ADVERTISEMENT

11 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ರೈಲುಗಾಡಿ ಬೋಗಿಯಲ್ಲಿ ಕೂಡಿ ಹಾಕಿ ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 8:30 IST
Last Updated 22 ಜುಲೈ 2017, 8:30 IST

ಕಾಸರಗೋಡು : ಮಂಗಳೂರಿನ ವಿವಿಧ ಕಾಲೇಜುಗಳಿಗೆ  ಕಾಸರಗೋಡು ಜಿಲ್ಲೆಯಿಂದ  ತೆರಳುವ ಹಿರಿಯ ವಿದ್ಯಾರ್ಥಿಗಳು  ಕಿರಿಯ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು 11 ಮಂದಿಯನ್ನು ರೈಲುಗಾಡಿಯಿಂದ ಹಿಡಿದು ಠಾಣೆಗೆ ತಂದು ಪೋಷಕರನ್ನು ಕರೆಸಿ , ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ದೌರ್ಜನ್ಯಕ್ಕೊಳಗಾದ ಕಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಬಗ್ಗೆ ದೂರು ಸಲ್ಲಿಸಲು ಮುಂದಾಗದೆ ಇರುವ ಕಾರಣಕ್ಕೆ ಆರೋಪಿಗಳ ಮೇಲೆ  ರೈಲು ಗಾಡಿಯಲ್ಲಿ ಹಲ್ಲೆ ಹಾಗೂ ಗಲಭೆ ನಡೆಸಿದ ತಪ್ಪಿಗೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಮಾಡಿದ ತಪ್ಪಿಗೆ ಶಿಕ್ಷೆ ಎಂಬಂತೆ ಪೊಲೀಸ್ ಠಾಣೆ ವಠಾರವನ್ನು ಅವರಿಂದ ಸ್ವಚ್ಛಗೊಳಿಸಲಾಯಿತು. 

ಬುಧವಾರ ಮಂಗಳೂರು -ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಮುಂಗಡ ಟಿಕೇಟ್‌ ಕಾಯ್ದಿರಿಸಿದ ಬೋಗಿಯ ಶೌಚಾಲಯದಲ್ಲಿ ಕಿರಿಯ ವಿದ್ಯಾರ್ಥಿ ಕೂಡಿ ಹಾಕಿದ ಹಿರಿಯ ವಿದ್ಯಾರ್ಥಿಗಳು , ಆತನ ಮೇಲೆ ರಾಗಿಂಗ್ ನಡೆಸುತ್ತಿದ್ದರು. ಶೌಚಾಲಯದ ಹೊರಗಡೆ ಒಂದು ಗುಂಪು  ಗಟ್ಟಿಯಾಗಿ ಅಶ್ಲೀಲ ಹಾಡನ್ನು ಹಾಡುತ್ತಿದ್ದರು. 

ADVERTISEMENT

ರೈಲುಗಾಡಿ ಕಾಸರಗೋಡು ನಿಲ್ದಾಣಕ್ಕೆ ತಲಪಿದಾಗ ಪೊಲೀಸ್ ತಂಡವು 9 ಮಂದಿ ವಿದ್ಯಾರ್ಥಿಗಳನ್ನು ಬಂಧನ ಮಾಡಿದ್ದರು. ತಪ್ಪಿಸಿಕೊಂಡ ಇಬ್ಬರನ್ನು ಮರುದಿನ ಬೆಳಿಗ್ಗೆ ಮಾವೇಲಿ ಎಕ್ಸ್ ಪ್ರೆಸ್ ಗಾಡಿಯಿಂದ ಬಂಧನ ಮಾಡಲಾಯಿತು.

ಆದರೆ, ಹಿರಿಯ ವಿದ್ಯಾರ್ಥಿಗಳು ತಮ್ಮ ಮೇಲೆ ರಾಗಿಂಗ್ ಮಾಡಿದ್ದಾರೆ ಎಂಬ ದೂರು ನೀಡಲು ಕಿರಿಯ ವಿದ್ಯಾರ್ಥಿಗಳು ಹಿಂಜರಿದ ಪರಿಣಾಮ ಪೊಲೀಸರು ಆರೋಪಿಗಳ ವಿರುದ್ಧ ಗಲಭೆ ಎಬ್ಬಿಸಿದ ಆರೋಪದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.

