ADVERTISEMENT

ಎಂಜಿನಿಯರ್ ಕೊಲೆ: ಶಂಕಿತ ಆರೋಪಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 15:32 IST
Last Updated 4 ಜುಲೈ 2018, 15:32 IST

ಕಾಸರಗೋಡು : ಕಾಸರಗೋಡು ಬಿ ಎಸ್ ಎನ್ ಎಲ್ ವಿಭಾಗೀಯ ಎಂಜಿನಿಯರ್ ಬೋವಿಕ್ಕಾನ ಬಳಿಯ ಮಲ್ಲ ನಿವಾಸಿ ಕೆ . ಸುಧಾಕರ(58) ಅವರ ಕೊಲೆ ಪ್ರಕರಣದ ಶಂಕಿತ ಆರೋಪಿ ನೆರೆಮನೆಯ ನಿವಾಸಿ ಕೊಲೆ ನಡೆದ ಒಂದೂವರೆ ಗಂಟೆಯ ಬಳಿಕ ಕುಂಬಳೆ ರೈಲುನಿಲ್ದಾಣದ ಬಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದಾನೆ.

ಕೊಲೆಯಾದ ಒಂದೂವರೆ ಗಂಟೆಯ ಬಳಿಕ ಸುಧಾಕರರ ನೆರೆಮನೆಯ ನಿವಾಸಿ ಪಿ. ರಾಧಾಕೃಷ್ಣ (51) ಕುಂಬಳೆ ರೈಲುಹಳಿಯಲ್ಲಿ ಸಾವನ್ನಪ್ಪಿದ್ದ.ಸುಧಾಕರ ಕೊಲೆಯಾದ ಸ್ವಲ್ಪ ಹೊತ್ತಿನಲ್ಲಿ ತನ್ನ ಮನೆಗೆ ಬಂದ ರಾಧಾಕೃಷ್ಣ ಇನ್ನು ತನ್ನನ್ನು ಹುಡುಕ ಬೇಡಿ ಎಂದು ಮನೆಯವರಲ್ಲಿ ತಿಳಿಸಿ ಸ್ಕೂಟರ್ ಒಂದರಲ್ಲಿ ಕುಂಬಳೆಗೆ ತೆರಳಿದ್ದ ಎನ್ನಲಾಗಿದೆ.

ಮಂಗಳೂರಿನಿಂದ ತಿರುವನಂತಪುರಕ್ಕೆ ಸಾಗುವ 7 ಗಂಟೆಯ ಹೊತ್ತಿನ ಮಲಬಾರ್ ಎಕ್ಸ್ ಪ್ರೆಸ್ ರೈಲುಗಾಡಿಯ ಒಂದು ಭಾಗದಿಂದ ಹತ್ತಿದ ರಾಧಾಕೃಷ್ಣ ಇನ್ನೊಂದು ಭಾಗದಲ್ಲಿ ಇಳಿದು ರೈಲುಗಾಡಿಯ ಅಡಿಭಾಗಕ್ಕೆ ಹೋಗಿ ಹಳಿಯ ಮೇಲೆ ಅಡ್ಡವಾಗಿ ಮಲಗಿದ್ದ ಎನ್ನಲಾಗಿದೆ. ಅಲ್ಲೇ ಪಕ್ಕದ ಪ್ಲಾಟ್‌ ಫಾರಂ ನಲ್ಲಿದ್ದ ಪ್ರಯಾಣಿಕರು ಬೊಬ್ಬೆ ಹಾಕಿದರೂ ರೈಲುಗಾಡಿ ಚಲಿಸತೊಡಗಿತ್ತು. ಆತನ ಸೊಂಟದಿಂದ ಶರೀರ ಎರಡು ತುಂಡುಗಳಾಗಿ ಬೇರ್ಪಟ್ಟಿತ್ತು. ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ
ಒಯ್ದರು.

ADVERTISEMENT

ಕೊಲೆಯಾದ ಸುಧಾಕರ ಮತ್ತು ಆತ್ಮಹತ್ಯೆ ಮಾಡಿದ ರಾಧಾಕೃಷ್ಣ ಮಧ್ಯೆ ಆಸ್ತಿ ವಿವಾದ , ದಾರಿ ವಿವಾದ ಇದ್ದುವು ಎನ್ನಲಾಗಿದೆ. ಈ ಬಗ್ಗೆ ನ್ಯಾಯಾಲಯದಿಂದ ತೀರ್ಪಾಗಿ ಸಮಸ್ಯೆ ಪರಿಹಾರವಾಗಿದ್ದರೂ , ನಿನ್ನೆ ಪಕ್ಕನೆ ಕೊಲೆಮಾಡಲು ಕಾರಣ ಏನೆಂದು
ಪೊಲೀಸರಿಗೆ ತಿಳಿದಿಲ್ಲ.

ಘಟನೆ: ಮಂಗಳವಾರ ಸಂಜೆ ಕಾಸರಗೋಡಿನ ಕಚೇರಿಯಿಂದ ಬಸ್‌ನಲ್ಲಿ ಮಲ್ಲದಲ್ಲಿ ಬಂದಿಳಿದ ಸುಧಾಕರ ಹತ್ತಿರದಲ್ಲೇ ಇರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ಗೇಟಿನ ಬಳಿಯಲ್ಲಿ ಕೊಲೆಯಾಗಿ ಬಿದ್ದಿದ್ದರು. ಅವರ ಕುತ್ತಿಗೆಯ
ಹಿಂಭಾಗಕ್ಕೆ ಮಚ್ಚಿನಿಂದ ಕಡಿಯಲಾಗಿತ್ತು. ಗಂಭೀರ ಗಾಯಗಳಾದ ಅವರು ಅಲ್ಲೇ ಮೃತರಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಅವರ ಮನೆಯವರು ಕಂಡು ಆಸ್ಪತ್ರೆಗೆ ತಲಪಿಸಿದ್ದರೂ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.