ADVERTISEMENT

ಕಪ್ಪು ಹಣ ಇಟ್ಟವರು ಕಾಂಗ್ರೆಸ್ಸಿಗರು: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 29 ಮೇ 2017, 4:02 IST
Last Updated 29 ಮೇ 2017, 4:02 IST
ಹೊನ್ನಾಳಿ: ಪ್ರಧಾನಿ ನರೇಂದ್ರ ಮೋದಿ ಈ ದೇಶದ ಶಕ್ತಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದಲ್ಲಿ ನಡೆದ ತಾಲ್ಲೂಕು ಬಿಜೆಪಿ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.
 
ಮೋದಿ ಅವರಿಂದಾಗಿ ಕಾಂಗ್ರೆಸ್ ಮುಖಂಡರಿಗೆ ನಡುಕ ಹುಟ್ಟಿದೆ. ಈ ದೇಶದಲ್ಲಿ ಇನ್ನೂ 25 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ವಿದೇಶದಲ್ಲಿ ಕಪ್ಪು ಹಣ ಇಟ್ಟವರು ಕಾಂಗ್ರೆಸ್ಸಿಗರು. ಹೀಗಾಗಿ ಆ ಹಣ ತಂದು ಸಾರ್ವಜನಿಕರಿಗೆ ಹಂಚಲಾಗುತ್ತಿಲ್ಲ. ಆ ಹಣ ಎಲ್ಲಿದೆ ಎಂದು ಅವರಿಗೆ ಮಾತ್ರ ಗೊತ್ತು ಎಂದು ಟೀಕಿಸಿದರು.
 
ಡಿಸೆಂಬರ್‌ನಲ್ಲಿ ಚುನಾವಣೆ:  ರಾಜ್ಯ ಸರ್ಕಾರ ಹೆಚ್ಚೆಂದರೆ ಡಿಸೆಂಬರ್‌ವರೆಗೆ ಅಧಿಕಾರದಲ್ಲಿರುತ್ತದೆ ಎಂದು ಅವರು ಭವಿಷ್ಯ ನುಡಿದರು.
 
ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ರಮೇಶ್, ಸದಸ್ಯ ಎಂ.ಆರ್.ಮಹೇಶ್, ದೀಪಾ ಜಗದೀಶ್, ಮುಖಂಡ ಪ್ರೇಂಕುಮಾರ್ ಬಂಡಿಗಡಿ, ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಕುಬೇರಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಲೋಚನಮ್ಮ ಫಾಲಾಕ್ಷಪ್ಪ, ಉಪಾಧ್ಯಕ್ಷ ಸಿದ್ದಲಿಂಗಪ್ಪ, ಸದಸ್ಯ ಶಿವಾನಂದ್ ಮಾತನಾಡಿದರು.
****
‘ಶಾಂತನಗೌಡ ಸುಳ್ಳುಗಾರ’

‘ಶಾಸಕ ಡಿ.ಜಿ.ಶಾಂತನಗೌಡ ಗುರುತರವಾದ ಕೆಲಸ ಮಾಡಿಲ್ಲ. ತಾಲ್ಲೂಕಿಗೆ ಅಟಲ್‌ಜೀ ಶಾಲೆ ಮಂಜೂರು ಮಾಡಿಸಿದ್ದು ನಾನು. ಆದರೆ, ಅವರು ತಾವು ಮಾಡಿಸಿದ್ದಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ರೇಣುಕಾಚಾರ್ಯ ಆರೋಪಿಸಿದರು.

‘ಶಾಂತನಗೌಡ ಹಾಗೂ ಅವರ ಮಕ್ಕಳು ತಾಲ್ಲೂಕಿನ ಮರಳು ಲೂಟಿ ಮಾಡುತ್ತಿದ್ದಾರೆ.  ಎಪಿಎಂಸಿಯಲ್ಲಿ ಮರಳು ಸಂಗ್ರಹಿಸಿ ಸ್ವಂತ ಕೆಲಸಗಳಿಗೆ ಬಳಸಿದ್ದಾರೆ. ಮಾರಿಕೊಪ್ಪ ದೇಗುಲಕ್ಕೆ ₹ 75 ಸಾವಿರ ಹಣ ಕಟ್ಟಿ 75 ಲೋಡ್ ಮರಳು ಸಾಗಿಸಿದ್ದಾರೆ. ಕೇವಲ ₹ 1 ಸಾವಿರಕ್ಕೆ ಮರಳು ಸಿಗುತ್ತದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.