ADVERTISEMENT

ಕಳಪೆ ಬಿಸಿಯೂಟ: ವಿದ್ಯಾರ್ಥಿಗಳ ದೂರು

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 5:12 IST
Last Updated 11 ಜನವರಿ 2017, 5:12 IST

ಮಲೇಬೆನ್ನೂರು: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆಯಲ್ಲಿ ತಯಾರಿಸುತ್ತಿರುವ ಬಿಸಿಯೂಟ ಕಳಪೆಯಾಗಿದೆ ಎಂದು ವಿದ್ಯಾರ್ಥಿಗಳು ಶಾಸಕ ಎಚ್‌.ಎಸ್. ಶಿವಶಂಕರ್ ಅವರಿಗೆ ಮಂಗಳವಾರ ದೂರು ನೀಡಿದರು.

ಎಣ್ಣೆ ಇಲ್ಲದ ಗೋಧಿ ತರಿ ಉಪ್ಪಿಟ್ಟು, ಬೇಳೆ, ತರಕಾರಿ ರಹಿತ ಸಾಂಬಾರ್, ನೀರು ಸಾರನ್ನು ಊಟಕ್ಕೆ ನೀಡಲಾಗುತ್ತಿದೆ ಎಂದು ದೂರಿದ ವಿದ್ಯಾರ್ಥಿಗಳು, ಬಿಸಿಯೂಟ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.

ತಕ್ಷಣವೇ ಅಡುಗೆಮನೆಗೆ ತೆರಳಿ ಪರಿಶೀಲಿಸಿದ ಶಾಸಕ, ‘ಏನ್ ಇದು ಸಾಂಬಾರು, ನೀರುನೀರಾಗಿದೆ’ ಎಂದು ಸಿಡಿಮಿಡಿಗೊಂಡರು.
‘ಇಂದು ಎಷ್ಟು ತರಕಾರಿ ತಂದಿದ್ದೀರಿ? ಲೆಕ್ಕದ ಪುಸ್ತಕ ತೋರಿಸಿ’ ಎಂದು ಉಪಪ್ರಾಚಾರ್ಯೆ ಶಾಂತಾಬಾಯಿ, ಎಸ್‌.ಡಿ.ಎಂ.ಸಿ ಅಧ್ಯಕ್ಷ ಗದ್ದಿಗೆಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಕಳಪೆ ಗುಣಮಟ್ಟದ ಗೋಧಿ ತರಿ ವಾಪಸ್‌ ಕಳುಹಿಸಿಕೊಡಲಾಗಿದೆ’ ಎಂದು ಉಪಪ್ರಾಚಾರ್ಯೆ ಮಾಹಿತಿ ನೀಡಿದರು. ಆದರೆ, ಅಡುಗೆ ತಯಾರಕರು ಮಕ್ಕಳಿಗೆ ಉಪ್ಪಿಟ್ಟು ವಿತರಣೆ ಮಾಡಿರುವುದಾಗಿ ಮಾಹಿತಿ ನೀಡಿರುವುದು ವಿರೋಧಾಭಾಸವಾಗಿತ್ತು.

ಡಿಡಿಪಿಐ ಹಾಗೂ ಬಿಇಒ ಅವರಿಗೆ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ದೂರವಾಣಿ ಕರೆ ಮಾಡಿ ತಾಕೀತು ಮಾಡಿದರು.
ಬುಧವಾರ ಎಸ್‌ಡಿಎಂಸಿ ಸಭೆ ಕರೆದು ಸಮಸ್ಯೆ ಆಲಿಸಬೇಕು. ನಿತ್ಯ ಉತ್ತಮ ಗುಣಮಟ್ಟದ ತರಕಾರಿ ಬಳಸಬೇಕು ಎಂದು ಸೂಚಿಸಿದರು.
ಒಂದೆರೆಡು ದಿನ ಬಿಟ್ಟು ಬಂದು ಪುನಃ ಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.