ADVERTISEMENT

ತುಕ್ಕುಹಿಡಿಯುತ್ತಿದೆ ‘ರೋಡ್‌ ಸ್ವೀಪರ್‌’ ಮಷಿನ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:44 IST
Last Updated 18 ಸೆಪ್ಟೆಂಬರ್ 2017, 9:44 IST
ದಾವಣಗೆರೆ ಪಾಲಿಕೆ ಆವರಣದಲ್ಲಿ ಕೆಟ್ಟು ನಿಂತಿರುವ ರೋಡ್‌ ಸ್ವೀಪರ್‌ ಯಂತ್ರ
ದಾವಣಗೆರೆ ಪಾಲಿಕೆ ಆವರಣದಲ್ಲಿ ಕೆಟ್ಟು ನಿಂತಿರುವ ರೋಡ್‌ ಸ್ವೀಪರ್‌ ಯಂತ್ರ   

ದಾವಣಗೆರೆ: ‘ಸ್ಮಾರ್ಟ್‌ ಸಿಟಿ’ ಮುಕುಟವನ್ನು ಮುಡಿಗೇರಿಸಿಕೊಳ್ಳಲು ಸಜ್ಜಾಗಿರುವ ‘ದೇವನಗರಿ’ಯ ಹಲವೆಡೆ ಕಾಂಕ್ರೀಟ್‌ ರಸ್ತೆಗಳು ನಿರ್ಮಾಣಗೊಳ್ಳುತ್ತಿದ್ದರೂ ನಾಗರಿಕರಿಗೆ ‘ದೂಳಿನ ಮಜ್ಜನ’ ಮಾತ್ರ ಇಂದಿಗೂ ತಪ್ಪಿಲ್ಲ. ಇನ್ನೇನು ಸಿಸಿ ರಸ್ತೆಯಾಗುತ್ತಿದೆ, ದೂಳಿನಿಂದ ಮುಕ್ತಿ ಸಿಗಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

ದೂಳು ನಿಯಂತ್ರಿಸಲು ಮಹಾನಗರ ಪಾಲಿಕೆ ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದ ಟ್ರ್ಯಾಕ್ಟರ್‌ ಮೌಂಟೆಡ್‌ ‘ರೋಡ್‌ ಸ್ವೀಪರ್‌’ (ರಸ್ತೆ ಗುಡಿಸುವ) ಯಂತ್ರ ಕಾರ್ಯನಿರ್ವಹಿಸಿದ್ದೇ ವಿರಳ. ಯಂತ್ರದ ಬಿಡಿಭಾಗಗಳು ಹಾಳಾಗಿ, ಎರಡು ವರ್ಷಗಳ ಹಿಂದೆಯೇ ಪಾಲಿಕೆಯ ವರ್ಕ್‌ಶಾಪ್‌ನ ಒಂದು ಮೂಲೆಯನ್ನು ಅದು ಸೇರಿದೆ. ಒಂದೇ ಕಡೆ ಈ ವಾಹನವನ್ನು ನಿಲ್ಲಿಸಿರುವುದರಿಂದ ಕೆಲವೆಡೆ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದೆ.

ಜಿಲ್ಲಾಧಿಕಾರಿ ಕಚೇರಿಯಿಂದ ಹೊಸ ಬಸ್‌ನಿಲ್ದಾಣದವರೆಗೂ ಪಿ.ಬಿ. ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಬಹುತೇಕ ಮುಗಿದೆ. ಶಾಮನೂರು ರಸ್ತೆ, ಎವಿಕೆ ಕಾಲೇಜು ರಸ್ತೆ, ಬಿಐಟಿಇ ರಸ್ತೆ, ನಿಟುವಳ್ಳಿ ರಸ್ತೆ, ಎಸ್‌.ಎಸ್‌. ಆಸ್ಪತ್ರೆ ರಸ್ತೆ... ಹೀಗೆ ನಗರದ ಪ್ರಮುಖ ರಸ್ತೆಗಳು ಸಿಸಿ ರಸ್ತೆಗಳಾಗಿ ಮೇಲ್ದರ್ಜೆಗೇರಿದ್ದರೂ ದೂಳಿನ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ.

ADVERTISEMENT

ಮಳೆ ಬಂದ ಮರುದಿನ ರಸ್ತೆಯ ಕೆಲವೆಡೆ ದಟ್ಟವಾಗಿ ದೂಳು ಕವಿಯುವುದರಿಂದ ವಾಹನ ಸವಾರರಿಗೆ ಕೆಲವೆಡೆ ದಾರಿಯೇ ಕಾಣದಂತಾಗುತ್ತದೆ. ಅದರಲ್ಲೂ ದೊಡ್ಡ ವಾಹನಗಳ ಹಿಂಬದಿಗೆ ಸಾಗುವ ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು. ಮರಳು ಮಿಶ್ರಿತ ಮಣ್ಣು ಹಾಸಿಕೊಂಡಿರುವ ರಸ್ತೆಯ ಮೇಲೆ ಏಕಾಏಕಿ ಬ್ರೇಕ್‌ ಹಾಕಿದಾಗ ಬೈಕ್‌ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ದೃಶ್ಯ ಆಗಾಗ ಕಾಣುವುದು ಸಾಮಾನ್ಯ.

