ADVERTISEMENT

‘ಸಚಿವ ರೈ ವಿರುದ್ಧ ದೂರು: ಪರಿಶೀಲಿಸಿ ವಿಚಾರಣೆ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 5:28 IST
Last Updated 18 ನವೆಂಬರ್ 2017, 5:28 IST
ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ
ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಬಂಟ್ವಾಳದ ಮಾಣಿ ಮತ್ತು ಕಳ್ಳಿಗೆ ಗ್ರಾಮದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ದೂರಿನಲ್ಲಿ ಸತ್ಯಾಂಶದ ಬಗ್ಗೆ ಪರಿಶೀಲಿಸಿ ವಿಚಾರಣೆಗೆ ಸ್ವೀಕರಿಸ ಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರ ಮದಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್‌ ಸಚಿವರ ವಿರುದ್ಧ ದೂರು ನೀಡಿದ ಬಳಿಕ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಯಿತು.

‘ಸಚಿವರು ಮಾಣಿ ಗ್ರಾಮದಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ನಿಗದಿತ ಮಿತಿಗಿಂತ ಅಧಿಕ ಆದಾಯ ಹೊಂದಿರುವ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಪತ್ನಿ ಹೆಸರಿನಲ್ಲಿ ಭೂಮಿ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು’ ಎಂದು ದೂರು ನೀಡಿದ್ದರು.

ADVERTISEMENT

ಕಳ್ಳಿಗೆ ಗ್ರಾಮ ಪೋಡಿ ಮುಕ್ತ ಗ್ರಾಮವೆಂದು ಘೋಷಣೆಯಾದರೂ ಆದೇಶ ಪತ್ರದಲ್ಲಿ ಸಚಿವ ರೈ ಅವರ ರಬ್ಬರ್ ತೋಟ ಇರುವ ಭೂಮಿಯ ವಿವರ ಇಲ್ಲ. ಈ ಮೂಲಕ ರೈ ಅವರು ಭೂ ಅಕ್ರಮ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕಾ ಯುಕ್ತರು, ‘ಸಚಿವರ ವಿರುದ್ಧ ದೂರು ನೀಡಿರುವ ಕಾರಣ ದೂರು ಪರಿಶೀಲನಾ ವಿಭಾಗ ಪರಿಶೀಲನೆ ನಡೆಸಿ, ನನಗೆ ವರದಿ ನೀಡಲಿದೆ. ಆ ಬಳಿಕ ದೂರು ಸ್ವೀಕಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.