ADVERTISEMENT

ಸೌಲಭ್ಯಗಳ ನಿರೀಕ್ಷೆಯಲ್ಲಿ ಕೊರಗರು!

ಬೈಂದೂರು: ಮೂರೂರು ಕಾಲೊನಿ ಸಚಿವರ ಸ್ವಾಗತಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2016, 6:40 IST
Last Updated 30 ಡಿಸೆಂಬರ್ 2016, 6:40 IST
ಸಚಿವ ಆಂಜನೇಯ ಅವರು ಹೊಸ ವರ್ಷಾಚರಣೆ ನಡೆಸಲಿರುವ ಮೂರೂರಿನ ಮರ್ಲಿ ಕೊರಗ ಅವರ ‘ಪ್ರತೀಕ್ಷಾ ನಿಲಯ’.  	(ಬೈಂದೂರು ಚಿತ್ರ)
ಸಚಿವ ಆಂಜನೇಯ ಅವರು ಹೊಸ ವರ್ಷಾಚರಣೆ ನಡೆಸಲಿರುವ ಮೂರೂರಿನ ಮರ್ಲಿ ಕೊರಗ ಅವರ ‘ಪ್ರತೀಕ್ಷಾ ನಿಲಯ’. (ಬೈಂದೂರು ಚಿತ್ರ)   

ಮೂರೂರು(ಬೈಂದೂರು):  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೊಸ ವರ್ಷಾಚರಣೆಗೆ ಈ ಬಾರಿ ಆಯ್ಕೆ ಮಾಡಿಕೊಂಡಿರುವ ಬೈಂದೂರು ವಿಧಾ ನಸಭಾ ಕ್ಷೇತ್ರದ ಕಾಲ್ತೋಡು ಪಂಚಾ ಯಿತಿ ವ್ಯಾಪ್ತಿಯ ಮೂರೂರು ಕೊರಗ ಕಾಲೊನಿ ಇದೀಗ ಅವರ ಸ್ವಾಗತಕ್ಕೆ ಸಜ್ಜುಗೊಳ್ಳುತ್ತಿದೆ.
ಸಚಿವರು ಇಲ್ಲಿ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಿ, ಅಲ್ಲಿನ ನಿವಾಸಿ ಮರ್ಲಿ ಕೊರಗ ಅವರ ಮನೆಯಲ್ಲಿ ರಾತ್ರಿ ವಾಸ ಮಾಡಿ ಹೊಸವರ್ಷವನ್ನು ಸ್ವಾಗತಿ ಸುವರು.

ಅದಕ್ಕಾಗಿ ಮಾರ್ಗಗಳನ್ನು ನೇರ್ಪುಗೊಳಿಸಲಾಗುತ್ತಿದೆ. ಮರ್ಲಿ ಕೊರಗರ ಮನೆ ಆವರಣದಲ್ಲಿ ವಿದ್ಯುತ್, ನೀರು ಪೂರೈಕೆ ಇರುವ ಪಾಶ್ಚಾತ್ಯ ಕಮೋಡ್‌ನಿಂದ ಸಜ್ಜಾದ ಹೊಸ ಶೌಚಾಲಯ– ಸ್ನಾನಗೃಹ ನಿರ್ಮಾಣ ಗೊಂಡಿದೆ. ಸಮಾವೇಶ, ಭೋಜನಗಳಿಗೆ ಪ್ರತ್ಯೇಕ ಚಪ್ಪರ ಹಾಕಲಾಗುತ್ತಿದೆ.

ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಸಚಿ ವರ ಇಲಾಖೆಯ ಹಿರಿಯ, ಕಿರಿಯ ಅಧಿ ಕಾರಿಗಳು ಇಲ್ಲಿಗೆ ಭೇಟಿ ನೀಡಿ, ಏರ್ಪಾ ಡುಗಳನ್ನು ಪರಿಶೀಲಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಬಟ್ನಾಡಿ ಎಲ್ಲದರ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದಾರೆ.

ಆರು ಕುಟುಂಬಗಳ ಕಾಲೊನಿ: ಗುಡ್ಡದ ಇಳಿಜಾರಿನಲ್ಲಿ ಮೆಟ್ಟಿಲುಗಳಂ ತಿರುವ ಪ್ರದೇಶದಲ್ಲಿ ಕಾಲೊನಿ ಇದೆ. ಸುತ್ತ ಅರಣ್ಯ ಮತ್ತು ಖಾಸಗಿಯವರ ಜಮೀನು. ಕಿರಿಮಂಜೇಶ್ವರ ಗ್ರಾಮದ ಹೆದ್ದಾರಿಯಲ್ಲಿ ಸಿಗುವ ಅರೆಹೊಳೆ ಕ್ರಾಸ್‌ ನಿಂದ ಯರುಕೋಣೆ, ಹೊಸಾಡು ಹಾದು ಬರುವ ಟಾರು, ಕಾಂಕ್ರೀಟ್, ಮಣ್ಣಿನ ಒಟ್ಟು 14 ಕಿಲೋಮೀಟರ್‌ ಉದ್ದದ ರಸ್ತೆ ಮೂಲಕ ಕಾಲೊನಿ ತಲುಪಬಹುದು.

