ADVERTISEMENT

23ರಂದು ಫೋನ್–ಇನ್ ಕಾರ್ಯಕ್ರಮ: ‘ಸಾಕ್ಷಿಗಳನ್ನು ಇಟ್ಟುಕೊಂಡು ಮಾತನಾಡಿ’

​ಪ್ರಜಾವಾಣಿ ವಾರ್ತೆ
Published 20 ಮೇ 2017, 4:59 IST
Last Updated 20 ಮೇ 2017, 4:59 IST

ಮಂಗಳೂರು: ಮಳವೂರು ಕಿಂಡಿ ಅಣೆಕಟ್ಟೆಯಲ್ಲಿ ನೀರು ಕಲುಷಿತಗೊಳ್ಳಲು ಪಾಲಿಕೆ ತ್ಯಾಜ್ಯವನ್ನು ಬಿಟ್ಟಿರುವುದೇ ಕಾರಣ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮೇಯರ್‌ ಕವಿತಾ ಸನಿಲ್‌, ಸ್ಥಳೀಯ ಸಂಸ್ಥೆಗಳ ವಿರುದ್ಧ ಆರೋಪ ಮಾಡುವ ಮೊದಲು ಸ್ಪಷ್ಟ ಸಾಕ್ಷಿಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

ನಗರದ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಳವೂರು ಕಿಂಡಿ ಅಣೆಕಟ್ಟೆಯಲ್ಲಿನ ನೀರು ಕಲುಷಿತಗೊಳ್ಳಲು ಪಾಲಿಕೆ ತ್ಯಾಜ್ಯ ನೀರು ಕಾರಣವಲ್ಲ. ಪಾಲಿಕೆಯ ತ್ಯಾಜ್ಯ ನೀರಿನ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದಾಗ್ಯೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಯಾವ ಆಧಾರದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರೇತರ ಸದಸ್ಯೆಯಾಗಿರುವ ಮೇಯರ್‌ ಕವಿತಾ ಸನಿಲ್‌, ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡ ಳಿಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಅದಕ್ಕೂ ಮೊದಲು ಮಂಡಳಿ ಅಧ್ಯಕ್ಷ ಲಕ್ಷ್ಮಣ ಅವರ ಜತೆಗೆ ಚರ್ಚಿಸಲಾಗು ವುದು ಎಂದು ತಿಳಿಸಿದರು.

ADVERTISEMENT

ಈ ಹಿಂದೆ ವಿದ್ಯುತ್‌ ಸಮಸ್ಯೆಯಾದ ಸಂದರ್ಭದಲ್ಲಿ ಪಾಲಿಕೆಯ ತ್ಯಾಜ್ಯ ನೀರು ಫಲ್ಗುಣಿ ನದಿಗೆ ಸೇರಿತ್ತು. ಆದರೆ, ಕೂಡಲೇ ಅದನ್ನು ನಿವಾರಿಸಲಾಗಿದ್ದು, ಸದ್ಯಕ್ಕೆ ಜನರೇಟರ್‌ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್‌ ಇಲ್ಲದೇ ಇದ್ದರೂ, ತ್ಯಾಜ್ಯ ನೀರಿನ ವಿಲೇವಾರಿ ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ಪಾಲಿಕೆಯ ತ್ಯಾಜ್ಯ ನೀರು ಫಲ್ಗುಣಿ ನದಿ ಸೇರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಳವೂರು ಕಿಂಡಿ ಅಣೆಕಟ್ಟೆಯಲ್ಲಿ ಜಲಚರಗಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಾಗಿದೆ. ಆಮ್ಲಜನಕ ಕಡಿಮೆ ಆಗಲು ಏನು ಕಾರಣ ಎಂಬುದನ್ನು ಪತ್ತೆ ಮಾಡಬೇಕಾಗಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್‌ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ. ಆಧಾರರಹಿತವಾಗಿ ಈ ರೀತಿ ದೂರಲಾಗುತ್ತಿದೆ ಎಂದರು.

ಪಾಲಿಕೆ ಸಚೇತಕ ಎಂ.ಶಶಿಧರ್‌ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್‌ ರವೂಫ್‌ ಇದ್ದರು.

**

23ರಂದು ಫೋನ್–ಇನ್ ಕಾರ್ಯಕ್ರಮ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸಲು ನೇರ ಫೋನ್‌–ಇನ್‌ ಕಾರ್ಯಕ್ರಮವನ್ನು ಇದೇ 23 ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದರು.

ಫೋನ್–ಇನ್‌ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇಚ್ಛಿಸುವ ಜನರು ದೂರವಾಣಿ ಸಂಖ್ಯೆ 0824–2220301 ಅಥವಾ 2220318ಗೆ ಕರೆ ಮಾಡಬಹುದು. ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಎಲ್ಲ ಅಧಿಕಾರಿಗಳು ಹಾಜರಿದ್ದು, ಜನರ ಸಮಸ್ಯೆಗಳಿಗೆ ಉತ್ತರಿಸಲಿದ್ದಾರೆ ಎಂದು ಹೇಳಿದರು.

**

ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ತರಬೇತಿ ಪಡೆದ 10 ಜನರ ತಂಡವನ್ನು ರಚಿಸಲಾಗಿದ್ದು, ಜೂನ್‌ 1ರಿಂದ ಕಾರ್ಯಾರಂಭ ಮಾಡಲಿದೆ.
-ಕವಿತಾ ಸನಿಲ್‌, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.