ADVERTISEMENT

ನೀರಿನ ಸಂಗ್ರಹ ಕಾಮಗಾರಿ ಚಾಲನೆ

ಎಚ್ಚೆತ್ತುಕೊಂಡ ಹರಿಹರದ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 12:32 IST
Last Updated 21 ಮಾರ್ಚ್ 2017, 12:32 IST
ನೀರಿನ ಸಂಗ್ರಹ ಕಾಮಗಾರಿ ಚಾಲನೆ
ನೀರಿನ ಸಂಗ್ರಹ ಕಾಮಗಾರಿ ಚಾಲನೆ   

ಹರಿಹರ: ಸಮೀಪದ ತುಂಗಭದ್ರಾ ನದಿಯಲ್ಲಿರುವ ಜಾಕ್‌ವೆಲ್‌ ಬಳಿ ನೀರು ಸಂಗ್ರಹಿಸುವ ಕಾಮಗಾರಿಗೆ ಕೈಗೊಳ್ಳಲು ನಗರಸಭೆ ಕೊನೆಗೂ ಮುಂದಾಗಿದೆ.

‘ಜಾಕ್‌ವೆಲ್‌ ಬಳಿ ತುರ್ತು ಕಾಮಗಾರಿ ಅಗತ್ಯ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟಗೊಂಡ ವರದಿಯಿಂದ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಜಾಕ್‌ವೆಲ್‌ ಬಳಿ ನೀರು ಸಂಗ್ರಹಿಸುವ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಭರವಸೆ ಮೂಡಿದೆ.

ಭದ್ರಾ ಜಲಾಶಯದಿಂದ ಕುಡಿಯುವ ಸಲುವಾಗಿ ತುಂಗಭದ್ರಾ ನದಿಗೆ ಮಾರ್ಚ್‌ 20ರಿಂದ 1.6 ಟಿಎಂಸಿ ನೀರು ಹರಿಸಲಾಗುತ್ತಿದೆ. ಈ ನೀರನ್ನು ನಗರಸಭೆ ಜಾಕ್‌ವೆಲ್ ಬಳಿ ಸಂಗ್ರಹಿಸಿ ಡಲು ಸೂಕ್ತ ಕ್ರಮಕೈಗೊಳ್ಳದೇ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದನ್ನು ಪ್ರಕಟಿಸಲಾಗಿತ್ತು. ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಒತ್ತಡ ಮಣಿದ ಅಧಿಕಾರಿಗಳು ಕೂಡಲೇ, ಒಳಚರಂಡಿ ಯೋಜನೆಗೆ ಬಳಸಲಾಗುತ್ತಿದ್ದ ಜೆಸಿಬಿಗಳನ್ನು ಆದ್ಯತೆ ಮೇರೆಗೆ ನೀರು ಸಂಗ್ರಹದ ಕಾಮಗಾರಿಗೆ ಕಳುಹಿಸಿ ಕಾಮಗಾರಿಗೆ ಚಾಲನೆ ನೀಡಿಸಿದರು.

ADVERTISEMENT

ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ, ‘ಸರ್ಕಾರ, ಕುಡಿಯುವ ನೀರಿಗಾಗಿ ನದಿಗೆ ನೀರು ಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಾಕ್‌ವೆಲ್‌ ಬಳಿ ನೀರು ಸಂಗ್ರಹಕ್ಕೆ ದಿನದ 24 ಗಂಟೆಯೂ ನಿರಂತವಾಗಿ 4 ಜೆಸಿಬಿಗಳ ಮೂಲಕ ಕಾಮಗಾರಿ ನಡೆಯಲಿದೆ. ಇದಕ್ಕೆ ನಗರಸಭೆಯ ಯಂತ್ರಗಳನ್ನು ಮಾತ್ರ ವಲ್ಲದೇ ಖಾಸಗಿಯವರಿಂದಲೂ ಬಾಡಿಗೆ ಆಧಾರದಲ್ಲಿ ಪಡೆದು ಕಾಮಗಾರಿ ನಡೆಸಲಾಗುವುದು’ ಎಂದು ತಿಳಿಸಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ‘ನಗರದ ಪ್ರಸ್ತುತ ನೀರಿನ ಸಮಸ್ಯೆಗೆ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್ ಕಾರಣ. ನನ್ನ ಅವಧಿಯಲ್ಲಿ ಅಗಸನಕೆಟ್ಟೆ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೆ. ಆದರೆ, ಈ ಯೋಜನೆಗೆ ಜೆಡಿಎಸ್ ಸದಸ್ಯರು ಸ್ಪಂದಿಸದ ಕಾರಣ ಯೋಜನೆ ನನೆಗುದಿಗೆ ಬಿತ್ತು. ಈ ಹಿನ್ನೆಲೆ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ’ ಎಂದರು.

ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎಲ್ಲರೂ ಪಕ್ಷಭೇದ ಮರೆತು ಕೈಜೋಡಿಸಿದರೆ, ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಜಾಕ್‌ವೆಲ್ ಬಳಿ ಬ್ಯಾರೇಜ್ ಹಾಗೂ ತಾಲ್ಲೂಕಿನ ಕೆರೆಗಳ ಅಭಿವೃದ್ಧಿ ಭವಿಷ್ಯದ ನೀರಿನ ಸಮಸ್ಯೆ ಪರಿಹಾರ ದೊರೆಯುತ್ತದೆ ಎಂದರು.

ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್, ನಗರಸಭೆ ಸದಸ್ಯರಾದ ಅಂಜುಜಾ ರಾಜೋಳಿ, ಸಿಗ್ಬತ್ಉಲ್ಲಾ, ರಾಜು ರೋಖಡೆ, ಬಿ.ಕೆ. ಸೈಯದ್ ಎಸ್.ಎಂ. ವಸಂತ್, ಶಹಜಾದ್ ಕೆ. ಸನಾವುಲ್ಲಾ, ಮಾಜಿ ಶಾಸಕ ಬಿ.ಪಿ. ಹರೀಶ್, ನಗರಸಭೆ
ಎಇಇ ಎಂ.ಬಿ. ಪಾಟೀಲ್, ಸಹಾಯಕ ಎಂಜಿನಿಯರ್ ಸಿ.ಬಿ. ಮಹಾಂತೇಶ್, ಇತರರು ಇದ್ದರು.

ಜಾಕ್‌ವೆಲ್‌ ಬಳಿ ಕಾಮಗಾರಿಗೆ ಬಿಜೆಪಿ ಪಟ್ಟು

ಹರಿಹರ: ಸರ್ಕಾರ ಭದ್ರಾ ಆಣೆಕಟ್ಟಿನಿಂದ ತುಂಗಭದ್ರಾ ನದಿಗೆ ನೀರು ಹರಿಸುತ್ತಿರುವ ಹಿನ್ನೆಲೆ ಜಾಕ್‌ವೆಲ್‌ ಬಳಿ ತುರ್ತು
ಕಾಮಗಾರಿಗೆ ಆಗ್ರಹಿಸಿ ಮಾಜಿ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಕಾರ್ಯಕರ್ತರು ಸೋಮವಾರ ನಗರಸಭೆಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟಿಸಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ‘ನಗರದಲ್ಲಿ ಕಳೆದ ಕೆಲ ತಿಂಗಳಿಂದ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ. ಹರಿದು ಬರುವ ನೀರಿನ್ನು ಸಂಗ್ರಹಿಸಲು ಜಾಕ್‌ವೆಲ್‌ ಬಳಿ ತುರ್ತು ಕಾಮಗಾರಿಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಕ್‌ವೆಲ್‌ ಬಳಿ ಕಲ್ಲು ಹಾಗೂ ಹೂಳು ತುಂಬಿದ್ದು, ಅದನ್ನು ತೆರವುಗೊಳಿಸಿ ನೀರು ಸಂಗ್ರಹಕ್ಕೆ ಅನುವು ಮಾಡಿದ್ದಾರೆ, ನೀರಿನ ಸಮಸ್ಯೆಗೆ ತಾತ್ಕಲಿಕ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್ ಹಾಗೂ ಪೌರಾಯುಕ್ತೆ ಎಸ್‌. ಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ, ನಗರಸಭೆ ಜೆಸಿಬಿಯನ್ನು ದುರಸ್ತಿಗಾಗಿ ಕಳುಹಿಸಿ ಒಂದು ತಿಂಗಳಾಗಿದೆ. ಖಾಸಗಿ ಜೆಸಿಬಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಅಂದಾಜುಪಟ್ಟಿ ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದರು.

ಪೌರಾಯುಕ್ತರ ಹೇಳಿಕೆಯಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಕೂಡಲೇ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಪಟ್ಟುಹಿಡಿದರು.
ಸಿಬ್ಬಂದಿ ಹಾಗೂ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಒಳಚರಂಡಿ ಯೋಜನೆ ಕಾಮಗಾರಿಯ ಜೆಸಿಬಿಗಳನ್ನು ಬಳಸಿಕೊಂಡು ಕಾಮಗಾರಿ ನಡೆಸುವುದಾಗಿ ಪೌರಾಯುಕ್ತೆ ಎಸ್‌. ಲಕ್ಷ್ಮಿ ಭರವಸೆ ನೀಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ರಾಜು ರೋಖಡೆ, ನಗರಸಭೆ ಸದಸ್ಯರಾದ ಬಿ.ಕೆ. ಸೈಯದ್ ರೆಹಮಾನ್, ಅಂಜುಜಾ ಪಿ. ರಾಜೋಳಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಕಾಟ್ವೆ, ಮುಖಂಡರಾದ ರಜನಿ, ದಿನೇಶ್, ತುಳಜಪ್ಪ ಭೂತೆ, ಪರಶುರಾಮ ಕಾಟ್ವೆ, ಮುತ್ತಣ್ಣ, ರಾಜು ಖಿರೋಜಿ, ಮೋತಿ ಖಿರೋಜಿ, ಮೋತ್ಯಾನಾಯ್ಕ, ಅಜ್ಜಪ್ಪ, ಅಜಿತ್, ಪಿ. ಚಂದ್ರಶೇಖರ್ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.