ADVERTISEMENT

ದಕ್ಷಿಣ ಕನ್ನಡ: ಬಿರು ಬಿಸಿಲಿನ ಪ್ರತಾಪ– ಏರುತ್ತಲೇ ಇದೆ ತಾಪ

ಪಿ.ವಿ.ಪ್ರವೀಣ್‌ ಕುಮಾರ್‌
Published 18 ಮಾರ್ಚ್ 2024, 6:10 IST
Last Updated 18 ಮಾರ್ಚ್ 2024, 6:10 IST
<div class="paragraphs"><p>ಮಂಗಳೂರಿನಲ್ಲಿ ಬಿಸಿಲ ಝಳ ದಿನೇ ದಿನೇ ಹೆಚ್ಚುತ್ತಿದ್ದು, ಜನರಿಂದ ತುಂಬಿರುತ್ತಿದ್ದ ಬಲ್ಮಠ ಮುಖ್ಯ ರಸ್ತೆಯಲ್ಲೂ ಜನ ಸಂಚಾರ ಭಾನುವಾರ ವಿರಳವಾಗಿತ್ತು</p></div>

ಮಂಗಳೂರಿನಲ್ಲಿ ಬಿಸಿಲ ಝಳ ದಿನೇ ದಿನೇ ಹೆಚ್ಚುತ್ತಿದ್ದು, ಜನರಿಂದ ತುಂಬಿರುತ್ತಿದ್ದ ಬಲ್ಮಠ ಮುಖ್ಯ ರಸ್ತೆಯಲ್ಲೂ ಜನ ಸಂಚಾರ ಭಾನುವಾರ ವಿರಳವಾಗಿತ್ತು

   

– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಮಂಗಳೂರು: ಈಗಷ್ಟೇ ಬೇಸಿಗೆ ಅಡಿ ಇರುತ್ತಿದೆ. ಅದಾಗಲೇ ದಕ್ಷಿಣ ಕನ್ನಡ ಜಿಲ್ಲೆ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಮಾ.6ರಂದು ಜಿಲ್ಲೆಯಲ್ಲಿ ಈ ತಿಂಗಳ ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಮುಂಬರುವ ದಿನಗಳಲ್ಲಿ ಎಷ್ಟು ‘ಬಿಸಿ’ ತಟ್ಟಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ADVERTISEMENT

ಹೊತ್ತು ನೆತ್ತಿಗೇರುತ್ತಿದ್ದಂತೆಯೇ ಮನೆಯಿಂದ ಹೊರಗೆ ಬರಲಾರಷ್ಟು ಬಿಸಿಲ ಝಳ ಹಾಗೂ ಸಂಜೆಯಾದರೂ ಆರದ ಕಾವು ಜನರ ಬದುಕನ್ನು ಹೈರಾಣಾಗಿಸಿವೆ. ಒಂದೆಡೆ ಇಲ್ಲಿನ ತೇವಾಂಶ ಪ್ರಮಾಣವೂ ಶೇ 70ರ ದಾಟುತ್ತದೆ.  ಮೈಯಿಂದ ಒಂದೇ ಸಮನೆ ಇಳಿಯುವ ಬೆವರಧಾರೆಗೆ ಜನ ಬೆಂದು ಬಸವಳಿಯುತ್ತಿದ್ದಾರೆ.

‘ಜಿಲ್ಲೆಯಲ್ಲಿ ಮಾರ್ಚ್‌ ತಿಂಗಳಲ್ಲಿ ಉಷ್ಣಾಂಶ 40 ಡಿಗ್ರಿವರೆಗೂ ತಲುಪಿದ್ದು ಇದೆ. ಈ ವರ್ಷ ಇನ್ನೂ ತಾಪಮಾನ ಅಷ್ಟು ಗರಿಷ್ಠ ಮಟ್ಟಕ್ಕೆ ತಲುಪಿಲ್ಲ. ಮುಂದಿನ ವಾರ ಜಿಲ್ಲೆಯಲ್ಲಿ ಮೂರು ದಿನಗಳು ಮಳೆಯಾಗುವ ಸಾಧ್ಯತೆ ಇದೆ. ಮಳೆಯಾಗದೇ ‌ಇದ್ದರೆ ಈ ಸಲವೂ ಮಾರ್ಚ್ ತಿಂಗಳಲ್ಲೇ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಬಹುದು’ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

‘ಉಷ್ಣಾಂಶ 36–37 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಅವರ ಆರೋಗ್ಯ ಏರುಪೇರಾಗದಂತೆ ಮುನ್ನೆಚ್ಚರಿಕೆವಹಿಸಬೇಕು. ಅಂಗನವಾಡಿ ಮತ್ತು ಶಾಲೆಗಳಲ್ಲಿ ಮಕ್ಕಳು ಬಿಸಿಲಿನಲ್ಲಿ ಆಟ ಆಡಲು ಅವಕಾಶ ನೀಡಬಾರದು. ಮಕ್ಕಳಿಗೆ ಕುದಿಸಿ ತಂಪಾಗಿಸಿದ ನೀರನ್ನೇ ಕುಡಿಯಲು ನೀಡಬೇಕು. ಹಿರಿಯರು ಬಿಸಿಲಿಗೆ ಹೋಗದಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಮ್ಮಯ್ಯ.