ಮರ್ಲಿ ಕೊರಗ, ಸಿದ್ದು ಕೊರಗ, ಮಾಸ್ತಿ ಕೊರಗ, ಲಕ್ಷ್ಮೀ ಕೊರಗ, ಐತು ಕೊರಗ, ನಾಗು ಕೊರಗ ಸೇರಿ ಆರು ಕುಟುಂಬಗಳು ಇಲ್ಲಿ ನೆಲೆಸಿವೆ. ಒಟ್ಟು ಜನ ಸಂಖ್ಯೆ 44. ಸಮಗ್ರ ಬುಡಕಟ್ಟು ಜನರ ಅಭಿವೃದ್ಧಿ ಯೋಜನೆಯ ಅನುದಾನ ದಿಂದ ಮೂರು ಕುಟುಂಬಗಳು 2013 ರಲ್ಲಿ ಹಂಚಿನ ಮನೆ ಕಟ್ಟಿಕೊಂಡಿದ್ದರೆ, ಉಳಿದ ಕುಟುಂಬಗಳು ಗುಡಿಸಲಿನಲ್ಲಿ ವಾಸಿಸುತ್ತವೆ. ಹಣದ ಅಡಚಣೆಯಿಂದ ಮನೆ ತಳಪಾಯದ ಹಂತದಲ್ಲಿ ನಿಂತಿವೆ. ಯೋಜನೆಯಿಂದ ಸಿಗುವ ₹ 1.75 ಲಕ್ಷ ಈಗಿನ ಬೆಲೆಯೇರಿಕೆಯ ಕಾರಣ ಸಾಲದು ಎನ್ನುತ್ತಿದ್ದಾರೆ ಅವರು.

ಕಾಲೊನಿಯಲ್ಲಿ ಅಂಗನವಾಡಿ ಇದೆ ಯಾದರೂ ದಾರಿಯ ತೊಡಕು ಇದೆ. ನಾಲ್ಕು ಮಕ್ಕಳು ಅಂಗನವಾಡಿಗೆ ಹೋಗುತ್ತಿವೆ. ಒಂದೂವರೆ ಕಿಮೀ ದೂರದ ಕಪ್ಪಾಡಿ ಎಂಬಲ್ಲಿನ ಹಿರಿಯ ಪ್ರಾಥಮಿಕ ಶಾಲೆಗೆ 11 ಮಕ್ಕಳು ಹೋಗುತ್ತಿದ್ದಾರೆ. ಈ ಶಾಲೆಯ ಕಟ್ಟಡ ಶಿಥಿಲವಾಗಿದೆ ಎನ್ನುವುದು ಮಕ್ಕಳ ಅಳಲು. ತುರ್ತು ಚಿಕಿತ್ಸೆಗೆ 17 ಕಿಮೀ ದೂರದ ನಾಗೂರಿನ ಪ್ರಾಥಮಿಕ ಆರೋಗ್ಯ ಘಟಕವನ್ನು, ಮಾರುಕಟ್ಟೆ ಸಾಮಗ್ರಿಗಳಿಗೆ 20 ಕಿಮೀ ದೂರದ ಬೈಂದೂರನ್ನು, ಪ್ರೌಢಶಾಲೆಗೆ 10 ಕಿಮೀ ದೂರದ ಅರೆಶಿರೂರನ್ನು ಅವಲಂಬಿಸಿದ್ದಾರೆ. 

ಕಾಲೊನಿಯಲ್ಲಿ ಈಗ ಕುತೂಹಲ, ಸಂಭ್ರಮ ಮನೆ ಮಾಡಿದೆ. ಸಚಿವರ ಭೇಟಿ, ವಾಸ್ತವ್ಯ ಹೇಗಿರುತ್ತದೆ, ಕಾಲೊನಿಗೆ ಅದರಿಂದ ಯಾವ ವಿಶೇಷ ಸೌಲಭ್ಯಗಳು ಸಿಗಲಿವೆ ಎಂಬ ಬಗ್ಗೆ ಅವರು ಮಾತನಾಡಿಕೊಳ್ಳುತ್ತಿದ್ದಾರೆ.

ಬೇಡಿಕೆಗಳು ಸಾಲು: ಕುಡಿಯುವ ನೀರು, ಕೃಷಿ ಪಂಪ್‌ ಬಳಸಲು ತ್ರೀಫೇಸ್ ವಿದ್ಯುತ್, ಸಂಚಾರಿ ವಾಹನ, ನಿವೇಶನ ಗಳಿಗೆ ಆವರಣ, ಒಂದು ಕಾಲು ಕಳೆದು ಕೊಂಡಿರುವ ಕರಿಯಣ್ಣ ಅವರಿಗೆ ಮೂರು ಚಕ್ರದ ಮೊಬೈಕ್, ಕನಿಷ್ಠ ಅರೆ ಶಿರೂರಿನಲ್ಲಿ ಆಸ್ಪತ್ರೆ, ಯುವತಿಯರಿಗೆ ಸ್ವ ಉದ್ಯೋಗದ ಅವಕಾಶ, ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಮಾಸ್ತಿ ಅವರ ಮಗ ಬಾಬು ಚಿಕಿತ್ಸೆಗೆ ನೆರವು, ನಾಗು ಅವರಿಗೆ ವಿಧವಾ ಮಾಸಾಶನ, ಮಣ್ಣಿನ ರಸ್ತೆಗೆ ಟಾರು, ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಅನುದಾನದ ಬೇಡಿಕೆ ಮುಂದಿಡಲು ಸಿದ್ಧತೆ ನಡೆದಿದೆ.
- ಎಸ್‌. ಜನಾರ್ದನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.