ADVERTISEMENT

ಸಬ್‌ಕೋ ಸನ್ಮತಿ ದೇ ಭಗವಾನ್‌... ಭಜನೆ

ಗರೋಡಿಯಲ್ಲಿ ಗಾಂಧಿ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 5:52 IST
Last Updated 31 ಜನವರಿ 2015, 5:52 IST

ಮಂಗಳೂರು: ರಘುಪತಿ ರಾಘವ ರಾಜಾರಾಂ.... ಸಬ್‌ಕೋ ಸನ್ಮತಿ ದೇ ಭಗವಾನ್‌...
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಅತ್ಯಂತ ಪ್ರಿಯವಾದ ಈ ಭಜನೆ ಹಾಡಿಗೆ ಅನೇಕರು ದನಿಗೂಡಿಸುವ ಮೂಲಕ ಬಾಪೂಜಿಗೆ ಶ್ರದ್ಧಾಂಜಲಿ ಸಲ್ಲಿಸಿದರು..

ನಗರದ ಹೊರವಲಯದ ಕಂಕನಾಡಿಯ ಬ್ರಹ್ಮಬೈದರ್ಕಳ ಗರೋಡಿಯ ಪ್ರಾಂಗಣದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ  ಶುಕ್ರವಾರ ಅವರ ಪುಣ್ಯತಿಥಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಈ ಬಾರಿ ಪುಣ್ಯ ತಿಥಿಯ ಪ್ರಯುಕ್ತ ಗಾಂಧೀಜಿ ಅವರಿಗೆ ಪ್ರಿಯವಾದ ಭಜನೆಗಳನ್ನು ಹಾಡಲಾಯಿತು.

ಗಾಂಧೀಜಿಯ ಪ್ರತಿಮೆಗೆ ಹಣ್ಣು ಹಂಪಲು ಹಾಗೂ ಸಿಹಿತಿಂಡಿಗಳನ್ನು ಒಳಗೊಂಡ ನೈವೇದ್ಯ ಅರ್ಪಿಸಲಾಯಿತು.
‘ನಾಥೂರಾಂ ಗೋಡ್ಸೆ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಂದಾಗ ಇಡೀ ಜಗತ್ತೇ ನಿಬ್ಬೆರಗಾಯಿತು. ಚರಿತ್ರೆಯಲ್ಲೇ ಇದೊಂದು ಕರಾಳ ದಿನ. ಗಾಂಧೀಜಿ ಅವರ ತತ್ವ ಸಿದ್ಧಾಂತದ ಮಹತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಈ ಕ್ಷೇತ್ರದಲ್ಲಿ ಗಾಂಧೀಜಿಯ ಪ್ರತಿಮೆಯನ್ನು ನರ್ಸಪ್ಪ ಸಾಲಿಯಾನ್, ಸೋಮಪ್ಪ ಪಂಡಿತ ಹಾಗೂ ಜಿ.ವೆಂಕಪ್ಪ ಅವರಂಥಹ ನಾಯಕರು ಸೇರಿ ಸ್ಥಾಪಿಸಿದ್ದಾರೆ. ಇಲ್ಲಿ ಇನ್ನು ಪ್ರತಿವರ್ಷ ನಮ್ಮ ಕುಟುಂಬದ ವತಿಯಿಂದ ಗಾಂಧಿ ಪುಣ್ಯತಿಥಿ­ಯಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು’ ಎಂದು ಜನಾರ್ದನ  ಪೂಜಾರಿ ತಿಳಿಸಿದರು.

‘ಗಾಂಧೀಜಿಯನ್ನು ಕೊಂದ ಗೋಡ್ಸೆಗೆ ಹಿಂದೂ ಮಹಾ­ಸಭಾದವರು ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ. ಇದು ಕಲಿಯುಗದ ಮಹಾತ್ಮೆ ’ ಎಂದು ಪೂಜಾರಿ ವ್ಯಂಗ್ಯವಾಡಿದರು.

‘ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವದ ಭೇಟಿ ಸಂದರ್ಭದಲ್ಲಿ ಗಾಂಧೀಜಿಯ ಗುಣಗಾನ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಗೆ ದೇವಳ ನಿರ್ಮಿಸುವ  ಬಗ್ಗೆ ಸೊಲ್ಲೆತ್ತಿಲ್ಲ. ಬಿಜೆಪಿಯಾಗಲಿ, ಸಂಘ ಪರಿವಾಗಲೀ ಈ ಬಗ್ಗೆ ಚಕಾರ ಎತ್ತಿಲ್ಲ ಏಕೆ?’ ಎಂದು ಅವರು ಪ್ರಶ್ನಿಸಿದರು.

ಮೇಯರ್‌ ಮಹಾಬಲ ಮಾರ್ಲ, ಶಾಸಕರಾದ ಜೆ.ಆರ್‌.ಲೋಬೊ, ಐವನ್‌ ಡಿಸೋಜ, ಕಾಂಗ್ರೆಸ್‌ ಮುಖಂಡ ಬಿ.ಜನಾರ್ದನ ಪೂಜಾರಿ, ಉಪಮೇಯರ್‌ ಕವಿತಾ ವಾಸು, ಪಾಲಿಕೆ ಸಚೇತಕ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯರಾದ ದೀಪಕ್‌ ಪೂಜಾರಿ, ನವೀನ್‌ ಡಿಸೋಜ, ಆಶಾ ಗ್ರೆಟ್ಟಾ ಡಿಸಿಲ್ವ, ಕವಿತಾ ಸನಿಲ್‌, ಪ್ರವೀಣಚಂದ್ರ ಆಳ್ವ, ದೇವಸ್ಥಾನದ ಆಡಳಿತ ಮಂಡಳಿಯ ದಾಮೋದರ ನಿಸರ್ಗ, ಚಿತ್ತರಂಜನ್‌ ದಾಸ್‌, ಕಾಂಗ್ರೆಸ್‌ ಮುಖಂಡರಾದ ಹರಿಕೃಷ್ಣ ಬಂಟ್ವಾಳ್‌, ಕಳ್ಳಿಗೆ ತಾರಾನಾಥ ಶೆಟ್ಟಿ, ನಾಗೇಂದ್ರ, ಟಿ.ಕೆ. ಸುಧೀರ್‌, ಅರುಣ್‌ ಕುವೆಲ್ಲೊ, ಸಾಯಿರಾಮ್‌, ಪದ್ಮರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಗರೋಡಿಯಲ್ಲಿರುವ ಗಾಂಧೀಜಿಯ ಪ್ರತಿಮೆಯನ್ನು 1948­ರಲ್ಲಿ ಪ್ರತಿಷ್ಠಾಪಿಸಲಾಗಿದೆ. ನಿತ್ಯವೂ ಇಲ್ಲಿ ಗಾಂಧೀಜಿಗೆ ಪೂಜೆ ನಡೆಯುತ್ತದೆ. ಗಾಂಧಿ ಜಯಂತಿ ದಿನ ಪಲ್ಲಕ್ಕಿ ಪೂಜೆಯನ್ನು ನಡೆಸಲಾಗುತ್ತದೆ ಎಂದು ದೇವಸ್ಥಾನದ ವ್ಯವಸ್ಥಾಪಕ ಕಿಶೋರ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.