ADVERTISEMENT

ಕುಡಿಯುವ ನೀರು ಕೃಷಿಗೆ ಬಳಸದಿರಲು ಸೂಚನೆ

ನದಿಪಾತ್ರದಲ್ಲಿ ನಿಷೇಧಾಜ್ಞೆ, ತ್ರಿ ಫೇಸ್‌ ವಿದ್ಯುತ್‌ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 5:45 IST
Last Updated 25 ಮಾರ್ಚ್ 2017, 5:45 IST

ದಾವಣಗೆರೆ: ತುಂಗಭದ್ರಾ ನದಿಗೆ ಕುಡಿಯುವ ಉದ್ದೇಶಕ್ಕಾಗಿ ಭದ್ರಾ ಜಲಾಶಯ ದಿಂದ ಹರಿಸುತ್ತಿರುವ ನೀರನ್ನು ಕೃಷಿಗೆ ಬಳಸಬಾರದು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚಿಸಿದರು.

ಹಾವೇರಿ, ಗದಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಹೀಗಾಗಿ ಮಾರ್ಚ್‌ 20ರಿಂದ ನದಿಗೆ ನೀರು ಹರಿಸಲಾಗುತ್ತಿದೆ. ಈ ಮೊದಲು 1ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿತ್ತು. ನಾಲ್ಕು ದಿನ ಕಳೆದರೂ ನೀರು ಹೊನ್ನಾಳಿ ತಲುಪಿರಲಿಲ್ಲ. ಹೀಗಾಗಿ ನೀರು ಹರಿವನ್ನು 3 ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನದಿಪಾತ್ರದಲ್ಲಿ ಹಲವು ಬಹುಗ್ರಾಮ ಯೋಜನೆಗಳಿವೆ. ಈ ಯೋಜನೆಗಳಿಗೂ ನೀರು ಪೂರೈಕೆ  ಮಾಡಬೇಕಿದೆ.  ಹೀಗಾಗಿ  ದಾವಣಗೆರೆ  ವ್ಯಾಪ್ತಿಯಲ್ಲಿ  ಕೃಷಿಗೆ ನೀರು  ಬಳಸದಂತೆ  ಎಚ್ಚರವಹಿಸಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಾಗೆಯೇ ನದಿಪಾತ್ರದಲ್ಲಿ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಇದೇ ಕ್ರಮವನ್ನು ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲೂ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ನದಿಪಾತ್ರದ ರೈತರು ಕುಡಿಯುವ ನೀರು ಕೃಷಿಗೆ ಬಳಸದಂತೆ ಎಚ್ಚರವಹಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇಂದಿನಿಂದ ಬಲನಾಲೆಗೆ ನೀರು: ಭದ್ರಾ ಬಲನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ತೋಟದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ 25ರಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಮೊದಲು ಕಾಡಾ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಮಾರ್ಚ್‌ 29ರಿಂದ ನೀರು ಹರಿಸಬೇಕಿತ್ತು.

ಯುಗಾದಿ ಹಬ್ಬವೂ ಹತ್ತಿರವಿರುವುದರಿಂದ ಹಾಗೂ ದಾವಣಗೆರೆ, ಚನ್ನಗಿರಿ, ಚಿತ್ರದುರ್ಗ ನಗರಗಳಿಗೆ ನೀರು ಪೂರೈಕೆ ಮಾಡಬೇಕಿದೆ. ಹೀಗಾಗಿ ನಾಲ್ಕು ದಿನ ಮುಂಚಿತವಾಗಿ ನಾಲೆಗೆ ನೀರು ಹರಿಸಲಾಗುತ್ತಿದೆ ಎಂದು ರಮೇಶ್‌ ತಿಳಿಸಿದರು.

ಭದ್ರಾ ಜಲಾಶಯದಲ್ಲಿ 13.82 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಇದ್ದು, 5.63 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಿದೆ. ಅದರಲ್ಲಿ 3 ಟಿಎಂಸಿ ಅಡಿ ನೀರನ್ನು ನದಿಗೆ ಹರಿಸಿ, 2.63 ಟಿಎಂಸಿ ಅಡಿ ನೀರನ್ನು ನಾಲೆಗೆ ಹರಿಸಲಾಗುವುದು. ಇದಿಷ್ಟು ನೀರಲ್ಲಿ ಮೂರೂವರೆ ತಿಂಗಳ ಕುಡಿಯುವ ನೀರನ್ನು ನಿರ್ವಹಿಸಬೇಕಿದೆ ಎಂದರು.

ಕೈಗಾರಿಕಾ ಉದ್ದೇಶಕ್ಕೆ ಮೀಸಲಿಟ್ಟಿದ್ದ 1.64 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಮನವಿ ಮಾಡಿದ್ದು, ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಮಾಹಿತಿ ನೀಡಿದರು.

ರೈಲ್ವೆ ಮೇಲ್ಸೇತುವೆಗೆ ತಾಂತ್ರಿಕ ಅಡಚಣೆ
ಅಶೋಕ ರಸ್ತೆಯ ರೈಲ್ವೆ ಮೇಲ್ಸುತುವೆ ಕಾಮಗಾರಿ ಆರಂಭಿಸಲು ತಾಂತ್ರಿಕ ಅಡಚಣೆಗಳಿವೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಯೋಜನೆ ಬಗ್ಗೆ ಅಧ್ಯಯನ ನಡೆಸಿ, ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಪರಿಶೀಲಿಸಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಮೇಶ್‌ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.