ADVERTISEMENT

ಸ್ಥಳೀಯರ ಅಸಮಾಧಾನ, ತ್ವರಿತಗತಿಗೆ ಆಗ್ರಹ

ಉಪ್ಪಿನಂಗಡಿ-– ಕೆಮ್ಮಾರ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:23 IST
Last Updated 6 ಫೆಬ್ರುವರಿ 2017, 5:23 IST
ಉಪ್ಪಿನಂಗಡಿ -ಕೊಯಿಲ ಮಧ್ಯೆ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಕಿಂಡೋವ್ ಎಂಬಲ್ಲಿ ವಾರದ ಹಿಂದೆ ಅಗೆದು ಹಾಕಿರುವ ಹೊಂಡ ಅಪಾಯದ ಕರೆಗಂಟೆ ಬಾರಿಸುತ್ತಾ ಬಾಯ್ದೆರೆದು ನಿಂತಿದೆ
ಉಪ್ಪಿನಂಗಡಿ -ಕೊಯಿಲ ಮಧ್ಯೆ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಕಿಂಡೋವ್ ಎಂಬಲ್ಲಿ ವಾರದ ಹಿಂದೆ ಅಗೆದು ಹಾಕಿರುವ ಹೊಂಡ ಅಪಾಯದ ಕರೆಗಂಟೆ ಬಾರಿಸುತ್ತಾ ಬಾಯ್ದೆರೆದು ನಿಂತಿದೆ   

ಉಪ್ಪಿನಂಗಡಿ: ಕಳೆದ ಐದೂವರೆ ತಿಂಗಳ ಹಿಂದೆ ಶಾಸಕರಿಂದ ಗುದ್ದಲಿ ಪೂಜೆ ನಡೆದು ಕಾಮಗಾರಿಗೆ ಚಾಲನೆ ನೀಡಲಾಗಿ ಆರಂಭಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಆರಂಭದ ಹಂತದಲ್ಲೇ ಇದ್ದು, ಆಮೆ ನಡಿಗೆಯಲ್ಲಿ ಸಾಗುವ ಕಾಮಗಾರಿ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಮತ್ತು ವಾಹನ ಚಾಲಕರಿಂದ ದೂರುಗಳು ವ್ಯಕ್ತವಾಗಿವೆ.

2015-16ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪಿನಂಗಡಿ-ಕಡಬ ರಸ್ತೆ ಯಲ್ಲಿ ಕೆಮ್ಮಾರ ತನಕದ 6 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ 7.25 ಕೋಟಿ ರೂಪಾಯಿ ಮಂಜೂರು ಆಗಿತ್ತು. 2016 ಆಗಸ್ಟ್ 29ರಂದು ಶಾಸಕಿ ಶಕುಂತಳಾ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಕಾಮಗಾರಿಗೆ ಚಾಲನೆ ದೊರೆತು ಬರೋಬ್ಬರಿ 5 ತಿಂಗಳು ಕಳೆದಿದೆ. 5 ತಿಂಗಳ ಹಿಂದೆ ಕೊಯಿಲದಿಂದ ಆರಂಭಗೊಂಡ ಕಾಮಗಾರಿ ಕೇವಲ ಅರ್ಧ ಕಿ.ಮೀ. ತನಕ ಮಾತ್ರ ಅಗಲವಾಗಲಿರುವ ರಸ್ತೆ ಬದಿಯ ಮಣ್ಣು ತೆಗೆದು ಜಲ್ಲಿ ಹಾಕಲಾಗಿದೆ.

ಬೃಹತ್ ಹೊಂಡ, ಅಪಾಯಕಾರಿ:  ಪೆರಿಯಡ್ಕದ ಕಿಂಡೋವು ಎಂಬಲ್ಲಿ ವಾರದ ಹಿಂದೆ ಮರವೊಂದನ್ನು ತೆರವು ಮಾಡಿದ್ದು, ಅದಕ್ಕೆ ತಾಗಿಕೊಂಡೇ ಕಿರು ತೊರೆ ಹರಿದ ಹೊಂಡ ಇದೆ. ಮರ ತೆರವು ಮಾಡಿದ ಬಳಿಕ ಅಲ್ಲಿ ಬೃಹತ್ ಹೊಂಡ ಕೆರೆಯ ರೀತಿಯಲ್ಲಿ ನಿರ್ಮಾಣ ಆಗಿದೆ. ಇಲ್ಲಿ ರಸ್ತೆ ಅತೀ ಕಿರಿದಾಗಿದೆ ಮತ್ತು ಇನ್ನೊಂದು ಕಡೆಯಲ್ಲಿಯೂ ತೊರೆ ಇದೆ. ಅದಾಗ್ಯೂ ಇಕ್ಕಟ್ಟಾದ ರಸ್ತೆ ಯಲ್ಲೇ ಜಲ್ಲಿಯನ್ನು ರಾಶಿ ಹಾಕಲಾಗಿದೆ. ಇಲ್ಲಿ ವಾರದಿಂದ ಈ ಪರಿಸ್ಥಿತಿ ಎದುರಾಗಿದ್ದು, ಅಪಾಯದ ಕರೆ ಗಂಟೆ ಬಾರಿಸುತ್ತಲೇ ಇದೆ.

