ADVERTISEMENT

‘ಸಿಗಡಿ ಕೃಷಿ: ಭಾರತಕ್ಕೆ ಉತ್ತಮ ಅವಕಾಶ’

ಅಕ್ವಾ ಅಕ್ವೇರಿಯಾ ಇಂಡಿಯಾ ಪ್ರದರ್ಶನದಲ್ಲಿ ತಜ್ಞರ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:32 IST
Last Updated 22 ಮೇ 2017, 5:32 IST
ಸಿಗಡಿ ಕೃಷಿಯಲ್ಲಿ ತಂತ್ರಜ್ಞಾನ ಕುರಿತಾದ ವಿಚಾರ ಸಂಕಿರಣದಲ್ಲಿ ಥೈಲಾಂಡ್‌ನ ರಾಬಿನ್ಸ್‌ ಮ್ಯಾಕಿನ್‌ಟೋಶ್‌ ಮಾತನಾಡಿದರು.
ಸಿಗಡಿ ಕೃಷಿಯಲ್ಲಿ ತಂತ್ರಜ್ಞಾನ ಕುರಿತಾದ ವಿಚಾರ ಸಂಕಿರಣದಲ್ಲಿ ಥೈಲಾಂಡ್‌ನ ರಾಬಿನ್ಸ್‌ ಮ್ಯಾಕಿನ್‌ಟೋಶ್‌ ಮಾತನಾಡಿದರು.   

ಮಂಗಳೂರು: ಸಿಗಡಿ ಕೃಷಿ ಕ್ಷೇತ್ರವು ಮಾರುಕಟ್ಟೆ ಮತ್ತು ರೋಗ ಎಂಬ ಎರಡು ಮುಖ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೂ ಸಿಗಡಿ ಉತ್ಪಾದನೆ ಯಲ್ಲಿ ಭಾರತ, ಚೀನಾ ನಂತರದ ಸ್ಥಾನದಲ್ಲಿದೆ. 2ನೇ ಅತಿ ದೊಡ್ಡ ಸಿಗಡಿ ಉತ್ಪಾದಕ ಎನಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.

ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಸಂಸ್ಥೆ ನಗರದ ನೆಹರು ಮೈದಾನದಲ್ಲಿ ಆಯೋಜಿಸಿರುವ 4ನೇ ಅಕ್ವಾ ಅಕ್ವೇರಿಯಾ ಇಂಡಿಯಾ ಮತ್ಸ್ಯಕೃಷಿ ಪ್ರದರ್ಶನದಲ್ಲಿ ಸೋಮವಾರ ‘ಸಿಗಡಿ ಕೃಷಿಯಲ್ಲಿ ಉನ್ನತ ತಂತ್ರಜ್ಞಾನ ಮತ್ತು ನಾವೀನ್ಯತೆ’ ಕುರಿತಾದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯ ಮಂಡಿಸಿದರು.

ಆರಂಭವಾಗಿರುವ ಅಕ್ವಾ ಅಕ್ವೇರಿಯಂ ಇಂಡಿಯಾ ಮತ್ಸ್ಯಕೃಷಿ ಪ್ರದರ್ಶ ನದಲ್ಲಿ ಅಭಿಪ್ರಾಯ ಮಂಡಿಸಿದ ತಜ್ಞರು, ಐದು ವರ್ಷಗಳ ಹಿಂದೆ ಸಿಗಡಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದ ಆಗ್ನೇಯ ಏಷ್ಯಾ ದೇಶಗಳು ಮಾಡಿದ ತಪ್ಪುಗಳನ್ನು ಅರಿತುಕೊಳ್ಳಬೇಕಾಗಿದೆ. ಅವುಗಳಿಗೆ ಪರಿಹಾರ ಕಂಡುಕೊಂಡಲ್ಲಿ, ಸಿಗಡಿ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯ ಎಂದು ಹೇಳಿದರು.

