ADVERTISEMENT

ಏರಿದ ತಾಪಮಾನ: ಇಳಿದ ಮಾವು ಇಳುವರಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:26 IST
Last Updated 20 ಏಪ್ರಿಲ್ 2017, 5:26 IST

ಸಂತೇಬೆನ್ನೂರು: ಸಂತೇಬೆನ್ನೂರು ಹೋಬಳಿ ಮಳೆ ಕೊರತೆ, ಅಂತರ್ಜಲ ಮಟ್ಟದಲ್ಲಿನ ಸತತ ಕುಸಿತ, ತಾಪಮಾನ ಹೆಚ್ಚಳದಿಂದ ಮಾವು ಬೆಳೆ ನಾಶ ಗೊಂಡಿದೆ. ಸತತ ಆರ್ಥಿಕ ಹೊಡೆತಕ್ಕೆ ಸಿಲುಕಿದ ಬೆಳೆಗಾರನ ಸ್ಥಿತಿ ಚಿಂತಾಜನಕ ವಾಗಿದೆ. ‘ಮಾವಿನ ಕಣಜ’ವೆಂದೇ ಖ್ಯಾತಿ ಪಡೆದ ಹೋಬಳಿಯಲ್ಲೇ ಹೀಗಾಗಿ ರುವುದು ವಿಪರ್ಯಾಸ.
ಜಿಲ್ಲೆಯ 4,000 ಹೆಕ್ಚೇರ್‌ನಲ್ಲಿ ಮಾವು ಬೆಳೆ ಇದೆ. ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಭಾಗದಲ್ಲಿಯೇ 3,000 ಹೆಕ್ಟೇರ್ ಮಾವು ಬೆಳೆಯಲಾಗುತ್ತಿದೆ.

ಹೋಬಳಿಯ ದೊಡ್ಡಬ್ಬಿಗೆರೆ, ಚಿಕ್ಕಬ್ಬಿ ಗೆರೆ, ಕೆ.ಬಿ.ಗ್ರಾಮ, ಕುಳೇನೂರು ವ್ಯಾಪ್ತಿ ಯಲ್ಲಿ ಅತ್ಯಧಿಕ ಮಾವಿನ ತೋಪುಗಳು ಹರಡಿವೆ. ಬಹುತೇಕ ರೈತರು ಮಳೆ ಯಾಧಾರಿತ ಮಾವು ಬೆಳೆಯನ್ನೇ ನಂಬಿ ದ್ದಾರೆ. ಮಳೆಗಾಲದಲ್ಲಿ ಉತ್ತಮ ಮಳೆ ಬಿದ್ದಲ್ಲಿ ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಇರುವುದಿಲ್ಲ. ಸತತ ಬರಗಾಲಕ್ಕೆ ಸಿಲು ಕಿದ ಮಾವು ಬೇಸಿಗೆಯಲ್ಲಿ ನೀರಿಲ್ಲದ ಒಣಗಿ ನಿಂತಿವೆ. ಶೇ 90ರಷ್ಟು ಮಾವು ಫಸಲು ಕುಸಿದಿದೆ. ಕೆಲವೆಡೆ ಬಿಸಿಲಿನ ಹೊಡೆತಕ್ಕೆ ಮರಗಳು ಒಣಗಿ ನಿಂತಿವೆ. ಬೇಸತ್ತ ರೈತರು ಕಡಿದು ಮಾರಾಟ ಮಾಡಿದ್ದಾರೆ ಎನ್ನುತ್ತಾರೆ ದಿನೇಶ್.

ಈ ಭಾಗದಲ್ಲಿ ಅಲ್ಫೊನ್ಸೊ, ಸಿಂಧೂರ, ತೋತಾಪುರಿ, ನೀಲಂ ಜಾತಿಯ ಮಾವಿನ ತಳಿಗಳು ಕಾಣಸಿಗುತ್ತವೆ. ಇದರಲ್ಲಿ ಉತ್ಕೃಷ್ಟ, ಉತ್ತಮ ಲಾಭ ತರುವ ಆಲ್ಫೊನ್ಸೊ, ಸಿಂಧೂರ ತಳಿಗಳಿಗೆ ಬೇಡಿಕೆ ಹೆಚ್ಚು.ಸುಮಾರು 2,000 ಹೆಕ್ಟೇರ್‌ ಭಾಗದಲ್ಲಿರುವ ಶೇ 90ರಷ್ಟು ಮಾವಿನ ತೋಪುಗಳಲ್ಲಿ ಒಂದು ಕಾಯಿಯೂ ಕಾಣಸಿಗುವುದಿಲ್ಲ. ಬಿಸಿಲಿನ ತಾಪಕ್ಕೆ ಹೂವೆಲ್ಲ ಉದುರಿ ಬರಡಾಗಿ ನಿಂತಿವೆ. ಕೆಲವೆಡೆ ಎಲೆಗಳು ಉದುರಿ ರೆಂಬೆಗಳು ಅಸ್ಥಿಪಂಜರದಂತೆ ಗೋಚರಿಸುತ್ತಿವೆ. ಉಳಿದಂತೆ ನೀರಿಲ್ಲದೆ ತೋತಾಪುರಿಯ ಗಾತ್ರ ಕಡಿಮೆಯಾಗಿದೆ ಎನ್ನುತ್ತಾರೆ ರೈತ ಜಿ.ಎಸ್‌.ಶಿವಕುಮಾರ್.

