ADVERTISEMENT

ಗುಡ್ಡ ಬಗೆದು ಇಲಿ ಹಿಡಿದ ಮೋದಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:47 IST
Last Updated 18 ಸೆಪ್ಟೆಂಬರ್ 2017, 9:47 IST

ದಾವಣಗೆರೆ: ಕಪ್ಪು ಹಣ ಹೊರತರುತ್ತೇವೆ ಎಂದು ನೋಟು ಅಮಾನ್ಯೀಕರಣ ಮಾಡಿದ ಪ್ರಧಾನಿ ಮೋದಿ ಗುಡ್ಡ ಬಗೆದು ಹಿಡಿದಿದ್ದು ಇಲಿ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್‌ ವ್ಯಂಗ್ಯವಾಡಿದರು. ಇಲ್ಲಿನ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಜನ ಸಂಗ್ರಾಮ ಪರಿಷತ್‌ ಏರ್ಪಡಿಸಿದ್ದ 3ನೇ ರಾಜ್ಯ ಸಮ್ಮೇಳನದಲ್ಲಿ ಭಾನುವಾರ ‘ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ಪರಿಣಾಮಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಚಲಾವಣೆಯಲ್ಲಿದ್ದ ₹ 15.4 ಲಕ್ಷ ಕೋಟಿ ಮೌಲ್ಯದ ₹ 500 ಹಾಗೂ ₹ 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ, ₹ 4 ಲಕ್ಷ ಕೋಟಿ ಕಪ್ಪುಹಣವನ್ನು ಹೊರತರಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಆದರೆ, ಕಪ್ಪು ಹಣ ಮುಟ್ಟುಗೋಲು ಹಾಕಿಕೊಂಡಿರುವುದು ಬರಿ ₹ 16 ಸಾವಿರ ಕೋಟಿ.

ಆದರೆ, ಈ ಪ್ರಕ್ರಿಯೆಯಲ್ಲಿ ಶೇ 110ರಷ್ಟು ನೋಟುಗಳು ಬದಲಾಯಿಸಲ್ಪಟ್ಟಿವೆ. ಅಂದರೆ ಭಾರಿ ಪ್ರಮಾಣದಲ್ಲಿ ಕಪ್ಪು ಹಣ ಬಿಳಿಯಾಗಿ ಮಾರ್ಪಟ್ಟಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು. ನೋಟು ಅಮಾನ್ಯೀಕರಣ ಪ್ರಕ್ರಿಯೆ ನಂತರ ಹೊಸ ನೋಟುಗಳ ಮುದ್ರಣಕ್ಕೆ ₹ 8,580 ಕೋಟಿ ಖರ್ಚು ಮಾಡಲಾಗಿದೆ. ಎಟಿಎಂಗಳ ಮರು ವಿನ್ಯಾಸಕ್ಕಾಗಿ ₹ 950 ಕೋಟಿ ವೆಚ್ಚವಾಗಿದೆ.

ADVERTISEMENT

ಬ್ಯಾಂಕ್‌ ನೌಕರರು 50 ದಿನಗಳಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡಿದಕ್ಕೆ ನೀಡಿದ ₹ 15,000 ಕೋಟಿ ಸೇರಿ ಕೇಂದ್ರ ಸರ್ಕಾರಕ್ಕೆ ಒಟ್ಟು ₹ 32,000 ಕೋಟಿ ಹೊರೆಯಾಗಿದೆ. ₹ 16,000 ಕೋಟಿ ಕಪ್ಪು ಹಣ ಸಂಗ್ರಹಿಸಲು ಕೇಂದ್ರ ಸರ್ಕಾರ ಮಾಡಿದ ಖರ್ಚು ₹ 32,000 ಕೋಟಿ. ಇಷ್ಟಾದರೂ ಇಡೀ ಪ್ರಕ್ರಿಯೆಯಲ್ಲಿ ಸಿಕ್ಕಿಬಿದ್ದ ನಕಲಿ ನೋಟುಗಳ ಮುಖಬೆಲೆ ಕೇವಲ ₹ 43 ಕೋಟಿ ಎಂದು ತಿಳಿಸಿದರು.

