ADVERTISEMENT

ಹರಿವು ನಿಲ್ಲಿಸಿದ ಜೀವನದಿ ‘ನೇತ್ರಾವತಿ’

​ಪ್ರಜಾವಾಣಿ ವಾರ್ತೆ
Published 6 ಮೇ 2016, 5:20 IST
Last Updated 6 ಮೇ 2016, 5:20 IST
ಉಪ್ಪಿನಂಗಡಿಯಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ನೀರು ಇಲ್ಲದೆ ಮರುಭೂಮಿಯಂತೆ ಕಂಡು ಬರುತ್ತಿದೆ.
ಉಪ್ಪಿನಂಗಡಿಯಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ನೀರು ಇಲ್ಲದೆ ಮರುಭೂಮಿಯಂತೆ ಕಂಡು ಬರುತ್ತಿದೆ.   

ಉಪ್ಪಿನಂಗಡಿ: ಚಿಕ್ಕಮಗಳೂರು ಸಂಸೆ ಯ ಎಳನೀರು ಎಂಬಲ್ಲಿ ಹುಟ್ಟಿ ಹರಿದು ಬರುವ ನೇತ್ರಾವತಿ ಉಪ್ಪಿನಂಗಡಿಯಲ್ಲಿ ಕುಮಾಧಾರನೊಂದಿಗೆ ಸಂಗಮ ಗೊಂಡು ಮತ್ತೆ ‘ನೇತ್ರಾವತಿ’ ಜೀವನದಿಯಾಗಿ ಹರಿಯುವುದು ಪೃಕೃತಿ ಸಹಜ. ಆದರೆ “ಈಕೆ” 2 ದಿನಗಳಿಂದ ಉಪ್ಪಿನಂಗಡಿಯಲ್ಲಿ ಸಂಗಮಕ್ಕೆ ಮುನ್ನ ತುಸು ದೂರದಲ್ಲಿ ಹರಿವು ನಿಲ್ಲಿಸಿದ್ದಾಳೆ. ಅರ್ಥಾತ್ ಸಂಪೂರ್ಣವಾಗಿ ಬತ್ತಿ, ಸೊರಗಿ ಹೋಗಿದ್ದಾಳೆ.

ಎಳನೀರುನಿಂದ ಹರಿದು ಬರುವ ನೇತ್ರಾವತಿ ದಿಡುಪೆ, ಕಾಜೂರು, ಕೊಲ್ಲಿ, ಧರ್ಮಸ್ಥಳ, ಕೊಕ್ಕಡ, ನೀರಕಟ್ಟೆ ಮೂಲಕ ಬೆಟ್ಟಗುಡ್ಡ, ಕಾಡು, ಗಿರಿ, ವನಗಳ ಮಧ್ಯೆ ಬಳ್ಳಿಯಂತೆ ಬಳಕುತ್ತಾ, ಮಳೆಗಾಲದಲ್ಲಿ ತುಂಬಿ ಹರಿಯುತ್ತಾ, ತದ ನಂತರದಲ್ಲಿ ಹಾಲಿನಂತೆ, ಅದರ ತೆನೆಯಂತೆ ಝಲ ಝಲ ನಾದದೊಂದಿಗೆ ಹರಿದು ಬರುತ್ತಿದ್ದ ಸುಂದರಿ ‘ನೇತ್ರಾವತಿ’ ಇದೀಗ ತನ್ನೆಲ್ಲಾ ಸೌಂದರ್ಯ ಕಳೆದುಕೊಂಡು ಸೊರಗಿ ಮಲಗಿದ್ದಾಳೆ.

