವಂತೆ ಸೂಚಿಸಿದರು.

ಕುಂದಾಪುರ ಪುರಸಭೆಯಲ್ಲಿ ನಿರ್ಮಾಣಗೊಳ್ಳಲಿ­ರುವ ಅಂದಾಜು ₨ 48 ಕೋಟಿಯ ಒಳಚರಂಡಿ ಯೋಜನೆ ಟೆಂಡರ್ ಹಂತದಲ್ಲಿದ್ದು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಭೂಸ್ವಾಧೀನ ನಡೆಸಿ ಹಾಗೂ ಆದಷ್ಟು ಜಾಗದ ಮಾಲೀಕರೊಂದಿಗೆ ನೇರ ಮಾತುಕತೆ ನಡೆಸಿ ಪರಿಹಾರ ನೀಡಿ ಸ್ವಾಧೀನ ಪ್ರಕ್ರಿಯೆ ಪೂರೈಸುವಂತೆ ಸಚಿವರು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅವರು ಕೆಡಿಪಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾಗಳನ್ನು ಮುಂದಿನ ಸಭೆಯಲ್ಲಿ ಪರಾಮರ್ಶೆಗೆ ಒಳಪಡಿಸಲಾಗುತ್ತದೆ. ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ­ಹಣಾಧಿಕಾರಿ ಕನಗವಲ್ಲಿ, ಉಪವಿಭಾಗಾಧಿಕಾರಿ ಚಾರುಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.