ಮನೆ ಎದುರು ನಿಲ್ಲಿಸಿದ್ದ ಕಾರು ಧ್ವಂಸ

ಕಾಸರಗೋಡು: ಇಲ್ಲಿಗೆ ಸಮೀಪದ ಚೆಂಬರಿಕ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಒಂದೂವರೆ ಗಂಟೆಗೆ ಐವರ ದುಷ್ಕರ್ಮಿಗಳ ತಂಡವು ಮನೆ ಎದುರು ನಿಲ್ಲಿಸಿದ್ದ ಕಾರನ್ನು ಧ್ವಂಸಗೊಳಿಸಿ, ಮನೆಗೆ ಹಾನಿ ಉಂಟು ಮಾಡಿದ್ದಾರೆ.

ಮನೆ ಹಾನಿಗೊಳಿಸಿದ ಬಳಿಕ ಅಲ್ಲಿಂದ ಪರಾರಿಯಾಗುವ ವೇಳೆ ದುಷ್ಕರ್ಮಿಗಳು ಸಂಚರಿಸುವ ಕಾರು ಸಮೀಪದ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಚಾಲಕ ಗಾಯಗೊಂಡಿದ್ದಾನೆ. ಕೃತ್ಯಕ್ಕೆ ಬಳಸಲಾದ ಕಾರು ಹಾಗೂ ಜೀಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದಾನೆ ಎಂದು ಶಂಕಿಸಲಾದ ಅಪಘಾತಕ್ಕೀಡಾದ ಕಾರು ಚಾಲಕ ಚೆಂಬರಿಕದ ಕಬೀರ್ (35) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಗಲ್ಫ್ ನಲ್ಲಿರುವ ಆರ್ಥಿಕ ವ್ಯವಹಾರ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ತಿಂಗಳು  ಹಿಂದೆ  ಇದೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಮಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆಯೂ ಪ್ರಕರಣ ದಾಖಲಿಸಲಾಗಿತ್ತು.

ವ್ಯಾಪಾರಿಗೆ ಇರಿದ ಆರೋಪಿ ಬಂಧನ
ಕಾಸರಗೋಡು : ಮೊಗ್ರಾಲ್ ಪುತ್ತೂರಿನ ಲೈಟ್ ಆಂಡ್ ಸೌಂಡ್ಸ್  ಅಂಗಡಿ ಮಾಲೀಕ ಇಬ್ರಾಹಿಂ ಎಂಬವರನ್ನು ಇರಿದು , ಅವರ ಅಂಗಡಿ ಧ್ವಂಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 9 ಆರೋಪಿಗಳಿದ್ದು , ಅವರಲ್ಲಿ ಇಬ್ಬರನ್ನು ಮಾತ್ರ ಬಂಧನ ಮಾಡಲಾಗಿದೆ. ಉಳಿದವರಿಗೆ ಶೋಧ ಕಾರ್ಯವು ನಡೆಯುತ್ತಿದೆ.