ನೇತ್ರಾವತಿಯಲ್ಲಿ ಯಾವತ್ತೂ ನೀರು ಕಡಿಮೆ ಆಗುವುದಿಲ್ಲ. ವರ್ಷದ 365 ದಿವಸವೂ ಆಕೆ ಜೀವನದಿಯಾಗಿ ಹರಿಯುತ್ತಿರುತ್ತಾಳೆ. ಫೆಬ್ರುವರಿ, ಮಾರ್ಚ್ ಬಳಿಕ ಹರಿವು ಕಡಿಮೆ ಆಗುತ್ತಾ ಬರುತ್ತದೆ. ಏಪ್ರಿಲ್, ಮೇ ತಿಂಗಳಿನಲ್ಲಿ ನದಿಯ ಮಧ್ಯದಲ್ಲಿ ಅಥವಾ ನದಿ ಪಾತ್ರದ ಬದಿಯಲ್ಲಿ ತೋಡಿನಂತೆ ಹರಿಯುತ್ತಿರುತ್ತಾಳೆ. ಆದರೆ ಈ ವರ್ಷ ಏಪ್ರಿಲ್ ತಿಂಗಳಿನಿಂದಲೇ ಅತಿ ಕಡಿಮೆ ನೀರಿನಲ್ಲಿ ಹರಿಯುತ್ತಿದ್ದ ನೇತ್ರಾವತಿ ಇದೀಗ 2 ದಿನಗಳಿಂದ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಳದ ಮುಂಭಾಗದಲ್ಲಿ, ಸಂಗಮಕ್ಕೆ ತುಸು ದೂರದಲ್ಲಿ ಹರಿವು ನಿಲ್ಲಿಸಿದ್ದಾಳೆ.

ಒಟ್ಟಿನಲ್ಲಿ ಬಾರದ ಮಳೆಯಿಂದಾಗಿ ನೇತ್ರಾವತಿ ಬರಿದಾಗಿದ್ದಾಳೆ, ಬಾಯಾರಿದ್ದಾಳೆ. ಜನತೆ ಮಳೆಗಾಗಿ ಎಲ್ಲೆಡೆ ಮಂದಿರ, ಮಸೀದಿಗಳಲ್ಲಿ ದೇವರ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಜನತೆ ಸಮಸ್ಯೆಯ ಗಂಭೀರತೆಯನ್ನು ಅರಿತು ನೀರು ಬಳಕೆ ಮಾಡುವುದು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮ ಎನ್ನುವುದು ಹಿರಿಯರ ಮಾತು.

2016ರಲ್ಲಿ ಕೇವಲ 5 ಸೆ.ಮೀ ಮಳೆ
2010ರ ಬಳಿಕ 2016ರಲ್ಲಿ ಅತ್ಯಂತ ಕಡಿಮೆ ಮಳೆ ಬಂದಿದೆ. ಹವಾಮಾನ ವರದಿ ಪ್ರಕಾರ ಉಪ್ಪಿನಂಗಡಿ ಮತ್ತು ಕೊಕ್ಕಡ ಕಂದಾಯ ವ್ಯಾಪ್ತಿ ಪರಿಸರದಲ್ಲಿ 2011-ಜನವರಿಯಿಂದ ಮೇ-5ರ ತನಕ 99 ಸೆ.ಮೀ. ಮಳೆಯಾಗಿತ್ತು.

2012ರಲ್ಲಿ ಕ್ರಮವಾಗಿ ಇದೇ ಅವಧಿಯಲ್ಲಿ 102 ಸೆ.ಮೀ., 2013ರಲ್ಲಿ 122 ಸೆ.ಮೀ., 2014ರಲ್ಲಿ 105 ಸೆ.ಮೀ. ಮಳೆಯಾಗಿತ್ತು. 2015ರಲ್ಲಿ 167.80 ಸೆ.ಮೀ. ಮಳೆಯಾಗಿತ್ತು.

ಪ್ರಸಕ್ತ ವರ್ಷ 2016ರಲ್ಲಿ ಜನವರಿ-0 ಸೆ.ಮೀ., ಫೆಬ್ರುವರಿ-0 ಸೆ.ಮೀ., ಮಾರ್ಚ್-0 ಸೆ.ಮೀ., ಏಪ್ರಿಲ್ 15ರಂದು ರಾತ್ರಿ 5 ಸೆ.ಮೀ. ಮಳೆಯಾಗಿದೆ. ಹೀಗಾಗಿ ಈ ವರ್ಷ ಮಳೆಯಾಗಿರುವುದು ಅತ್ಯಂತ ಕಡಿಮೆ 5 ಸೆ.ಮೀ.  ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.