ADVERTISEMENT

ಹಸುಳೆಯ ಸಾವು– ದಾದಿಯರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 12:53 IST
Last Updated 11 ಫೆಬ್ರುವರಿ 2017, 12:53 IST

ಉಡುಪಿ: ನೀರಿನ ಉಷ್ಣಾಂಶವನ್ನು ಪರೀಕ್ಷಿಸದೆ ಅತಿಯಾಗಿ ಸುಡುತ್ತಿದ್ದ ನೀರಿನಲ್ಲಿ ಮಗುವನ್ನು ಅದ್ದಿ ಸಾವಿಗೆ ಕಾರಣರಾಗಿದ್ದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಇಬ್ಬರು ಶುಶ್ರೂಷಕಿಯರಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 6 ತಿಂಗಳ ಶಿಕ್ಷೆ ವಿಧಿಸಿದೆ.

ಸುಮಲತಾ ಮತ್ತು ಸಂಗೀತಾ ಶೆಟ್ಟಿ ಶಿಕ್ಷೆಗೆ ಗುರಿಯಾದವರು. ಪರಿಹಾರದ ರೂಪವಾಗಿ ಮಗುವಿನ ಪೋಷಕರಿಗೆ ತಲಾ ₹50 ಸಾವಿರ  ನೀಡಬೇಕು ಎಂದು ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ್ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾ ರದ ಪರವಾಗಿ ಹಿರಿಯ ಪಬ್ಲಿಕ್ ಪ್ರಾಸಿ ಕ್ಯೂಟರ್ ಶಾಂತಿಬಾಯಿ ವಾದ ಮಂಡಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ವರ್ಷದ ಮಗ ಮಹಮ್ಮದ್ ರಿಫಾಯ್‌ನನ್ನು ತಾಯಿ ಫಾತಿಮಾ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ 2010 ಸೆಪ್ಟೆಂಬರ್‌ 30ರಂದು ದಾಖಲಿ ಸಿದ್ದರು. ಪರೀಕ್ಷಿಸಿದಾಗ ಮೂತ್ರದಲ್ಲಿ ಸೋಡಿಯಂ– ಪೊಟಾಶಿಯಂ ಹೋಗು ತ್ತಿದ್ದದ್ದು ಖಚಿತವಾಗಿತ್ತು. ಆದ್ದರಿಂದ ಆ ಮಗುವನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ADVERTISEMENT

ಅಕ್ಟೋಬರ್ 5ರಂದು ಆ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಲತಾ ಮತ್ತು ಸಂಗೀತಾ ಶೆಟ್ಟಿ ಅವರು ಮಗುವನ್ನು ಸ್ನಾನ ಮಾಡಿಸಲು ಕರೆದೊಯ್ದಿದ್ದರು. ಟಬ್‌ನಲ್ಲಿದ್ದ ನೀರು ಅತಿಯಾಗಿ ಸುಡುತಿದ್ದರೂ ಅದನ್ನು ಪರೀಕ್ಷಿಸದೆ ಅದರೊಳಗೆ ಅದ್ದಿದ ಪರಿಣಾಮ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ನಾಲ್ಕು ದಿನದ ನಂತರ ಮಗು ಮೃತಪಟ್ಟಿತ್ತು.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಇನ್‌ ಸ್ಪೆಕ್ಟರ್ ಎಚ್‌.ಡಿ. ಕುಲಕರ್ಣಿ ಅವರು ತನಿಖೆ ನಡೆಸಿದ್ದರು, ಅವರು ವರ್ಗಾವಣೆಯಾದ ನಂತರ ಇನ್‌ಸ್ಪೆಕ್ಟರ್ ಸದಾನಂದ ತಿಪ್ಪಣ್ಣವರ್‌ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

‘ನಿರ್ಲಕ್ಷ್ಯತನದಿಂದಾಗಿ ಮಗುವಿನ ಸಾವಿಗೆ ಶೂಶ್ರೂಷಕಿಯರು ಕಾರಣರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಶಿಕ್ಷೆ ವಿಧಿಸಿದೆ’ ಎಂದು ಶಾಂತಿಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.