‘ಕರಾವಳಿಯಲ್ಲಿ ತೇವಾಂಶ ಜಾಸ್ತಿ. ಹಾಗಾಗಿ ಹೊರಗಿನ ತಾಪಮಾನ ಹೆಚ್ಚಾದಂತೆ ಬೆವರುವಿಕೆಯೂ ಜಾಸ್ತಿಯಾಗುತ್ತದೆ.  ಜಾಸ್ತಿ ಬೆವರು ಹೊರಗೆ ಹೋಗುವುದರಿಂದ ದೇಹವು ನಿರ್ಜಲೀಕರಣಕ್ಕೆ ಒಳಗಾಗುವ ಅಪಾಯ ಇರುತ್ತದೆ. ಅದನ್ನು ತಪ್ಪಿಸಲು ಸಾಧ್ಯವಾದಷ್ಟು ಜಾಸ್ತಿ ನೀರು ಕುಡಿಯಬೇಕು. ಬೇರೆ ಅವಧಿಗೆ ಹೋಲಿಸಿದರೆ, ಇಲ್ಲಿ ನಮ್ಮ ದೇಹಕ್ಕೆ ದಿನದಲ್ಲಿ ಕನಿಷ್ಠ 2.5 ಲೀಗಳಷ್ಟು ಹೆಚ್ಚು ನೀರಿನ ಅಗತ್ಯ ಇರುತ್ತದೆ. ಕುದಿಸಿ ಆರಿಸಿದ ಶುದ್ಧ ನೀರನ್ನೇ ಕುಡಿಯುವ ಅಭ್ಯಾಸ ಒಳ್ಳೆಯದು. ಕುದಿಸಿ ಆರಿಸಿದ ನೀರಿನಿಂದ ತಯಾರಿಸಿದ ಪಾನೀಯಗಳು, ಮಜ್ಜಿಗೆ, ಗಂಜಿಯನ್ನೂ ಹೆಚ್ಚು ಸೇವಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಬಿಸಿಲಿನಲ್ಲಿ ಝಳ ಹೆಚ್ಚು ಇದ್ದಾಗ  ಹೊರಗಡೆ ಅಡ್ಡಾಡುವುದನ್ನು ಆದಷ್ಟು ತಪ್ಪಿಸಬೇಕು. ಇದರಿಂದ ಬಳಲುವಿಕೆ ಹೆಚ್ಚಾಗಿ, ತಲೆಸುತ್ತು ಬಂದು ಸ್ಮೃತಿ ತಪ್ಪುವ ಸಾಧ್ಯತೆಯೂ ಇರುತ್ತದೆ. ಅಂತಹವರನ್ನು ಬಿಸಿಲಿನ ತಾಪ ತೀರಾ ಜಾಸ್ತಿ ಆದರೆ ‘ಹೀಟ್‌ ಸ್ಟ್ರೋಕ್‌’ ಉಂಟಾಗುವ ಅಪಾಯವೂ ಇದೆ’ ಎಂದರು.

ಏನಿದು ಹೀಟ್‌ಸ್ಟ್ರೋಕ್‌?: ದೇಹವನ್ನು ಎಡೆಬಿಡದೆ  ಬಿಸಿಲಿಗೆ ಒಡ್ಡಿಕೊಂದಾಗ ಉಂಟಾಗುವ ದೇಹಸ್ಥಿತಿ ಇದು. ಹೀಟ್‌ಸ್ಟ್ರೋಕ್‌ನಿಂದ ದೇಹದ ಉಷ್ಣಾಂಶ ಒಂದೇ ಸಮನೆ ಹೆಚ್ಚಳವಾಗುತ್ತದೆ. ಬೆವರಿನ ಮೂಲಕ ದೇಹದ ಉಷ್ಣಾಂಶ ಹೊರ ಹಾಕುವ ವ್ಯವಸ್ಥೆ ವಿಫಲವಾಗಿ, ದೇಹದ ಉಷ್ಣಾಂಶ 104 ಡಿಗ್ರಿ ಫ್ಯಾರನ್‌ ಹೀಟ್‌ಗಿಂತಲೂ ಜಾಸ್ತಿಯಾಗುತ್ತದೆ.

ದೇಹ ನಿರ್ಜಲೀಕರಣಗೊಳ್ಳದಂತೆ ಎಚ್ಚರ ವಹಿಸುವುದು ಬೇಸಿಗೆಯಲ್ಲಿ ನಾವು ಬಹುಮುಖ್ಯವಾಗಿ ಮಾಡಬೇಕಾದ ಕಾರ್ಯ. ಬಿರು ಬಿಸಿಲಿಗೆ ದೇಹವನ್ನು ನೇರವಾಗಿ ಒಡ್ಡಿಕೊಳ್ಳಬೇಡಿ
ಡಾ.ತಿಮ್ಮಯ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.