ADVERTISEMENT

ವ್ಯವಸ್ಥಿತವಾಗಿ ನಡೆಯಲಿದೆ ಮಂಗಳೂರು ದಸರಾ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:29 IST
Last Updated 18 ಸೆಪ್ಟೆಂಬರ್ 2017, 9:29 IST
ಮಂಗಳೂರು ದಸರಾ ಕುರಿತು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಮಂಗಳೂರು ದಸರಾ ಕುರಿತು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.   

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣ ನಾಥ ದೇವಳದಲ್ಲಿ ವರ್ಷದಿಂದ ವರ್ಷಕ್ಕೆ ವೈಭವವನ್ನು ಹೆಚ್ಚಿಸಿಕೊಂಡು ದೇಶ-ವಿದೇಶಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮಂಗಳೂರು ದಸರಾ ಮಹೋತ್ಸವವನ್ನು ಮತ್ತಷ್ಟು ವ್ಯವಸ್ಥಿ ತವಾಗಿ ನಡೆಸುವ ಉದ್ದೇಶದಿಂದ ಇತ್ತೀಚೆಗೆ ನಾನಾ ಸಮಿತಿಗಳನ್ನು ರಚಿಸಲಾಯಿತು.

ದೇವಳದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ದೇವಳದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ದೇವಳದ ವಕ್ತಾರ ಹರಿಕೃಷ್ಣ ಬಂಟ್ವಾಳ, ‘ಮಂಗಳೂರು ದಸರಾ ಮಹೋತ್ಸವ ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗದೆ ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯೂ ನಿರೀಕ್ಷೆ ಮೀರಿ ಪ್ರವಾಸಿಗರು ಬರುವ ಸಾಧ್ಯತೆಯಿರುವುದರಿಂದ ವ್ಯವಸ್ಥೆ ದೃಷ್ಟಿಯಿಂದ ನಾನಾ ಸಮಿತಿಗಳನ್ನು ರಚಿಸಲಾಗುವುದು’ ಎಂದು ಹೇಳಿದರು.

ಕೋಶಾಧಿಕಾರಿ ಪದ್ಮರಾಜ್ ಕೆ. ಮಾತನಾಡಿ, ‘ದಸರಾ ಮಹೋತ್ಸವ ಕಾರ್ಯಕ್ರಮ ಮತ್ತಷ್ಟು ಶಿಸ್ತುಬದ್ಧ, ಅಚ್ಚುಕಟ್ಟಾಗಿ ನಡೆಸುವ ದೃಷ್ಟಿಯಿಂದ ಸಮಿತಿ ಸ್ವಾಗತ ಸಮಿತಿ, ವೈದಿಕ ಸಮಿತಿ, ಅನ್ನಸಂತರ್ಪಣಾ ಸಮಿತಿ, ಪ್ರಸಾದ ವಿತರಣಾ ಸಮಿತಿ, ಭದ್ರತಾ ಸಮಿತಿ, ಪಾರ್ಕಿಂಗ್ ಸಮಿತಿ, ಸುರಕ್ಷತಾ ಸಮಿತಿ, ಸೇವಾ ಕೌಂಟರ್ ಸಮಿತಿ, ಪ್ರಚಾರ ಸಮಿತಿ, ಬೆಳಕು ನಿರ್ವಹಣಾ ಸಮಿತಿ, ಮೆರವಣಿಗೆ ಸಮಿತಿ ಸೇರಿದಂತೆ ನಾನಾ ಸಮಿತಿ ರಚಿಸಲಾಗಿದೆ’ಎಂದರು. ಈ ಸಂದರ್ಭ ಮಂಗಳೂರು ದಸರಾ ಮಹೋತ್ಸವ ಸಿದ್ಧತೆಗಳು, ಮೆರವಣಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆ ವ್ಯಕ್ತವಾದವು.

ADVERTISEMENT

ರಸ್ತೆ ಡಾಂಬರೀಕರಣಕ್ಕೆ ಆಗ್ರಹ: ದಸರಾ ಮೆರವಣಿಗೆ ಹಾದು ಹೋಗುವ ರಸ್ತೆ ಸೇರಿದಂತೆ ಕೆಟ್ಟು ಹೋದ ರಸ್ತೆ, ಚರಂಡಿಗಳನ್ನು ರಿಪೇರಿ ಮಾಡಲು ಮಹಾನಗರ ಪಾಲಿಕೆ ಆಡಳಿತಕ್ಕೆ ಮನವಿ ಮಾಡುವಂತೆ ಆಗ್ರಹ ಕೇಳಿ ಬಂತು.

ಈ ಬಗ್ಗೆ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿ, ‘ಮೇಯರ್ ಕವಿತಾ ಸನಿಲ್ ಕ್ಷೇತ್ರಕ್ಕೆ ಭೇಟಿ ನೀಡಿದ್ದು ದಸರಾ ಆರಂಭಗೊಳ್ಳುವ ಮುನ್ನ ನಗರದಲ್ಲಿ ಕೆಟ್ಟು ಹೋದ ಪ್ರಮುಖ ರಸ್ತೆಗಳನ್ನು ರಿಪೇರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಪಾಲಿಕೆ ಸದಸ್ಯರಾದ ರಾಧಾಕೃಷ್ಣ, ದೀಪಕ್ ಪೂಜಾರಿ ಮುತುವರ್ಜಿವಹಿಸಲಿದ್ದಾರೆ’ ಎಂದರು.
ವೇದಿಕೆಯಲ್ಲಿ ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ಡಾ. ಅನಸೂಯ, ಪಾಲಿಕೆ ಸದಸ್ಯರಾದ ರಾಧಾಕೃಷ್ಣ, ದೀಪಕ್ ಕೋಟ್ಯಾನ್, ಲೀಲಾಕ್ಷ ಕರ್ಕೇರಾ, ದಿನೇಶ್ ರಾಜ್ ಅಂಚನ್, ಡಿ.ಡಿ. ಕಟ್ಟೆಮಾರ್ ಹಾಗೂ ದೇವಸ್ಥಾನ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.