ADVERTISEMENT

ಸಂತೆ ವ್ಯವಸ್ಥೆ, ಹಿರಿಯರ ಬಳುವಳಿ: ಕೋಟ

ಇತಿಹಾಸ ಪ್ರಸಿದ್ಧ ಕೋಟ ಸಂತೆಗೆ ಮರುಚಾಲನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2016, 6:33 IST
Last Updated 30 ಡಿಸೆಂಬರ್ 2016, 6:33 IST

ಕೋಟ(ಬ್ರಹ್ಮಾವರ): 20 ವರ್ಷಕ್ಕೂ ಹಿಂದೆ ನಿಂತು ಹೋಗಿದ್ದ ಇತಿಹಾಸ ಪ್ರಸಿದ್ಧ ಕೋಟ ಸಂತೆಗೆ ಗುರುವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧಿಕೃತವಾಗಿ ಚಾಲನೆ ನೀಡಿದರು.

ಕೋಟ ಗ್ರಾಮ ಪಂಚಾಯಿತಿ ವತಿಯಿಂದ ₹ 1.85 ಲಕ್ಷ ಮತ್ತು ಕೋಟ ಜನತಾ ಫಿಶ್‌ ಮಿಲ್‌ ಮತ್ತು ಆಯಿಲ್‌ ಪ್ರೊಡಕ್ಟ್ಸ್‌ನ ಮಾಲೀಕ ಆನಂದ್ ಸಿ. ಕುಂದರ್ ಅವರ ದೇಣಿಗೆ ₹ 2 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಈ ನೂತನ ಮಾರುಕಟ್ಟೆಯಲ್ಲಿ ಉದ್ಘಾಟಿಸಿ ಮಾತನಾಡಿದ ಸಚಿವರು, ಸಂತೆ ಯಾವುದೇ ಸರ್ಕಾರ ತಂದ ವ್ಯವಸ್ಥೆ ಅಲ್ಲ.

ಶತಮಾನಗಳಿಂದ ಬಳುವಳಿಯಾಗಿ ಬಂದ ಕೊಡುಗೆ. ಮಧ್ಯವರ್ತಿಗಳ ಕಾಟ ಇಲ್ಲದೇ, ಬೆಳೆಗಾರ ಮತ್ತು ಗ್ರಾಹಕರ ಮಧ್ಯೆ ನೇರವಾಗಿ ಕೊಡುಕೊಳ್ಳುವ ವ್ಯವಹಾರ ಆಗುವುದರಿಂದ ಯಾವುದೇ ಅವ್ಯವಹಾರ ಇಲ್ಲಿ ಆಗುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ವ್ಯಾಪಾರ ಮಳಿಗೆಗೆ ಚಾಲನೆ ನೀಡಿ, ನಮ್ಮ ಹಿರಿಯ ತಲೆಮಾರಿನಿಂದ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದ ಈ ಸಂತೆ ಕಾಲ ಕ್ರಮೇಣ ನಶಿಸಿ ಹೋಗಿದ್ದು ಬೇಸರದ ಸಂಗತಿ. ಅಂದು ವೈಭವೀಕರಿಸಿದ ಸಂತೆ ಇಂದು ಮರಳಿ ಜನೋತ್ಸಾಹಕ್ಕೆ ವೇದಿಕೆಯಾಗಿದ್ದು ಗ್ರಾಮೀಣ ಭಾಗಕ್ಕೆ ಅಭಿವೃದ್ಧಿಗೆ ನಾಂದಿಯಾಗಿದೆ ಎಂದು ಹೇಳಿದರು.

ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಶ್ರೀಧರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಅರುಣ್ ಕುಮಾರ್ ಶೆಟ್ಟಿ, ಕೋಟ ಸಿ.ಎ ಬ್ಯಾಂಕಿನ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ ಪೂಜಾರಿ, ಪ್ರಮುಖರಾದ ಸುನೀತಾ ರಾಜಾರಾಂ, ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹಂದೆ, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಪಾಂಡೇಶ್ವರ ಪಂಚಾಯಿತಿ ಅಧ್ಯಕ್ಷ ಗೋವಿಂದ ಪೂಜಾರಿ, ಪಿಡಿಒ ಜ್ಯೋತಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.