ADVERTISEMENT

ನೀರು ನೀಡಿದವರಿಗೆ ಚೆಕ್‌ ವಿತರಿಸಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 4:39 IST
Last Updated 25 ಏಪ್ರಿಲ್ 2017, 4:39 IST
ಹರಪನಹಳ್ಳಿ ತಾಲ್ಲೂಕು ಪಂಚಾಯ್ತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಂ.ಪಿ.ರವೀಂದ್ರ ಮಾತನಾಡಿದರು
ಹರಪನಹಳ್ಳಿ ತಾಲ್ಲೂಕು ಪಂಚಾಯ್ತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಂ.ಪಿ.ರವೀಂದ್ರ ಮಾತನಾಡಿದರು   

ಹರಪನಹಳ್ಳಿ: ಖಾಸಗಿ ಕೊಳವೆಬಾವಿಗಳಿಂದ ಗ್ರಾಮಗಳಿಗೆ ನೀರು ಪೂರೈಸಿದ ಮಾಲೀಕರಿಗೆ ಚೆಕ್‌ ವಿತರಿಸಲು ವಿಳಂಬ, ಪಿಡಿಒಗಳ ಸಭೆ ಕರೆಯಲು ಒತ್ತಾಯ, ಶ್ರೀಮಂತರಿಗೂ ಭಾಗ್ಯಜ್ಯೋತಿ ಯೋಜನೆ ಸೌಲಭ್ಯ ಕಲ್ಪಿಸಿರುವ ವಿಷಯ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸೋಮವಾರ ತೀವ್ರ ಚರ್ಚೆಗೊಳಗಾಯಿತು.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲಾಗಿತ್ತು. ನಾಲ್ಕು ತಿಂಗಳಿನಿಂದ ಬಾಡಿಗೆ ಹಣ ನೀಡಿಲ್ಲ. ನೀರು ಪೂರೈಕೆ ಸ್ಥಗಿತಗೊಳಿಸುವುದಾಗಿ ಮಾಲೀಕರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಕೂಡಲೇ ಚೆಕ್‌ ವಿತರಿಸಿ ಎಂದು ಸದಸ್ಯರಾದ ಬಸವನಗೌಡ, ಒ.ರಾಮಪ್ಪ, ಈರಣ್ಣ, ಹುಣ್ಸಿಹಳ್ಳಿ ಪ್ರಕಾಶ್‌, ಗಣೇಶ್‌, ವೆಂಕಟೇಶ್‌ ರೆಡ್ಡಿ ಆಗ್ರಹಿಸಿದರು.

‘ಗ್ರಾಮಗಳಲ್ಲಿ ನೀರಿನ ತೀವ್ರ ಸಮಸ್ಯೆ ಇದೆ. ಕೊಳವೆಬಾವಿ ಮಾಲೀಕರು ನೀರು ಪೂರೈಕೆ ಸ್ಥಗಿತಗೊಳಿಸಿದರೆ ಗ್ರಾಮದಲ್ಲಿ ಸದಸ್ಯರಿಗೆ ಉಳಿಗಾಲವಿಲ್ಲ. ಪಿಡಿಒಗಳ ಸಭೆ ಕರೆಯುವಂತೆ ಒಂದು ವರ್ಷದಿಂದ ಒತ್ತಾಯಿಸುತ್ತಿದ್ದರೂ, ಕಾರ್ಯನಿರ್ವ ಹಣಾಧಿಕಾರಿ ರೇವಣ್ಣ ಸಭೆ ನಡೆಸದೇ ಅವರ ರಕ್ಷಣೆಗೆ ನಿಂತಿದ್ದಾರೆ. ಅಧ್ಯಕ್ಷರೂ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರು, ಅಧ್ಯಕ್ಷೆ ಅನ್ನಪೂರ್ಣಮ್ಮ ಮತ್ತು ರೇವಣ್ಣ ನಡುವೆ ಮಾತಿನ ಚಕಮಕಿ ನಡೆಯಿತು.

ಸಭೆ ವಿಳಂಬ: ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾದರೂ ಸಭೆ ಆರಂಭಗೊಂಡಿರಲಿಲ್ಲ. ಸಭೆ ನಡೆಸುವಂತೆ ಅಧ್ಯಕ್ಷೆ ಹಾಗೂ 
ಸದಸ್ಯರು ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದಾಗ, ಶಾಸಕರು ಸಭೆಗೆ ಬರಲಿದ್ದಾರೆ ಎಂದು ತಿಳಿಸಿದರು. ಈ ಮಾಹಿತಿಯನ್ನು ಇದುವರೆಗೆ ಏಕೆ ಮುಚ್ಚಿಟ್ಟಿದ್ದೀರಿ ಎಂದು ಅಧಿಕಾರಿಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಭಾಗ್ಯಜ್ಯೋತಿ ಯೋಜನೆ ಶ್ರೀಮಂತರ ಪಾಲಾಗಿದೆ. ಮನೆಯಲ್ಲಿ ಫ್ರಿಜ್‌, ಫ್ಯಾನ್‌, ವಾಹನ, ವಾಷಿಂಗ್‌ ಮಷಿನ್‌, ಟಿವಿ ಇದ್ದರೂ ಈ ಯೋಜನೆಯಡಿ ಸೌಲಭ್ಯ ನೀಡಲಾಗಿದೆ ಎಂದು ಸದಸ್ಯರು ದೂರಿದರು. ಗ್ರಾಮ ಪಂಚಾಯ್ತಿ ನೀಡಿದ ಪಟ್ಟಿಯಂತೆ ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿ ಸಲಾಗಿದೆ ಎಂದು ಬೆಸ್ಕಾಂ ಎಂಜಿನಿಯರ್‌ ಎಸ್‌.ಭೀಮಪ್ಪ ತಿಳಿಸಿದರು.

ಮಧ್ಯಾಹ್ನ 2ಕ್ಕೆ ಬಂದ ಶಾಸಕ ಎಂ.ಪಿ. ರವೀಂದ್ರ ಅವರು, ಕುಡಿಯುವ ನೀರು, ರಸ್ತೆ ಮತ್ತು ಆಶ್ರಯ ಯೋಜನೆ ಸಮಸ್ಯೆಗಳು ಕುರಿತು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.