ADVERTISEMENT

ಸಮನ್ವಯ ಶಿಕ್ಷಣದಿಂದ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ: ವಾಲ್ಟರ್‌

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಕಲೋತ್ಸವ- 2014’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 6:58 IST
Last Updated 26 ನವೆಂಬರ್ 2014, 6:58 IST

ಮಂಗಳೂರು: ಸಮನ್ವಯ ಶಿಕ್ಷಣದ ಮೂಲಕ ವಿಶೇಷ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆಯ­ಬೇಕು. ಕಲೋತ್ಸವದಂತಹ ಸಾಂಸ್ಕೃತಿಕ ಹಬ್ಬಗಳು ವಿಶೇಷ ಮಕ್ಕಳ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಮಾಡುತ್ತದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೊ ಅವರು ತಿಳಿಸಿದರು.

ವಾಮಂಜೂರಿನ ಎಸ್‌ಡಿಎಂ ಮಂಗಳ­ಜ್ಯೋತಿ ಸಮಗ್ರ ಶಾಲೆಯಲ್ಲಿ ಶಾಲೆ ಮತ್ತು ಚೈಲ್ಡ್ ಫಂಡ್ ಇಂಡಿಯಾದ ಆಶ್ರಯದಲ್ಲಿ ಮಂಗಳವಾರ ಧರ್ಮಸ್ಥಳದ ದಿವಂಗತ ರತ್ನಮ್ಮ ಹೆಗ್ಗಡೆ ಅವರ ಸ್ಮರಣಾರ್ಥ ವಿಶೇಷ ಮಕ್ಕಳಿ­ಗಾಗಿ ಏರ್ಪಡಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಲೋತ್ಸವ-ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿಂಡಿಕೇಟ್‌ ಬ್ಯಾಂಕ್‌ ನಿವೃತ್ತ ಹಿರಿಯ ಅಧಿಕಾರಿ ಕೆ ಶೋಭಂಕರ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದು, ರತ್ನಮ್ಮನವರನ್ನು ಸ್ಮರಿಸಿ, ಅವರಿಗೆ ವಿಶೇಷ ಮಕ್ಕಳ ಹಾಗೂ ಕಷ್ಟದಲ್ಲಿರುವ ಮಕ್ಕಳ ಮೇಲೆ ತುಂಬಾ ಅಕ್ಕರೆ ಇತ್ತು ಎಂದರು. ಸಮಗ್ರ ಶಾಲೆಯ ಕಾರ್ಯದರ್ಶಿ ಪ್ರೊ.ಎ.­ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಜಾತ, ಮಂಗಳ­ಜ್ಯೋತಿ ಶಾಲೆಯ ಮುಖ್ಯೋ­ಪಾ­ಧ್ಯಾಯ­­ರಾದ ಅಶೋಕ್ ಕುಮಾರ್, ಮಾರ್ಯಟ್ ಮಸ್ಕರೇನಸ್ ವೇದಿಕೆ­ಯಲ್ಲಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ­ದರು. ಚೈಲ್ಡ್ ಫಂಡ್ ವಿಭಾಗದ ಮುಖ್ಯಸ್ಥ ಪುನೀತ್ ವಂದಿಸಿದರು. ರಮೇಶ್ ಆಚಾರ್ಯ ನಿರೂಪಿಸಿದರು.

ಉಡುಪಿಯ ಸಮಾಜ ಸೇವಕ ಎ.ಪಿ.ಭಟ್ ಅವರು ಸಮಾ­ರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
10 ವಿಶೇಷ ಶಾಲೆಗಳ 158 ಮಕ್ಕಳು ಸಂಗೀತ, ಚಿತ್ರಕಲೆ, ಛದ್ಮವೇಷ ಹಾಗೂ ಸಮೂಹ ನೃತ್ಯ ಸ್ಪರ್ಧೆ­ಗಳಲ್ಲಿ ಭಾಗವಹಿ­ಸಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.