ADVERTISEMENT

ಕಾಳಸಂತೆಕೋರರ ಪಾಲಾಗುತ್ತಿರುವ ಅನ್ನಭಾಗ್ಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:11 IST
Last Updated 18 ಜುಲೈ 2017, 5:11 IST

ಹರಿಹರ: ನಗರದ ಗೌಸಿಯಾ ಕಾಲೊನಿ ಹಾಗೂ ಕೈಗಾರಿಕಾ ವಸಾಹತು ಪ್ರದೇಶದ ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ  ‘ಅನ್ನಭಾಗ್ಯ’ ಯೋಜನೆಯ 18 ಟನ್‌  ಪಡಿತರ ಅಕ್ಕಿ ಹಾಗೂ ಗೋಧಿಯನ್ನು ಡಿವೈಎಸ್‌ಪಿ ಮಂಜುನಾಥ ಕೆ. ಗಂಗಲ್ ನೇತೃತ್ವದ ತಂಡ ಸೋಮವಾರ ದಾಳಿ ನಡೆಸಿ ವಶಪಡಿಸಿಕೊಂಡಿತು.

ಕೈಗಾರಿಕಾ ವಸಾಹತು ಪ್ರದೇಶದ ಖಾಸಗಿ ಗೋದಾಮಿನಲ್ಲಿ 330 ಚೀಲ ಪಡಿತರ ಅಕ್ಕಿ ಹಾಗೂ 14 ಚೀಲ ಗೋಧಿ ಹಾಗೂ ಗೌಸಿಯಾ ಕಾಲೊನಿಯ ಮನೆಯೊಂದರಲ್ಲಿ 54 ಚೀಲ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಭಾನುವಾರ ತಡರಾತ್ರಿ ಗೋದಾಮು ಹಾಗೂ ಸೋಮವಾರ ಸಂಜೆ ಮನೆಯ ಮೇಲೆ ಡಿವೈಎಸ್‌ಪಿ ನೇತೃತ್ವದ ತಂಡ ದಾಳಿ ನಡೆಸಿತು.

ತನಿಖೆಯಲ್ಲಿ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಸ್ತಾನು ಅಕ್ರಮ ಪಡಿತರ ಅಕ್ಕಿಯ ಸಂಗ್ರಹದ ಹಲವು ಪ್ರಕರಣಗಳಲ್ಲಿ ಭಾಗಿಯಾದ ಗೌಸಿಯಾ ಕಾಲೊನಿ ನಿವಾಸಿ ತಾಜುದ್ದೀನ್ ಎಂಬಾತನಿಗೆ ಸೇರಿದ್ದು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ.

ADVERTISEMENT

ಒಂದೂವರೆ ತಿಂಗಳ ಹಿಂದೆ ಗುತ್ತೂರು ಬಳಿ ದೊರೆತ ಅಕ್ರಮ ಪಡಿತರ ಅಕ್ಕಿ ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಈ ಪ್ರಕರಣದಲ್ಲಿ ತಾಜುದ್ದೀನ್ ಭಾಗಿಯಾಗಿರುವುದು ಪೊಲೀಸರ ನಿದ್ದೆ ಗೆಡಿಸಿದೆ. ಆರೋಪಿ ಪರಾರಯಾಗಿದ್ದು ಪತ್ತೆ ಕಾರ್ಯ ನಡೆದಿದೆ.

ದಾಳಿಯಲ್ಲಿ ಪಡಿತರ ಅಕ್ಕಿಯನ್ನು ತುಂಬಲು ಬಳಸಲಾಗುತ್ತಿದ್ದ ಬ್ರ್ಯಾಂಡ್‌ನ ಚೀಲಗಳು ಹಾಗೂ ಪಡಿತರ ಅಕ್ಕಿ ವಿತರಿಸುವ ಸರ್ಕಾರಿ ಚೀಲಗಳು ಹಾಗೂ ಎರಡು ತೂಕದ ಯಂತ್ರಗಳು ದೊರೆತಿವೆ. ಆರೋಪಿ ಪತ್ತೆಗೆ ತನಿಖೆ ಚುರುಕು ಗೊಳಿಸಲಾಗಿದೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪ್ರಭಾರ ಆಹಾರ ಶಿರಸ್ತೇದಾರ್ ರಮೇಶ್, ಸಿಪಿಐ ಲಕ್ಷ್ಮಣ ನಾಯ್ಕ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದೇಗೌಡ, ಎಎಸ್ಐ ಮಾರಣ್ಣ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.