ADVERTISEMENT

ಜ್ಞಾನ ಸಂಪಾದನೆ ವಕೀಲ ವೃತ್ತಿಯ ಬಂಡವಾಳ

ವ್ಯಕ್ತಿತ್ವ ಮಾರ್ಗದರ್ಶನದಲ್ಲಿ ನಿವೃತ್ತ ನ್ಯಾಯಮೂರ್ತಿ ಬಿಳ್ಳಪ್ಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 9:34 IST
Last Updated 22 ಮಾರ್ಚ್ 2018, 9:34 IST

ದಾವಣಗೆರೆ: ನಿರಂತರ ಅಧ್ಯಯನ, ಜ್ಞಾನ ಸಂಪಾದನೆಯೇ ವಕೀಲ ವೃತ್ತಿಯ ಬಂಡವಾಳ. ಇಂಗ್ಲಿಷ್‌ ಭಾಷೆಯ ಪ್ರೌಢಮೆ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯ ತಿಳಿವಳಿಕೆ ಇದ್ದಲ್ಲಿ ವಕೀಲಿ ವೃತ್ತಿಯಲ್ಲಿ ಸಾಧನೆ ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಳ್ಳಪ್ಪ ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವ್ಯಕ್ತಿತ್ವ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲ ವೃತ್ತಿ ನೋಬಲ್‌ ವೃತ್ತಿಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ವಕೀಲರ ಬಳಿ ಬರುತ್ತಾರೆ. ಹೀಗಾಗಿ ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ವಕೀಲರು ಎಲ್ಲಾ ವಿಷಯದ ಬಗ್ಗೆಯೂ ತಿಳಿದುಕೊಂಡಿರಬೇಕು ಎಂದರು.

ADVERTISEMENT

‘ತಂತ್ರಜ್ಞಾನ ವ್ಯಾಪಕವಾಗಿ ಬೆಳೆದಿದೆ. ಕ್ಷಣಾರ್ಧದಲ್ಲಿ ಯಾವ ಮಾಹಿತಿಯನ್ನಾದರೂ ಅಂತರ್ಜಾಲ ದಲ್ಲಿ ಪಡೆದು ಕೊಳ್ಳಬಹುದು. ಜತೆಗೆ ಕಾಲೇಜಿನಲ್ಲಿ ಉತ್ತಮ ಗ್ರಂಥಾಲಯ ವಿದ್ದು, ಅದರ ಸದುಪಯೋಗವನ್ನೂ ಪಡೆದು ಕೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ವಕೀಲಿ ವೃತ್ತಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಎಚ್‌.ಹೊಸಗೌಡರ್‌, ಕಾನೂನು ಪದವಿ ಮುಗಿಯುತ್ತಿದ್ದಂತೆ ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಅಭಿಯೋಜಕ, ನ್ಯಾಯಾಧೀಶರಾಗಿ ನೇಮಕ ಆಗಬಹುದು. ಹೀಗಾಗಿ ವಿದ್ಯಾರ್ಥಿ ಹಂತದಲ್ಲಿಯೇ ಹೆಚ್ಚು ಹೆಚ್ಚು ವಿಷಯಗಳನ್ನು ಅಧ್ಯಯನ ಮಾಡಬೇಕು. ಜತೆಗೆ
ಬದ್ಧತೆ, ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕಾನೂನು ಕ್ಷೇತ್ರ ವ್ಯಾಪಕವಾಗಿ ಬೆಳೆಯುತ್ತಿದೆ. ಸರ್ಕಾರಿ ಅಭಿಯೋಜಕ, ನ್ಯಾಯಾಧೀಶ, ಬ್ಯಾಂಕ್‌ ಹಾಗೂ ಕಂಪನಿ ಸಲಹೆಗಾರ, ಉಪನ್ಯಾಸಕ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಅಮೆರಿಕದಲ್ಲಿ ಕಾನೂನು ಪದವಿ ಪಡೆಯುವುದು ತುಂಬಾ ಕಷ್ಟ ಎಂದು
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಆರ್.ಎಲ್.ಉಮಾಶಂಕರ್ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ ಬಿ.ಎಸ್‌.ರೆಡ್ಡಿ ಅವರು, ಪ್ರತಿ ಕ್ಷೇತ್ರದಲ್ಲಿ ಹೊಸ ಹೊಸ ಕಾನೂನುಗಳು
ಬರುತ್ತಿವೆ. ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತ ಹೊಂದಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಬೆಂಗಳೂರಿನ ಅಲೈನ್ಸ್‌ ವಿಶ್ವವಿದ್ಯಾಲಯದ ಕುಲಸಚಿವ
ಪ್ರೊ.ಡಾ.ಬಿ.ಕೆ.ರವೀಂದ್ರ, ಸಹಾಯಕ ಪ್ರಾಧ್ಯಾಪಕಿ ಶಾರದಾ ಶಿಂಧೆ ಅವರೂ ಇದ್ದರು.

ಸಹಾಯಕ ಪ್ರಾಧ್ಯಾಪಕ ಜಿ.ಎಸ್‌.ಯತೀಶ್‌ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಎಂ.ಸೋಮಶೇಖರಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.