ADVERTISEMENT

ರೈತರು ಮಾವು ಬೆಳೆಯನ್ನು ಗೇಣಿದಾರರಿಗೆ ಕೊಡುವ ಪದ್ಧತಿ ರೂಢಿಯಲ್ಲಿದೆ. ಹಲವು ದಶಕಗಳಿಂದ ಕೊಡು–ಕೊಳ್ಳುವ ವ್ಯವಹಾರ ಸುಗಮವಾಗಿ ಸಾಗಿತ್ತು. ಈ ಬಾರಿ ಫಸಲು ಮಾಯವಾದ ಕಾರಣ ಗೇಣಿದಾರರು ತೋಟ ತೊರೆದಿದ್ದಾರೆ. ಒಪ್ಪಂದದ ಹಣ ನೀಡಲು ಇಳುವರಿ ಶೂನ್ಯತೆ ಕಾರಣವಾಗಿದೆ. ಇದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. 4 ಎಕರೆ ಮಾವಿನ ತೋಟವನ್ನು ಎರಡು ವರ್ಷದ ಅವಧಿಗೆ ₹ 4 ಲಕ್ಷಕ್ಕೆ ಗೇಣಿ ನೀಡಲಾಗಿತ್ತು. ಫಸಲು ಬಿಡದ ಕಾರಣ ಗೇಣಿದಾರ ಮುಂಗಡ ₹ 40,000 ನೀಡಿ ಕೈಚೆಲ್ಲಿದ್ದಾರೆ ಎನ್ನುತ್ತಾರೆ ಮಾವು ಬೆಳೆಗಾರ ಸಂಗಪ್ಪ.

ನೀರುಣಿಸಲು ಕೆಲ ರೈತರು ಕೊಳವೆ ಬಾವಿ ಕೊರೆಯಿಸಿದ್ದಾರೆ. ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ಯಶಸ್ಸು ಕಾಣುತ್ತಿಲ್ಲ. ಕೈ ಸುಟ್ಟುಕೊಂಡ ರೈತರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ‘ಬಿಸಿಲಿನ ತಾಪಕ್ಕೆ ತೋಟ ಒಣಗಿದೆ. 5 ಎಕರೆ ಮಾವನ್ನು 2 ವರ್ಷಗಳಿಗೆ ₹ 5 ಲಕ್ಷಕ್ಕೆ ಗೇಣಿ ಕೊಟ್ಟಿದ್ದೆ. ಬೆಳೆ ಹಾನಿಯಿಂದ ಹಣ ಕೈ ಸೇರಿಲ್ಲ’ ಎನ್ನುತ್ತಾರೆ ಮಂಜುನಾಥ್.ಬೆಳೆನಾಶಕ್ಕೆ ಸರ್ಕಾರ ಪರಿಹಾರ ನೀಡಿದೆ. ತೋಟದ ಬೆಳೆ ಮಾವಿ ನಿಂದಾದ ನಷ್ಟವನ್ನು ಸರ್ಕಾರ ಪರಿಗಣಿಸ ಬೇಕು. ತೋಟಗಾರಿಕೆ ಇಲಾಖೆ ಸರ್ಕಾ ರಕ್ಕೆ ಸೂಕ್ತ ಮಾಹಿತಿ ರವಾನಿಸಬೇಕು. ನಷ್ಟದ ಅಂದಾಜು ತಿಳಿಸಬೇಕು. ಮಾವು ಬೆಳೆದ ರೈತರಿಗೆ ಪರಿಹಾರ ಘೋಷಿಸ ಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಸರ್ಕಾರದಿಂದ ಮಾವು ಬೆಳೆಗೆ ಪರಿಹಾರ ಘೋಷಣೆ ಕಷ್ಟ ಸಾಧ್ಯ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಬೆಳೆವಿಮೆ. ಕೇವಲ ₹ 2000 ವಿಮೆ ಮೊತ್ತ ಪಾವತಿಸಲು ರೈತರು ಹಿಂದೇಟು ಹಾಕುತ್ತಾರೆ. ಈ ಬಾರಿ ತೀವ್ರ ಇಳುವರಿ ನಷ್ಟ ಅನುಭವಿಸಿದ ರೈತರು ಮುಂದಿನ ಮಾವು ಬೆಳೆಗೆ ವಿಮೆ ಮಾಡಿಸಲು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಶ್ರೀಕಾಂತ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.