ADVERTISEMENT

ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ: ಸಾರ್ವಜನಿಕರ ದೂರು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:36 IST
Last Updated 13 ನವೆಂಬರ್ 2017, 6:36 IST

ಚನ್ನಗಿರಿ: ಪುರಸಭೆಯಿಂದ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿ ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಳಪೆ ಗುಣಮಟ್ಟದಿಂದ ನಿರ್ಮಾಣ ಮಾಡಲಾಗುತ್ತಿದೆ ಸಾರ್ವಜನಿಕರು ದೂರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಗಳು ವಾಸವಾಗಿರುವ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ₹ 3 ಕೋಟಿ, ಇತರೆ ರಸ್ತೆ ಮತ್ತು ಚರಂಡಿ ಹಾಗೂ ಏಳು ಶುದ್ಧ ಕುಡಿಯವ ನೀರಿನ ಘಟಕಗಳ ಕಾಮಗಾರಿಗಾಗಿ ₹ 3 ಕೋಟಿ ಸೇರಿ ಒಟ್ಟು ₹ 6 ಕೋಟಿ ವೆಚ್ಚದ ಕಾಮಗಾರಿ ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ತುಂಬಾ ತರಾತುರಿಯಲ್ಲಿ ನಡೆಯುತ್ತಿದೆ ಎಂದಿದ್ದಾರೆ.

2015–16ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನದ ಕಾಮಗಾರಿ 2017ರಲ್ಲಿ ನಡೆಯುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ. ಅದು ಕೂಡಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮೈಕೊಡವಿ ಮೇಲೆದ್ದ ಪುರಸಭೆ ಈಗ ಪಟ್ಟಣದಲ್ಲಿ ₹ 13.50 ಕೋಟಿ ವೆಚ್ಚದ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಿದೆ. ಪುರಸಭೆ ಕಾಂಗ್ರೆಸ್ ವಶದಲ್ಲಿದೆ.

ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಪಟ್ಟಣದ ಹಲವಾರು ವಾರ್ಡ್‌ಗಳಲ್ಲಿ ಡಾಂಬರು ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಬಹುತೇಕ ವಾರ್ಡ್‌ಗಳಲ್ಲಿ ಹಿಂದೆ ಇದ್ದ ಹಳೆಯ ಡಾಂಬರು ರಸ್ತೆಯನ್ನು ಅಗೆಯದೇ ಅದನ್ನು ಕೆರೆದು ಅದರ ಮೇಲೆಯೇ ದಪ್ಪ ಜಲ್ಲಿ ಹಾಕಿ, ಮೇಲೆ ಮಣ್ಣು ಹಾಕಿ ರೋಲರ್ ಹೊಡೆಯುತ್ತಿದ್ದಾರೆ.

ADVERTISEMENT

ರಸ್ತೆ ಅಗೆಯದೇ ಹೊಸ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ನೋಡಿದರೆ ಈ ಹೊಸ ರಸ್ತೆ ಬಹಳ ದಿನಗಳ ಬಾಳಿಕೆ ಬರುವುದಿಲ್ಲ ಎಂಬ ಅನುಮಾನ ಸಾರ್ವಜನಿಕರಲ್ಲಿ ಮನೆ ಮಾಡಿಕೊಂಡಿದೆ. ಆದ್ದರಿಂದ ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಗುಣಮಟ್ಟದ ರಸ್ತೆ ನಿರ್ಮಾಣವಾಗುವಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಾಯಕರ ಬೀದಿಯ ಲೋಕೇಶಪ್ಪ, ಶಿವಕುಮಾರ್ ಒತ್ತಾಯಿಸಿದ್ದಾರೆ.

ಹಳೆ ರಸ್ತೆ ಅಗೆಯದೇ ಹೊಸ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಈಗಾಗಲೇ ಎಲ್ಲಾ ಗುತ್ತಿಗೆದಾರರಿಗೂ ಕೂಡಾ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದು ಶಾಸಕರು ಹಾಗೂ ಅಧಿಕಾರಿಗಳು ಕೂಡ ಸೂಚನೆ ನೀಡಿದ್ದಾರೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಜಯ್ಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.