ಮೊಗ್ರಾಲ್ ಪುತ್ತೂರು ಪಂಚಾಯಿತಿ ಕುನ್ನು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ಇಂತ್ಯಾಸ್(25) ಬಂಧಿತ. ಚೌಕಿಯಲ್ಲಿ  ಇತ್ತೀಚೆಗೆ ಪೋಲೀಸರ ಮೇಲೆ ಹಲ್ಲೆ ನಡೆಸಿದ ಹಾಗೂ ಕೆ ಎಸ್ ಆರ್ ಟಿ ಸಿ ಬಸ್‌ಗೆ  ಕಲ್ಲು ತೂರಾಟ ನಡೆಸಿದ ಪ್ರಕರಣಗಳಲ್ಲೂ ಇಂತ್ಯಾಸ್ ಆರೋಪಿ  ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಇನ್ನೊಬ್ಬ ಆರೋಪಿ ಕುಂಬಳೆ ಪೇರಾಲ್ ಮೈಮೂನ್ ನಗರದ ಕೆ.ಎ. ಶಂಸುದ್ದೀನ್ ಎಂಬಾತನನ್ನು ಎರಡು ದಿನಗಳ ಹಿಂದೆ ಪೊಲೀಸರು ಬಂಧನ ಮಾಡಿದ್ದಾರೆ. ಇತ ಕೂಡ ಹಲವು ಪ್ರಕರಣದ ಆರೋಪಿ. 

ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ 
ಕಾಸರಗೋಡು: ಮೂರು ದಿನಗಳ ಹಿಂದೆ ಕಾಣೆಯಾದ ಯುವಕನ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿದೆ. ಬಂದಡ್ಕ ಮಾನಡ್ಕ ಶಾಸ್ತ್ರಿ ನಗರದ ಅಂಬಾಡಿ ಎಂಬವರ ಮಗ ಮಣಿ (32) ಮೃತ ಪಟ್ಟವರು.

ಕೂಲಿ ಕೆಲಸಕ್ಕೆ ಎಂದು ಮಂಗಳವಾರ ಮನೆಯಿಂದ ಹೋಗಿದ್ದ ಮಣಿ ಕಾಣೆಯಾಗಿದ್ದರು. ಶನಿವಾರ ಅವರ ಮೃತದೇಹ ಮನೆ ಆಚೆಯ ಹಿತ್ತಿಲಿನ ಬಾವಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ಎಂಜಿನಿಯರಿಗೆ ವಿದ್ಯುತ್ ಆಘಾತ
ಕಾಸರಗೋಡು:
ವಿದ್ಯುತ್ ಲೈನ್‌ ದುರಸ್ತಿ ವೇಳೆ ತುಂಡಾಗಿ ಬಿದ್ದ ತಂತಿ ಸ್ಪರ್ಶದಿಂದ ವಿದ್ಯುತ್ ಮಂಡಳಿ ಮುಳ್ಳೇರಿಯ ವಿಭಾಗೀಯ ಕಚೇರಿ ಎಂಜಿನಿಯರ್ ಎರ್ನಾಕುಲಂ ನಿವಾಸಿ ಜಿನೇಶ್ (30) ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಶುಕ್ರವಾರ ಬೆಳಿಗ್ಗೆ ಆದೂರು ಬನದಡ್ಕದಲ್ಲಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಕ್ಷಣವೇ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ತಂದು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ವ್ಯಕ್ತಿ ನಾಪತ್ತೆ
ದೂರು ದಾಖಲು
ಕಾಸರಗೋಡು:
ಇಲ್ಲಿಗೆ ಸಮೀಪದ ಪರವನಡ್ಕ ಜುವೆನೈಲ್ ಹೋಂ ನಲ್ಲಿದ್ದ ಕಣ್ಣೂರು ಪುತ್ತೂರಿನ ವೆಲ್ಲೇರಿ ನಿವಾಸಿ ಎಂ. ಬಿ. ಆಜ್ಞಾಸ್(17) ಕಾಣೆಯಾದ ವ್ಯಕ್ತಿ.
ಪೊಲೀಸರು ಆತನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

ಯುವತಿ ಮೃತದೇಹ ಪತ್ತೆ
ಕಾಸರಗೋಡು :
ಕಾಲೇಜು ವಿದ್ಯಾರ್ಥಿನಿ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಮನೆಯ ಒಳಗೆ ಪತ್ತೆಯಾಗಿದೆ. ಚಿತ್ತಾರಿಕ್ಕಲ್ ಕಡುಮೇನಿ ನಿವಾಸಿ ಅನುಷಾ (18)ಮೃತಪಟ್ಟವರು.
ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಶವ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.