ದಶಕಗಳಿಂದ ಸಿಗಡಿ ಕೃಷಿ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ಥೈಲ್ಯಾಂಡ್‌ನ ಸಂಶೋಧಕ ರಾಬಿನ್ಸ್ ಮ್ಯಾಕಿನ್‌ಟೋಶ್ ಮಾತನಾಡಿ, ಸಾಗರದಲ್ಲಿ ತಾಪಮಾನ ಏರುತ್ತಿರುವುದು, ಕೇವಲ ವೈರಸ್‌ಗಳಿಂದಷ್ಟೇ ಅಲ್ಲದೆ, ಬ್ಯಾಕ್ಟೀರಿಯಾದಿಂದಲೂ ಸೋಂಕು ಹರಡುತ್ತಿದೆ. ಸೋಂಕು ಜೀವಿಗಳ ಮೂಲಕ ಹರಡುವುದಿಲ್ಲ. ಸಾಗರದ ಹರಿವಿನ ಮೂಲಕವೇ ಹರ ಡುತ್ತಿದ್ದು, ಇದನ್ನು ನಿಯಂತ್ರಿಸುವುದು ತುಂಬಾ ಕಷ್ಟ ಎಂದು ಹೇಳಿದರು.

2011ರಲ್ಲಿ ಥೈಲ್ಯಾಂಡ್‌ನಲ್ಲಿ ಉತ್ಪಾದನೆ ಕುಸಿಯಲಾರಂಭಿಸಿದಾಗ, ಮತ್ತೆ ಅದನ್ನು ಮೇಲೆತ್ತಿದ್ದು ತಂತ್ರಜ್ಞಾನ ಎಂದು ತಿಳಿಸಿದರು. ಈ ವರ್ಷದ ಅಂತ್ಯಕ್ಕೆ ಸಿಗಡಿ ಉತ್ಪಾದನೆಯನ್ನು 5 ಲಕ್ಷ ಟನ್ ತಲುಪಿಸುವ ಗುರಿ ಇದೆ. ಸದ್ಯ ಸರಾಸರಿ ಉತ್ಪಾದನೆಯ ಪ್ರಮಾಣ ಶೇ 50 ರಷ್ಟಿದೆ.

ಉತ್ಪಾದನೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ವೈಟ್ ಸ್ಪಾಟ್ ಸಿಂಡ್ರೋಮ್‌ನಿಂದಾಗಿ ಸಿಗಡಿ ಉತ್ಪಾದನೆ ಕುಸಿಯುತ್ತಿದೆ. ಭಾರತದಲ್ಲಿ ಸಿಗಡಿ ಕೃಷಿಗೆ ಪೆಟ್ಟು ನೀಡುತ್ತಿರುವ ದೊಡ್ಡ ರೋಗಕಾರಕ ಇದಾಗಿದೆ ಎಂದು ಹೇಳಿದರು.

ಜವಾಬ್ದಾರಿಯುತ ಜಲಕೃಷಿಯ ಶಕೆ ಇದಾಗಲಿದೆ ಎಂದು ಹೇಳಿದ ಥೈಲ್ಯಾಂಡ್‌ನ ಐಎನ್‌ವಿಇ ಭಾರತ ಮತ್ತು ದಕ್ಷಿಣಾ ಏಷ್ಯಾದ ವಲಯ ವ್ಯವಸ್ಥಾಪಕ ಎಸ್ ಚಂದ್ರಶೇಖರ್, ನರ್ಸರಿ ಮಾದರಿ ಅನುಸರಿಸುವುದರಿಂದ ರೋಗಕಾರಕ ಗಳನ್ನು ನಿಯಂತ್ರಿಸಬಹುದು. ಸಿಗಡಿಗಳು ವಿಷ ನಿರೋಧಕ ಶಕ್ತಿ ಹೊಂದಿದ್ದು, ಹೆಚ್ಚು ಬೆಳೆಯಬಹುದು.

ಥೈಲ್ಯಾಂಡ್ ಮತ್ತು ಮೆಕ್ಸಿಕೊಗಳು ನರ್ಸರಿ ಫಾರ್ಮಿಂಗ್ ಮೂಲಕ ಅಗಾಧ ಲಾಭ ಪಡೆದುಕೊಂಡಿವೆ. ಭಾರತ ಕೂಡ ಅದೇ ಹಾದಿಯನ್ನು ತುಳಿಯಬಹುದು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT