ADVERTISEMENT

ಗಾಜಿನಮನೆಗೆ ವಿದೇಶಿ ಸಸ್ಯಗಳ ಸಿಂಗಾರ

ಪ್ರವಾಸಿ ತಾಣವಾಗಿ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ತಾಣದಲ್ಲಿ ದಿಢೀರನೆ ಅಲ್ಲಲ್ಲಿ ಮೂಡಿದ ಹಸಿರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 9:32 IST
Last Updated 2 ಏಪ್ರಿಲ್ 2018, 9:32 IST
ಗಾಜಿನ ಮನೆ ಮುಂಭಾಗ ನೆಡಲಾಗಿರುವ ದೊಡ್ಡ ಆಲಿವ್‌ ಮರದ ಜತೆ ಇತರೆ ಆಕರ್ಷಕ ವಿದೇಶಿ ಮರಗಳು
ಗಾಜಿನ ಮನೆ ಮುಂಭಾಗ ನೆಡಲಾಗಿರುವ ದೊಡ್ಡ ಆಲಿವ್‌ ಮರದ ಜತೆ ಇತರೆ ಆಕರ್ಷಕ ವಿದೇಶಿ ಮರಗಳು   

ದಾವಣಗೆರೆ: ಸುಂದರ ಉದ್ಯಾನಗಳು, ಕೆರೆಗಳು, ಸಿಸಿ ರಸ್ತೆಗಳು, ಹೈಮಾಸ್ಟ್‌ ದೀಪಗಳಿಂದ ಕಂಗೊಳಿಸುತ್ತಿರುವ ಬೆಣ್ಣೆದೋಸೆ ನಗರಿ ದಾವಣಗೆರೆ ಈಗ ಮತ್ತೊಂದು ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದೆ. ವಿದೇಶಿ ಗಿಡಗಳ ಅಲಂಕಾರದಿಂದ ಯುವ ಮನಸ್ಸುಗಳನ್ನು ಆಕರ್ಷಿಸುತ್ತಿರುವ ದೇವನಗರಿಯ ಗಾಜಿನಮನೆ ನೋಡನೋಡುತ್ತಲೇ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ, ಉತ್ತರಕ್ಕೆ ಕುಂದುವಾಡ ಕೆರೆಗೆ ತಾಗಿಕೊಂಡಿರುವ ಗಾಜಿನ ಮನೆ 12 ಎಕರೆ ಜಮೀನಿನ ವಿಶಾಲ ಆವರಣದಲ್ಲಿ ಜಗಮಗಿಸುತ್ತಿದೆ. ನಿತ್ಯ ಹೆದ್ದಾರಿಯಲ್ಲಿ ಸಾಗುವ ಹಾಗೂ ಕುಂದುವಾಡ ಕೆರೆಗೆ ಬರುವ ವಾಯುವಿಹಾರಿಗಳ, ಯುವ ಪ್ರೇಮಿಗಳ, ನವದಂಪತಿಗಳನ್ನು ಆಕರ್ಷಿಸುತ್ತಿದೆ.

ವಿದೇಶಿ ಗಿಡಗಳ ಬೆಳೆಸಲು ಟೆಂಡರ್‌:  ಗಾಜಿನಮನೆಯ ಆವರಣದಲ್ಲಿ ಈಗಾಗಲೇ ವಿದೇಶಿ ಗಿಡಗಳನ್ನು ನೆಡುವ ಕಾರ್ಯ ಭರದಿಂದ ಸಾಗಿದ್ದು, ಮುಗಿಯುವ ಹಂತದಲ್ಲಿದೆ. ಈ ರೀತಿಯ ವಿದೇಶಿ ಸಸಿಗಳನ್ನು ಹಾಕಿ ಒಂದು ವರ್ಷದ ಅವಧಿಯವರೆಗೆ ಸಂರಕ್ಷಿಸಲು ಹೈದರಬಾದ್‌ನ ಯುನಿಕ್‌ ಟ್ರೀ ಪ್ರೈವೇಟ್ ಲಿ.ಕಂಪನಿಯವರಿಗೆ ₹ 4.25 ಕೋಟಿ ವೆಚ್ಚದ ಇ–ಟೆಂಡರ್‌ ನೀಡಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಟಿ.ಆರ್.ವೇದಮೂರ್ತಿ.ತೋಟಗಾರಿಕೆ ಇಲಾಖೆಯಿಂದ ಖರೀದಿ ಮಾಡಲಾಗಿರುವ ಈ ವಿಶಿಷ್ಟ ಬಗೆಯ ಅಪರೂಪದ ವೈವಿಧ್ಯಮಯ ವಿದೇಶಿ ಗಿಡಗಳು ಇಲ್ಲಿನ ಹವಾಮಾನದ ಪರಿಸರಕ್ಕೆ ಹೊಂದಿಕೊಳ್ಳಲಿವೆ. ಸೂಕ್ತ ರೀತಿಯಲ್ಲಿ ಆರೈಕೆ ಮಾಡಿ ಪೋಷಿಸಿದಲ್ಲಿ ಉತ್ತಮವಾಗಿ ಬೆಳೆಯುತ್ತವೆ ಎನ್ನುತ್ತಾರೆ ಅವರು.

ವಿದೇಶಿ ತಳಿ ಸಸಿಗಳ ವೈವಿಧ್ಯ:  ಇಟಾಲಿಯನ್‌ ಸೈಪ್ರೆಸ್‌, ವಾಷಿಂಗ್ಟಿಯ ರೋಬಸ್ಟ್ರಾ, ದೊಡ್ಡ ಆಲಿವ್ ಮರ, ಸಣ್ಣ ಆಲಿವ್‌ ಮರ, ಬಾಟಲ್‌ ಟ್ರೀ, ಇಟಾಲಿಯನ್ ಸೈಪ್ರೆಸ್ ನೇರ, ಆಲಿವ್ ಹಳೆಯ ಕಾಂಡ, ಕೆಂಪು ಪಾಂಗ್ ಪಾಂಗ್ ಸೇರಿ ಸುಮಾರು 40 ಜಾತಿಯ ವಿವಿಧ ದೇಶಗಳ ವಿಚಿತ್ರ ಹೆಸರಿನ ವಿದೇಶಿ ಗಿಡಗಳನ್ನು ಕಾಣಬಹುದಾಗಿದೆ. ಗಾಜಿನ ಮನೆಯೊಳಗೆ ಥರ್ಮೋಕೋಲ್‌ನಿಂದ ತಯಾರಿಸಿದ ಕಲ್ಲಿನ ರಥ, ಗೊಮ್ಮಟೇಶ್ವರ, ದಂಪತಿಗಳಿಬ್ಬರ ಗೊಂಬೆಗಳಿವೆ. ಹೊರ ಆವರಣವನ್ನು ಹೊಸ ಗಿಡ–ಮರಗಳು ಕಳೆಗಟ್ಟಿಸಿವೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಯುವಕ–ಯುವತಿಯರು ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಬಿಸಿಲೆನ್ನದೇ ಬೆಳಗಿನಿಂದ ಸಂಜೆಯವರೆಗೆ ತಂಡೋಪತಂಡವಾಗಿ ವಿದ್ಯಾರ್ಥಿಗಳು ಬರುತ್ತಿದ್ದು, ನಿತ್ಯ ಒಂದೂವರೆ ಸಾವಿರದಷ್ಟು ಜನರು ಭೇಟಿ ನೀಡುತ್ತಿದ್ದಾರೆ. ಇನ್ನು ಭಾನುವಾರದಂತಹ ರಜಾದಿನಗಳಲ್ಲಿ ದಿನವೊಂದಕ್ಕೆ ಅಂದಾಜು ನಾಲ್ಕು ಸಾವಿರದಷ್ಟು ಜನರು ಭೇಟಿ ನೀಡುತ್ತಿದ್ದಾರೆ.

ADVERTISEMENT

ಇಲಾಖೆಯ ಮುಂದಿನ ಗುರಿ: ಗಾಜಿನ ಮನೆಯ ಆವರಣದಲ್ಲಿ ಈಗಾಗಲೇ 2 ಕೊಳವೆಬಾವಿಗಳಿದ್ದು, ಪ್ರತಿ ಗಿಡಕ್ಕೂ ನೀರುಣಿಸಲು ಸ್ಪಿಂಕ್ಲರ್‌ ಅಳವಡಿಲಾಗುವುದು. ನಂತರ ಆವರಣದಲ್ಲಿ 66X66 ಉದ್ದ–ಅಗಲ ಹಾಗೂ 10 ಅಡಿ ಆಳದ 12 ಲಕ್ಷ ಲೀಟರ್‌ ಸಾಮರ್ಥ್ಯದ ಹೊಂಡ ನಿರ್ಮಿಸಿ, ಕೆರೆಯಿಂದ ನೀರು ಸಂಗ್ರಹಿಸಲಾಗುವುದು. ಈ ನೀರಿ
ನಿಂದ 1 ತಿಂಗಳವರೆಗೆ ಆವರಣದ ಎಲ್ಲಾ ಮರ–ಗಿಡಗಳಿಗೆ ನೀರುಣಿಸಬಹುದು ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ಗಾಜಿನ ಮನೆಯ ಸುತ್ತ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಉಚಿತ ಪ್ರವೇಶ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಈಗಾಗಲೇ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡವರಿಗೆ ₹ 20, ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ₹ 10 ಪ್ರವೇಶ ದರ ನಿಗದಿಪಡಿಸಲಾಗುವುದು. ಜೊತೆಗೆ ಇಲ್ಲಿಗೆ ಬರುವ ಜನರು ಒಂದು ದಿನ ಯಾವುದೇ ರೀತಿಯಲ್ಲಿ ಬೇಸರವಾಗದೇ ಆನಂದದಿಂದ ಕಾಲ ಕಳೆಯುವಂತಾ ಆಕರ್ಷಣಿಯ ಸ್ಥಳವನ್ನಾಗಿ ನಿರ್ಮಿಸಲಾಗುವುದು ಎನ್ನುತ್ತಾರೆ ವೇದಮೂರ್ತಿ.

**

ಇದು ಒಂದು ರೀತಿಯ ಆನಂದದ ಅರಮನೆ. ಇಲ್ಲಿನ ಶುದ್ಧ ಗಾಳಿ, ಹಸಿರು ಪರಿಸರದ ಸೌಂದರ್ಯವನ್ನು ಕಣ್ತುಂಬಿಕೊಂಡು ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಸೂಕ್ತ ಸ್ಥಳವಾಗಿದೆ – ಸಿಂಧು, ವಿದ್ಯಾರ್ಥಿನಿ

**

ವಿಜಯ್ ಸಿ. ಕೆಂಗಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.