ADVERTISEMENT

₹ 2.39 ಲಕ್ಷ ನಗದು ಕಳವು

ನಂದಿಕೂರು ಸಿಂಡಿಕೇಟ್ ಬ್ಯಾಂಕ್ ಶಾಖೆ– ಭದ್ರತಾ ಲೋಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2015, 6:00 IST
Last Updated 15 ಡಿಸೆಂಬರ್ 2015, 6:00 IST

ಶಿರ್ವ: ಪಡುಬಿದ್ರಿ ಸಮೀಪದ ನಂದಿ ಕೂರು ಸಿಂಡಿಕೇಟ್ ಬ್ಯಾಂಕ್‌ ಶಾಖೆಯ ಲಾಕರ್ ಒಡೆದು ಲಕ್ಷಾಂತರ ರೂಪಾಯಿ ನಗದು ಕಳ್ಳತನ ನಡೆಸಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.

ನಂದಿಕೂರಿನ ಮುಖ್ಯ ಪೇಟೆಗೆ ತಾಗಿಕೊಂಡೇ ಇರುವ ಸಿಂಡಿಕೇಟ್ ಬ್ಯಾಂಕ್‌ ಶಾಖೆಯ ಕಿಟಕಿ ಒಡೆದು ಒಳ ನುಗ್ಗಿರುವ ಕಳ್ಳರು, ಬ್ಯಾಂಕಿನ ಲಾಕರ್‌ನಲ್ಲಿ ಇರಿಸಲಾಗಿದ್ದ ಸುಮಾರು ₹ 2.39 ಲಕ್ಷ ನಗದನ್ನು ದೋಚಿಕೊಂಡು ಹೋಗಿದ್ದಾರೆ.

ಶನಿವಾರ ಹಾಗೂ ಭಾನುವಾರ ಬ್ಯಾಂಕಿಗೆ ರಜೆ ಇದ್ದ ಕಾರಣ ಸೋಮ ವಾರ ಬ್ಯಾಂಕ್ ಸಿಬ್ಬಂದಿ ಬ್ಯಾಂಕಿಗೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಕಟ್ಟಡದ ಪೂರ್ವ ಬದಿಯ ಕಿಟಕಿಯ ಗಾಜು ಒಡೆದು ಕಳ್ಳರು ಒಳ ನುಗ್ಗಿ ಲಾಕರ್ ರೂಮ್ ಪ್ರವೇಶಿಸಿ ಗ್ಯಾಸ್ ಕಟ್ಟರ್ ಮೂ ಲಕ ಲಾಕರ್ ತೆರೆದು ಹಣ ದೋಚಿದ್ದಾರೆ. 

ಸೋಮವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದಿ ಪರಿಶೀಲನೆ ನಡೆಸಿದ್ದಾರೆ. ವಾಸನೆಯ ಜಾಡು ಹಿಡಿದು ಹೊರಟ ಶ್ವಾನ ಬ್ಯಾಂಕನ್ನು ಸುತ್ತುವರಿದು ಬ್ಯಾಂಕ್ ಹಿಂಭಾಗದಲ್ಲಿರುವ ಹುಲ್ಲು ಪೊದೆಗಳಿಂದ ತುಂಬಿದ ಖಾಲಿ ಜಾಗದ ಕಡೆ ತೆರಳಿ ಸುಮಾರು 500 ಮೀ. ದೂರದಲ್ಲಿರುವ ರೈಲ್ವೆ ಹಳಿಯ ಬಳಿ ನಿಂತಿದೆ. ನಾಯಿ ನಿಂತಲ್ಲೇ ತಪಾಸಣೆ ಮಾಡಿದಾಗ ರೈಲ್ವೆ ಹಳಿಗೆ ತಾಗಿಕೊಂಡೇ ಪೊದೆಯೊಳಗೆ ಅಡಗಿಸಿ ಇಟ್ಟಿದ್ದ ಎರಡು ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ.

ಕೆಲ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ಬ್ಯಾಂಕ್ ಕಳವು ನಡೆದ ಬಳಿಕ ಇಲ್ಲಿನ ಸರ್ಕಲ್‌ ಇನ್‌ಸ್ಪೆಕ್ಟರ್‌ ಸುನೀಲ್ ನಾಯ್ಕ್ ಎಲ್ಲ ಬ್ಯಾಂಕುಗಳ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದರು. ಆದರೆ, ನಂದಿಕೂರಿನ ಸಿಂಡಿಕೇಟ್ ಬ್ಯಾಂಕ್‌ ಶಾಖೆಯಲ್ಲಿ ಸಿಸಿಟಿವಿ ಅಳವಡಿಸಲಾಗಿಲ್ಲ. ಅಲ್ಲದೆ, ಇಲ್ಲಿನ ಅಲರಾಂ ವ್ಯವಸ್ಥೆ ಕೂಡಾ ಸಮರ್ಪಕವಾಗಿಲ್ಲ. ರಾತ್ರಿಯ ವೇಳೆ ಕಾವಲುಗಾರರೂ ಇರಲಿಲ್ಲ. ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರಿಗೆ ಈ ಜಾಗದಲ್ಲಿ ಏನು ನಡೆದರೂ ಗೊತ್ತಾಗದಂತೆ ಬ್ಯಾಂಕಿನ ಹೊರಗಡೆ ಒಂದೇ ಒಂದು ವಿದ್ಯುತ್ ದೀಪವನ್ನೂ ಹಾಕಲಾಗಿಲ್ಲ ಎಂದು ಸ್ಥಳೀಯರ ದೂರಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಬ್ಯಾಂಕ್ ಜಿಎಂ ವಿ.ಗಣೇಶನ್‌ ಮಾತನಾಡಿ, ‘ಗ್ರಾಮೀಣ ಪ್ರದೇಶವಾಗಿದ್ದರಿಂದ ಹೆಚ್ಚಿನ ಭದ್ರತೆ ಬಳಸಲಾಗಿಲ್ಲ. ಒಂದು ತಿಂಗಳೊಳಗೆ ಇಲ್ಲಿ ಎಟಿಎಂ ಅಳವಡಿ ಸುವ ಉದ್ದೇಶ ಹೊಂದಿದ್ದು ಆ ಬಳಿಕ ಸಿಸಿಟಿವಿ ಮತ್ತು ಭದ್ರತಾ ಸಿಬ್ಬಂದಿ ಬಳ ಸಲು ನಿರ್ಧರಿಸಲಾಗಿತ್ತು ಎಂದಿದ್ದಾರೆ.

ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.