ADVERTISEMENT

ಒಗ್ಗಟ್ಟಿನ ಕೊರತೆ: ಬೇಡಿಕೆಗೆ ಸ್ಪಂದಿಸದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:51 IST
Last Updated 17 ಜುಲೈ 2017, 7:51 IST

ದಾವಣಗೆರೆ: ‘ಲಾರಿ ಮಾಲೀಕರು ಸರಕನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಲ್ಲಿ ಮಾತ್ರ ಬದ್ಧರಾಗಿರುತ್ತಾರೆ. ಆದರೆ, ಸರಕು ಇಳಿಸುವ ಹಾಗೂ ಏರಿಸುವ ಜವಾಬ್ದಾರಿ ಅವರದಲ್ಲ’ ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಹೇಳಿದರು.

ನಗರದ ತ್ರಿಶೂಲ್‌ ಕಲಾಭವನದಲ್ಲಿ ಭಾನುವಾರ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರ ಸಂಘ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಲಾರಿ ಮಾಲೀಕರ  ರಾಜ್ಯ  ಸಮ್ಮೇಳನದಲ್ಲಿ ಅವರು ಮಾತನಾಡಿದರು.

ವರ್ತಕರೇ ಲಾರಿಗಳಿಗೆ ಸರಕು ತುಂಬಿಸುವ  ಹಮಾಲರಿಗೆ ಕೂಲಿ ಕೊಡಬೇಕು. ಆದರೆ, ಸರಕು ಸಾಗಿಸುವ ಲಾರಿ ಮಾಲೀಕರಿಂದಲೇ ಹಮಾಲರ ಕೂಲಿಯನ್ನು ವಸೂಲಿ ಮಾಡಲಾಗುತ್ತಿದೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.

ADVERTISEMENT

‘ದೇಶದ ಸರಕು ಸಾಗಣೆ ಹಾಗೂ ಸಾರ್ವಜನಿಕರ ಸೇವೆಯಲ್ಲಿ ಲಾರಿ ಮಾಲೀಕರ ಪಾತ್ರ ಮಹತ್ವದ್ದಾಗಿರುತ್ತದೆ. ಆದರೆ, ಒಗ್ಗಟ್ಟಿನ ಕೊರತೆಯಿಂದಾಗಿ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕು ಸಾಗಣೆ ವೇಳೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ವಾಹನ ತಪಾಸಣೆ ನೆಪದಲ್ಲಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದೊಂದು ಹಗಲು ದರೋಡೆಯಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

‘ಸರಕು ಸಾಗಣೆ ವೇಳೆಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಿರುವುದು ಸರಿಯಲ್ಲ. ಸರಕು ಸಾಗಣೆಯಿಂದ ಬರುವ ಆದಾಯ ಕಡಿಮೆಯಾಗಿದೆ. ಇದರಿಂದಾಗಿ ಲಾರಿ ಖರೀದಿಗಾಗಿ ಬ್ಯಾಂಕ್‌ನಿಂದ ಪಡೆದ ಸಾಲದ ಕಂತು ತುಂಬಲು ಕಷ್ಟವಾಗುತ್ತಿದೆ. ಹೀಗಾಗಿ ಜಿಎಸ್‌ಟಿಯಿಂದ ನಮ್ಮನ್ನು ಹೊರಗಿಡಬೇಕು’ ಎಂದು ಆಗ್ರಹಿಸಿದರು.

ಪರಿಸರ ಮಾಲಿನ್ಯ ನೆಪದಲ್ಲಿ ಅಧಿಕಾರಿಗಳು ಲಾರಿಗಳ ಕಾರ್ಯಕ್ಷಮತೆ ಹಾಗೂ ಇಂಧನದ ತಪಾಸಣೆ ಮಾಡುತ್ತಾರೆ. ದೇಶದಾದ್ಯಂತ ಒಂದೇ ರೀತಿಯ ಡೀಸೆಲ್ ಪೂರೈಸಬೇಕು. ಜೊತೆಗೆ ಸ್ಪೀಡ್‌ ಗೌವರ್ನರ್‌ ನಿಯಮದ ಹೇರಿಕೆಯಲ್ಲಿ ಅನುಸರಿಸುತ್ತಿರುವ ತಾರತಮ್ಯ ಧೋರಣೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿ, ‘ಸರಕು ಸಾಗಣೆಯು ಸಾರ್ವಜನಿಕ ಸೇವೆಯಾಗಿದ್ದು, ಪರಸ್ಪರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿದ್ದಲ್ಲಿ ಯಾವ ಸಮಸ್ಯೆಗಳೂ ಉಂಟಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು. ಲಾರಿ ಮಾಲೀಕರಿಗೆ ಸಂಬಂಧಿಸಿದಂತೆ ಸ್ಥಳೀಯ ವ್ಯಾಪ್ತಿಯಲ್ಲಿ ಯಾವುದಾದರು ಸಮಸ್ಯೆಗಳಿದ್ದಲ್ಲಿ ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ನಿಯಮ ಉಲ್ಲಂಘಿಸಿ ಸರಕು ಸಾಗಣೆ ಮಾಡಬಾರದು ಎಂದೂ ಸೂಚಿಸಿದರು. ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ ಮಾತನಾಡಿದರು. ಸಭೆಯಲ್ಲಿ  ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನನ್ನುಸಾಬ್‌ ಶೇಖ್ ಶಿಂಧೆ, ಕಾರ್ಯದರ್ಶಿ ಓಂಪ್ರಕಾಶ್‌,  ಪಾಲಿಕೆ ಸದಸ್ಯ ರಾಜಶೇಖರ ಗೌಡ್ರು, ಕೆ.ಎಂ.ಗೋಪಾಲಸ್ವಾಮಿ, ಶ್ರೀನಿವಾಸ ರಾವ್‌, ಸುರೇಶ್‌, ಮನ್ಸೂರ್‌ ಇಬ್ರಾಹಿಂ, ಶ್ರೀಕಂಠಸ್ವಾಮಿ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.