ADVERTISEMENT

ಉಪ್ಪಾರರ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಕರ ಚಿಂತನೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 4:59 IST
Last Updated 22 ಮೇ 2017, 4:59 IST

ದಾವಣಗೆರೆ: ಹಿಂದುಳಿದ ಸಮಾಜವಾಗಿರುವ ಉಪ್ಪಾರರ ಶೈಕ್ಷಣಿಕ ಮಟ್ಟ ಸುಧಾರಣೆಗೆ ಹೇಗೆ’ ಎಂದು ಆ ಸಮುದಾಯದ ಶಿಕ್ಷಕರು ಚಿಂತನೆ ನಡೆಸಿದರು. ಡಿ.ವೈ.ಉಪ್ಪಾರ್ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರತಿಷ್ಠಾನ ಏರ್ಪಡಿಸಿದ್ದ ಶಿಕ್ಷಕರ ಸೌಹಾರ್ದ ಭೇಟಿ ಸಮಾರಂಭಕ್ಕೆ ಚಾಲನೆ ನೀಡಿದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ, ಮೌಢ್ಯ, ಅನಕ್ಷರತೆ ಮತ್ತು ಬಡತನ ಸಮುದಾಯಗಳು ಹಿಂದುಳಿಯಲು ಕಾರಣ. ಹೀಗಾಗಿ ಮೊದಲು ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂದರು.

ಅಂಬೇಡ್ಕರ್‌ ಅವರ ಚಿಂತನೆಯಂತೆ ಹಿಂದುಳಿದ ಸಮಾಜಗಳು ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಒತ್ತು ನೀಡಬೇಕು. ಹಕ್ಕುಗಳನ್ನು ಪಡೆಯಲು ಹೋರಾಟ ಅವಶ್ಯ. ಹೋರಾಟಕ್ಕೆ ಧ್ವನಿ ಸಿಗಲು ಸಂಘಟನೆ ಅಗತ್ಯ. ಸಂಘಟನೆಗೆ ಶಕ್ತಿ, ನೈತಿಕ ಬಲ ಬರಬೇಕಾದರೆ ಶಿಕ್ಷಣ ಅತ್ಯವಶ್ಯ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಕೇವಲ ಒಂದು ತತ್ವವಲ್ಲ. ಅದು ಬದುಕಿನ ದಾರಿ. ಪ್ರಜೆಗಳು ಬಯಸಿದ ಸೌಲಭ್ಯಗಳು ಅವರಿಗೆ ಸಿಗಬೇಕು. ಅವು ಸಿಗದಿದ್ದಾಗ ಹೋರಾಟ ಅನಿವಾರ್ಯ. ಹೋರಾಟದ ಬಗ್ಗೆ ಉಪ್ಪಾರ ಸಮಾಜದಲ್ಲಿ ಜಾಗೃತಿ ಮೂಡಬೇಕಿದೆ ಎಂದು ಅವರು ಹೇಳಿದರು.

ADVERTISEMENT

ಸಮುದಾಯದ ಶಿಕ್ಷಕರು ಉಪ್ಪಾರ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಜನವರಿ ಮತ್ತು ಫೆಬ್ರುವರಿ ತಿಂಗಳಿನಲ್ಲಿ ವಿಶೇಷ ತರಗತಿಗಳನ್ನು ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮಾರ್ಗದರ್ಶನ ನೀಡಿ. ಪ್ರತಿಭಾ ಪುರಸ್ಕಾರಕ್ಕಿಂತ ನೀಟ್‌ ಮತ್ತು ಸಿಇಟಿಯಲ್ಲಿ ಉತ್ತಮ ರ್‍ಯಾಂಕ್ ಪಡೆಯಲು ಸಾಧ್ಯವಾಗುವಂತೆ ತರಬೇತಿ ನೀಡುವುದು ಉತ್ತಮ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಆಂಜಿನಪ್ಪ ಮಾತನಾಡಿ, ‘ಉಪ್ಪಾರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಜತೆಗೆ ಅಧ್ಯಯನ ಸಾಮಗ್ರಿಗಳನ್ನೂ ಕೊಡೋಣ. ಇದರಿಂದ ಅವರ ಓದಿಗೆ ಅನುಕೂಲವಾಗಲಿದೆ’ ಎಂದರು.

ಶಿಕ್ಷಕ ಲಕ್ಕಪ್ಪ ಮಾತನಾಡಿ, ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಉತ್ತಮವಾಗಿದ್ದರೂ ಉನ್ನತ ಶಿಕ್ಷಣ ಪಡೆಯುವಲ್ಲಿ ಹಿಂದೆ ಬೀಳುತ್ತಿದ್ದಾರೆ. ಹೀಗಾಗಿ ಅವರಿಗೆ ಮಾರ್ಗದರ್ಶನ ನೀಡಲು ಶಿಕ್ಷಕರು ಮುಂದಾಗೋಣ’ ಎಂದು ಶಿಕ್ಷಕರಿಗೆ ಮನವಿ ಮಾಡಿದರು.

ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪ್ಪಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ತಿಪ್ಪಣ್ಣ, ಶಿವಮೊಗ್ಗದ ಶರಾವತಿ ಡೆಂಟಲ್ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ. ಉಮೇಶ್‌ಬಾಬು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಬಸವೇಗೌಡ, ಶಿಕ್ಷಣ ಇಲಾಖೆ ನಿವೃತ್ತ ಸಹ ನಿರ್ದೇಶಕ ಹನುಮಂತರಾಯ, ರಾಜ್ಯ ಉಪ್ಪಾರ ಸಂಘದ ಮಾಜಿ ಅಧ್ಯಕ್ಷ ಎಸ್.

ಬಸವರಾಜಪ್ಪ, ನಗರ ಪಾಲಿಕೆ ಉಪ ಮೇಯರ್ ಮಂಜಮ್ಮ ಹನುಮಂತಪ್ಪ, ನಿವೃತ್ತ ಶಿಕ್ಷಕ ಕೆ.ತಿಪ್ಪೇಶಪ್ಪ, ಉಪ್ಪಾರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಎಸ್.ಚಂದ್ರಪ್ಪ, ಮಂಜಪ್ಪ, ಗೋಪಾಲ್‌, ಎ.ವಿ.ಲೋಕೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.