ವರ್ಗ ಜಾಗದೊಳಗೆ ಅನ್ಯಾಯ? ಕಿಂಡೋವು ಎಂಬಲ್ಲಿ ರಸ್ತೆ ಬದಿಯ ಮರ ತೆಗೆದ ವೇಳೆ ಅಲ್ಲಿಂದ ತೆಗೆದ ಮಣ್ಣು "ತನ್ನ ವರ್ಗ ಜಾಗದೊಳಗೆ ಇಟ್ಟಿಗೆಯನ್ನು ಜೋಡಿಸಿ ಇಟ್ಟಿದುದರ ಮೇಲೆಯೇ ರಾಶಿ ಹಾಕಿದ್ದು ನೂರಾರು ಇಟ್ಟಿಗೆ ಮಣ್ಣಿನ ಅಡಿಯಲ್ಲಿ ಹೂತು ಹೋಗುವಂತೆ ಮಾಡಿದ್ದಾರೆ. ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಲ್ಲಿ ವಿನಂತಿಸಿ ಕೊಂಡರೂ ಅನ್ಯಾಯ ಎಸಗಿದ್ದಾರೆ ಎಂದು ಕಿಂಡೋವ್ ನಿವಾಸಿ ವಿಶ್ವನಾಥ್ ಎಂಬವರು "ಪ್ರಜಾವಾಣಿ"ಯೊಂದಿಗೆ ಮಾತನಾಡುತ್ತಾ ನೋವು ತೋಡಿಕೊಂಡಿದ್ದಾರೆ.

ಈ ಕಾಮಗಾರಿ ಜೊತೆಗೆ ಇದರ ಮುಂದುವರಿದ ಕಾಮಗಾರಿ ಕೊಯಿಲ-ಮರ್ಧಾಳ ತನಕ 23 ಕಿ.ಮೀ 22 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದ್ದು, ಇದರ ಕೆಲಸ ಈಗಾಗಲೇ ಮರ್ದಾ ಳದಿಂದ ಕೊಯಿಲ ತನಕ ಸಾಗಿ ಬಂದಿದೆ.

ಅಭಿವೃದ್ಧಿ ಕೆಲಸ ಎನ್ನುವ ಕಾರಣಕ್ಕಾಗಿ ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡು ಸಹಕಾರ ನೀಡುತ್ತಿದ್ದೇವೆ, ತಾಳ್ಮೆ ಕಳೆ ದುಕೊಂಡು ಪ್ರತಿಭಟನೆಯ ಹಾದಿ ಹಿಡಿಯುವ ಮುನ್ನ ಸಂಬಂಧಪಟ್ಟ ಇಲಾಖೆ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಸಿದ್ದಿಕ್ ನೀರಾಜೆ

ಎಂಜಿನಿಯರ್‌ ಭರವಸೆ
ಕಾಮಗಾರಿ ನಿಧಾನ ಆಗಿ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಗುತ್ತಿಗೆದಾರರಿಗೆ ಕಾಮಗಾರಿ ಮುಗಿಸುವುದಕ್ಕೆ ಇನ್ನೂ ಅವಧಿ ಇದೆ. ಆದರೂ ಗುತ್ತಿಗೆದಾರರಿಗೆ ತ್ವರಿತ ಗತಿಯಲ್ಲಿ ಕಾಮ ಗಾರಿ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಲೋಕೋ ಪಯೋಗಿ ಸಹಾಯಕ ಎಂಜಿನಿ ಯರ್ ಪ್ರಮೋದ್ "ಪ್ರಜಾವಾಣಿ" ಯೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT