ADVERTISEMENT

ವಿಚಿತ್ರ ಅಲೆಮಾರಿಗೆ ಕುಟುಂಬದ ಮರುಮಿಲನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:54 IST
Last Updated 23 ಏಪ್ರಿಲ್ 2017, 9:54 IST

ವಿಟ್ಲ: ಗಡ್ಡ, ಕೂದಲು ಬಿಟ್ಟು ಭಿಕ್ಷುಕ ನಂತೆ ಸುತ್ತಾಡುತ್ತಿದ್ದ ವಿಚಿತ್ರ ರೂಪ ತಾಳಿದ್ದ ವ್ಯಕ್ತಿಯೊಬ್ಬರನ್ನು ಗಮನಿಸಿದ ಸ್ಥಳೀಯ ಯುವಕರ ತಂಡ ಆತನನ್ನು ಸ್ನಾನ ಮಾಡಿಸಿ ಮನುಷ್ಯ ರೂಪ ಕೊಟ್ಟು ಮಾಮೂಲಿ ಮನುಷ್ಯನಂತೆ ಮಾಡಿ ಆತನ ಹೆತ್ತವರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ನಡೆದಿದೆ. ಒಡಿಶಾ ರಾಜ್ಯದ ಪುರಿ ಜಿಲ್ಲೆಯ ನಿವಾಸಿ ರಘು ಬಡಜನ್ (50) ಮರಳಿ ಕುಟುಂಬ ಸೇರಿದವರು. ಇವರ ವಿಟ್ಲ, ಮಂಗಳಪದವು ಮೊದಲಾದ ಕಡೆಗಳಲ್ಲಿ ತಲೆ ತುಂಬ ಕೂದಲು, ಗಡ್ಡ ಬಿಟ್ಟು, ರಸ್ತೆಯಲ್ಲಿ ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಸುತ್ತಾಡುತ್ತಿದ್ದುದಲ್ಲದೆ, ಕೊಳೆಚೆ ನೀರು ಕುಡಿಯುತ್ತಾ ತನ್ನ ಬಾಯಾರಿಕೆ ನೀಗಿಸುತ್ತಿದ್ದರು. ಇವರು ಭಿಕ್ಷುಕ ಆಗಿರುಬಹುದೆಂದು ಹಲವು ಮಂದಿ ಊಹಿಸಿದ್ದರು.

ಒಂದು ದಿನ ಇವರು ಒಕ್ಕೆತ್ತೂರು ಪ್ರದೇಶಕ್ಕೆ ಬಂದಿರುವುದನ್ನು ಗಮನಿಸಿದ ವಿಟ್ಲದ ಒಕ್ಕೆತ್ತೂರು ಯುವಕರು ಅವರನ್ನು ಹೊಳೆಗೆ ಕರೆದುಕೊಂಡು  ಹೋಗಿ ಸ್ನಾನಮಾಡಿಸಿದರು. ಒಕ್ಕೆ ತ್ತೂರು ಪೇಟೆಯಲ್ಲಿರುವ ಸೆಲೂನ್‌ನಲ್ಲಿ ಕೂದಲು, ಗಡ್ಡ ತೆಗೆಸಿದರು. ಅವರಿಗೆ ಒಳ್ಳೆಯ ಬಟ್ಟೆ ಬರೆಗಳನ್ನು ತೊಡಿಸಿದ್ದ ಲ್ಲದೇ ಊಟ ಉಪಚಾರಗಳನ್ನು ನೀಡಿದರು.  ಯುವಕರು ಆತನ ವಿವರ ಕೇಳಿದಾಗ ಒರಿಯಾ ಭಾಷೆಯಲ್ಲಿ ಮಾತನಾಡುತ್ತಿದ್ದು, ಇದು ಅವರಿಗೆ ಅರ್ಥವಾಗದ ಕಾರಣ ಅವರ ವಿವರ ಪಡೆಯಲು ಸಾಧ್ಯವಾಗಿರಲಿಲ್ಲ.

ಒಕ್ಕೆತ್ತೂರು ಸಮೀಪದ ಅಡಿಕೆ ಗಾರ್ಬಲ್ ಒಂದರಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬರು ಕೆಲಸ ಮಾಡುತ್ತಿರು ವುದು ಅವರ ಗಮನಕ್ಕೆ ಬಂದಿದೆ. ಅವರ ಮೂಲಕ ರಘನನ್ನು ಮಾತನಾಡಿಸಿದಾಗ ಕುಟುಂಬದ ಮಾಹಿತಿ ದೊರೆಯಿತು. ಅವರಿಗೆ ವಿವಾಹವಾಗಿದ್ದು, ಎರಡು ಮಕ್ಕಳು ಇದ್ದಾರೆ. ಎಂಟು ತಿಂಗಳ ಹಿಂದೆ ಮನೆಯಿಂದ ಹೋದವರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಒಡಿಶಾದ ದಲಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ADVERTISEMENT

ರಘು ಅವರ ಪುತ್ರ ನಿಬಾಸ್ ಹಾಗೂ ಅವರ ಭಾವ ರಘುನಾಥ ಪಾಹಡ್‍ಸಿಂಗ್ ಅವರು ಒಡಿಶಾದಿಂದ ಬಂದರು. ಎಂಟು ತಿಂಗಳುಗಳಿಂದ ಕಣ್ಮರೆಯಾಗಿದ್ದ ರಘನನ್ನು ನೋಡಿದಾಗ ಅವರು ಆನಂದ ಮುಗಿಲು ಮುಟ್ಟಿತ್ತು. ಸ್ಥಳೀಯ ಯುವಕರು ತಮ್ಮ ಸಹಪಾಠಿಗಳಿಂದ ಸಂಗ್ರಹ ಮಾಡಲಾದ ಹಣ, ಬಟ್ಟೆ ಬರೆ, ತಿಂಡಿ ತಿನಿಸುಗಳನ್ನು ನೀಡಿ ಊರಿಗೆ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.