ಮೂಲೆ ಸೇರಿದ ರೋಡ್‌ ಸ್ವೀಪರ್‌: 
ರೋಡ್‌ ಸ್ವೀಪರ್‌ ಯಂತ್ರದ ಹಿಂಭಾಗದಲ್ಲಿ ನೀರಿನ ಟ್ಯಾಂಕರ್‌ ಇದೆ. ಅದರಿಂದ ಬರುವ ನೀರನ್ನು ಯಂತ್ರದ ಮುಂಭಾಗದ ರಸ್ತೆ ಮೇಲೆ ಪೈಪ್‌ನಿಂದ ಸಿಂಪಡಿಸಲಾಗುತ್ತದೆ. ಯಂತ್ರದ ಮುಂಭಾಗದಲ್ಲಿ ತಿರುಗುವ ಬ್ರಷ್‌ ರಸ್ತೆಯನ್ನು ಉಜ್ಜಿ ಮಣ್ಣು, ಸಣ್ಣಪುಟ್ಟ ಕಸ–ಕಡ್ಡಿ, ದೂಳನ್ನು ಕಂಟೇನರ್‌ ಒಳಗೆ ಸೆಳೆದುಕೊಳ್ಳುತ್ತದೆ. ಈ ವಾಹನ ಗಂಟೆಗೆ ಸುಮಾರು ಐದಾರು ಕಿ.ಮೀ ರಸ್ತೆಯನ್ನು ಗುಡಿಸುವ ಸಾಮರ್ಥ್ಯ ಹೊಂದಿದೆ.

‘ಯಂತ್ರದ ಬ್ರಷ್‌, ದೂಳು ಸಂಗ್ರಹಿಸುವ ಕಂಟೇನರ್‌ ಹಾಗೂ ನೀರು ಸಿಂಪಡಿಸುವ ಪೈಪ್‌ ಹಾಳಾಗಿದೆ. ಇದರ ಬಿಡಿಭಾಗಗಳನ್ನು ಪುಣೆಯಿಂದ ತರಬೇಕಾಗಿದೆ. ಹೀಗಾಗಿ ಎರಡು ವರ್ಷಗಳಿಂದ ಇದನ್ನು ದುರಸ್ತಿಗೊಳಿಸಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಾಲಿಕೆಯ ಚಾಲಕರೊಬ್ಬರು ತಿಳಿಸಿದರು.

‘ಈಗ ಹಲವೆಡೆ ಸಿಮೆಂಟ್‌ ರಸ್ತೆ ನಿರ್ಮಿಸಲಾಗಿದೆ. ಈ ವಾಹನದಲ್ಲಿ ಹಗಲು–ರಾತ್ರಿ ಕೆಲಸ ಮಾಡಿದರೂ ರಸ್ತೆ ಗುಡಿಸಿ ಮುಗಿಸಲು ಸಾಧ್ಯವಾಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಗರದ ರಸ್ತೆಗಳನ್ನು ದೂಳಿನಿಂದ ಮುಕ್ತಗೊಳಿಸಲು ಇಂಥ ನಾಲ್ಕು ವಾಹನಗಳಾದರೂ ಬೇಕಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ತಪ್ಪದ ಗೋಳು:
‘ಹಣ್ಣು ಮಾರಾಟ ಮಾಡಿಯೇ ನಾವು ಜೀವನ ಸಾಗಿಸಬೇಕು. ಪೌರಕಾರ್ಮಿಕರೂ ಸರಿಯಾಗಿ ರಸ್ತೆಯನ್ನು ಗುಡಿಸುತ್ತಿಲ್ಲ. ಮಳೆ ನಿಂತ ಬಳಿಕ ರಸ್ತೆಯಲ್ಲಿ ವಿಪರೀತ ದೂಳು ಬರುತ್ತಿದೆ. ಆಟೊ ಚಾಲಕರು, ನಗರಕ್ಕೆ ಕೆಲಸಕ್ಕೆ ಬಂದ ಹಳ್ಳಿಯ ಜನ ಮಾತ್ರ ಅನಿವಾರ್ಯ ಎಂಬ ಕಾರಣಕ್ಕೆ ನಮ್ಮ ಬಳಿ ಬಂದು ಹೊಟ್ಟೆ ತಣ್ಣಗಾಗಿಸಿಕೊಳ್ಳುತ್ತಾರೆ. ಈ ದೂಳಿನಿಂದ ಯಾವಾಗ ಮುಕ್ತಿ ಸಿಗುತ್ತದೆಯೋ ಗೊತ್ತಿಲ್ಲ’ ಎಂದು ಪಿ.ಬಿ. ರಸ್ತೆ ಬದಿಯ ಹಣ್ಣು ವ್ಯಾಪಾರಿ ಶಿವಣ್ಣ ಅಳಲು ತೋಡಿಕೊಂಡರು.

‘ರಸ್ತೆ ಬದಿಯ ಹೋಟೆಲ್‌ಗಳಲ್ಲಿ ಕುಳಿತು ಊಟ ಮಾಡಲು ಆಗದಷ್ಟು ದೂಳು ಕವಿದಿರುತ್ತದೆ. ನಮಗೆ ಅನಿವಾರ್ಯ ಎಂಬ ಕಾರಣಕ್ಕೆ ಇಲ್ಲೇ  ಊಟ ಮಾಡುತ್ತೇವೆ. ಸಿಮೆಂಟ್‌ ರಸ್ತೆ ಮಾಡಿದರೂ ದೂಳಿನ ಕಾಟ ತಪ್ಪಿಲ್ಲ’ ಎಂದು ಆಟೊ ಚಾಲಕ ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.