2009ರಲ್ಲಿ ಶೇ 9 ಇದ್ದ ದೇಶದ ಜಿಡಿಪಿ, ನೋಟು ಬದಲಾವಣೆಯ ನಂತರ ಶೇ 5.7ಕ್ಕೆ ಕುಸಿದಿದೆ. ಅಂದರೆ ಸರಾಸರಿ ಶೇ 4ರಷ್ಟು ಅಭಿವೃದ್ಧಿ ಇಳಿಮುಖವಾಗಿದೆ. ಇದು ಕೇವಲ ಅಂಕಿಅಂಶದ ವಿಚಾರವಲ್ಲ. ಆಗಿರುವುದು ಸಾಮಾನ್ಯ ಜನರ ಬದುಕಿನ ನಷ್ಟ. ನೋಟು ಬದಲಾವಣೆ ಪ್ರಕ್ರಿಯೆ ದೇಶದ ಆರ್ಥಿಕತೆಗೆ ಬೃಹತ್‌ ಹೊಡೆತ ಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೋಟು ಬದಲಾವಣೆ ವೇಳೆ ಕಪ್ಪು ಹಣ ಹೊರತರುತ್ತೇವೆ. ನಕಲಿ ನೋಟು ಚಲಾವಣೆ ನಿಲ್ಲಿಸುತ್ತೇವೆ. ಇದರಿಂದ ಭಯೋತ್ಪಾದನೆ ನಿಲ್ಲುತ್ತದೆ ಎಂದು ಮೋದಿ ಹೇಳಿದರು. ಆದರೆ, ಈಗಲೂ ಕಾಶ್ಮೀರ ಬಂದ್‌ ಆಗಿದೆ. ಭಯೋತ್ಪಾದನೆಗೂ ನೋಟು ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಜನರನ್ನು ಭಾವನಾತ್ಮಕವಾಗಿ ದಿಕ್ಕು ತಪ್ಪಿಸುವ ಹುನ್ನಾರ ಇದು. ನೋಟು ಬದಲಾವಣೆ ನಡೆದಿದ್ದೇ ಕಾರ್ಪೊರೇಟ್‌ ಕಂಪೆನಿಗಳ ಅನುಕೂಲಕ್ಕಾಗಿ. ಉದ್ಯಮಿಗಳ ಕಪ್ಪು ಹಣವನ್ನು ಬಿಳಿ ಮಾಡಿಕೊಡುವುದಕ್ಕಾಗಿ ಎಂದು ಆರೋಪಿಸಿದರು.

ಜಿಎಸ್‌ಟಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧ:
ಸಂವಿಧಾನ ರಚಿಸುವಾಗ ಪ್ರತಿ ರಾಜ್ಯಕ್ಕೂ ಅದರ ಪ್ರಾದೇಶಿಕತೆಗೆ ಅನುಗುಣವಾಗಿ ತೆರಿಗೆ ವಿಧಿಸುವ ಅವಕಾಶ ನೀಡಲಾಗಿದೆ. ಆದರೆ, ಜಿಎಸ್‌ಟಿ ನಂತರ ರಾಜ್ಯಗಳಿಗೆ ಈ ಅಧಿಕಾರ ಇಲ್ಲದಾಗಿದೆ. ಹೀಗಾಗಿ, ಒಕ್ಕೂಟ ವ್ಯಸವಸ್ಥೆಗೆ ಜಿಎಸ್‌ಟಿ ವಿರುದ್ಧವಾದದ್ದು ಎಂದು ಶಿವಸುಂದರ್‌ ಅಭಿಪ್ರಾಯಪಟ್ಟರು.

ಜಿಎಸ್‌ಟಿಯಿಂದ ನಿಜವಾಗಿಯೂ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ‌. ಆದರೆ, ತೆರಿಗೆ ಪಾವತಿಸುವರಲ್ಲಿ ಸಾಮಾನ್ಯ ವರ್ಗದವರು ಹೆಚ್ಚುತ್ತಾರೆ. ಪರೋಕ್ಷ ತೆರಿಗೆ ಹೆಚ್ಚುವುದರಿಂದ ವರ್ಗ ತಾರತಮ್ಯ ಹೆಚ್ಚಲಿದೆ ಎಂದು ಅವರು ವಿಶ್ಲೇಷಿಸಿದರು.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳು, ಲಿಕ್ಕರ್‌ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮವನ್ನೂ ಸೇರಿಸಬೇಕಿತ್ತು. ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗುತ್ತಿತ್ತು ಎಂದು ಹೇಳಿದರು.

ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ಸೇರಿಸುವ ಹಾಗೂ ನಗದುರಹಿತ ಆರ್ಥಿಕತೆ ತರುವ ಉದ್ದೇಶ ಒಳ್ಳೆಯದೇ. ಆದರೆ, ರಾತ್ರೋರಾತ್ರಿ ಅದನ್ನು ಜಾರಿಗೆ ತರುವುದು ಅಸಾಧ್ಯ. ಅದು ನಿಧಾನವಾಗಿ ಹಾಗೂ ಸಮರ್ಥವಾಗಿ ನಡೆಯಬೇಕಾದ ಕ್ರಿಯೆ. ಇದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಟಿ.ಆರ್‌.ಚಂದ್ರಶೇಖರ್‌ ತಿಳಿಸಿದರು. ಹೋರಾಟಗಾರ ದೊರೆಸ್ವಾಮಿ ಇದ್ದರು. ಸತೀಶ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.