ADVERTISEMENT

ನೂತನ ಬಡಾವಣೆ ನಿರ್ಮಾಣಕ್ಕೆ ಕ್ರಮ

ದಾವಣಗೆರೆ– ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಜಿ.ಎಚ್‌. ರಾಮಚಂದ್ರಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 7:27 IST
Last Updated 14 ಫೆಬ್ರುವರಿ 2017, 7:27 IST
ದಾವಣಗೆರೆ– ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಜಿ.ಎಚ್‌.ರಾಮಚಂದ್ರಪ್ಪ ಅವರು ಸೋಮವಾರ ‘ದೂಡಾ’ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ದಾವಣಗೆರೆ– ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಜಿ.ಎಚ್‌.ರಾಮಚಂದ್ರಪ್ಪ ಅವರು ಸೋಮವಾರ ‘ದೂಡಾ’ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.   

ದಾವಣಗೆರೆ: ‘ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಗಿರುವ ದಾವಣಗೆರೆಯನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಜೊತೆಗೆ ನಗರದ ಹೊರವಲಯದಲ್ಲಿ ನೂತನ ಬಡಾವಣೆಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಜಿ.ಎಚ್‌.ರಾಮಚಂದ್ರಪ್ಪ ಹೇಳಿದರು.

ನಗರದ ‘ದೂಡಾ’ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ದಾವಣಗೆರೆಯನ್ನು ಸಿಂಗಾಪುರ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ಕನಸಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ನಗರದ ಹಲವೆಡೆ ರಸ್ತೆ ವಿಸ್ತರಣೆ/ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರೊಂದಿಗೆ ವರ್ಷದ 365 ದಿನವೂ ಜನರಿಗೆ ಕುಡಿಯುವ ನೀರು ಸೌಲಭ್ಯ ಒದಗಿಸುವ ಯೋಜನೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

‘50:50 ಅನುಪಾತದ ಅಡಿಯಲ್ಲಿ ರೈತರಿಂದ ಜಮೀನು ಖರೀದಿಸಿ ನೂತನ ಬಡಾವಣೆಗಳನ್ನು ನಿರ್ಮಿಸಿ ನಗರದ ಬಡ ಮತ್ತು ಮಾಧ್ಯಮ ವರ್ಗದ ನಿರಾಶ್ರಿತರಿಗೆ ‘ದೂಡಾ’ ನಿಯಮದನ್ವಯ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ದೇವರಾಜ ಅರಸು ಬಡಾವಣೆ ಹಾಗೂ ಜೆ.ಎಚ್‌.ಪಟೇಲ್‌ ಬಡಾವಣೆ ಸೇರಿದಂತೆ ದೂಡಾದಿಂದ ಈಗಾಗಲೇ ನಿರ್ಮಾಣವಾಗಿರುವ ಕೆಲ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯಗಳ ಸಮಸ್ಯೆ ಇದ್ದು, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ವಾಹನಗಳ ದಟ್ಟಣೆ ನಿಯಂತ್ರಿಸಲು ದೇವರಾಜ ಅರಸು ಬಡಾವಣೆ ಬಳಿ ನಿರ್ಮಾಣವಾಗುತ್ತಿರುವ ನೂತನ ಮೇಲ್ಸೇತುವೆ ಕಾಮಗಾರಿಯು ಸ್ಥಗಿತಗೊಂಡಿದ್ದು, ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮೇಲ್ಸೇತುವೆ ಕಾಮಗಾರಿಯ ಪುನರ್‌ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಮಹಾನಗರ ಪಾಲಿಕೆ ಹಾಗೂ ದೂಡಾ ಸಹಯೋಗದೊಂದಿಗೆ ನಗರದಲ್ಲಿನ ಹೊರ ವರ್ತುಲ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ, ಅಗತ್ಯವಿರುವೆಡೆ ಒಳಚರಂಡಿ ವ್ಯವಸ್ಥೆ, ನೂತನ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ನಗರವನ್ನು ಹಸಿರೀಕರಣವನ್ನಾಗಿ ಮಾಡುವ ಚಿಂತನೆ ಇದೆ’ ಎಂದು ತಿಳಿಸಿದರು.

‘ಲಾಭವಿಲ್ಲ ನಷ್ಟವಿಲ್ಲ’ (No Profit No Lose) ತತ್ವದ ಅಡಿಯಲ್ಲಿ ಅರ್ಹರಿಗೆ ದೂಡಾ  ನಿಯಮದ ಅನ್ವಯ ನಿವೇಶನ ನೀಡಲಾಗುವುದು. ಇದರಲ್ಲಿ ಯಾವುದೇ ಭ್ರಷ್ಟಾಚಾರ ನುಸುಳದಂತೆ ಎಚ್ಚರ ವಹಿಸಲಾಗುವುದು’ ಎಂದು ಹೇಳಿದರು. ‘ಕುಂದವಾಡ ಕೆರೆ, ಆವರಗೆರೆ ಕೆರೆ ಹಾಗೂ ಬಾತಿ ಕೆರೆ ಸೇರಿದಂತೆ ನಗರದ ಹೊರವಲಯದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಕೂಡ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಮೇಯರ್‌ ರೇಖಾ ನಾಗರಾಜ್‌, ‘ದೂಡಾ’ ಆಯುಕ್ತ ಆದಪ್ಪ, ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ, ಬಾ.ಮ. ಬಸವರಾಜಯ್ಯ ಉಪಸ್ಥಿತರಿದ್ದರು

‘ಅಲ್ಪ ಅವಧಿ: ಹೆಚ್ಚು ಅಭಿವೃದ್ಧಿಯಾಗಲಿ’

‘ದೂಡಾ’ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಜಿ.ಎಚ್‌.ರಾಮಚಂದ್ರಪ್ಪ ಅವರ ಅಧಿಕಾರ ಅವಧಿ 1 ವರ್ಷವಾದರೂ ಎರಡು ವರ್ಷದ ರೀತಿಯಲ್ಲಿ ಅವರು ಹಗಲು ರಾತ್ರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ನಗರದ ಪ್ರಗತಿಗೆ ಶ್ರಮಿಸಬೇಕು’ ಎಂದು ವೇದಿಕೆ ಕಾರ್ಯಕ್ರಮದ ವೇಳೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್‌ ಸಲಹೆ ನೀಡಿದರು.

‘ನಗರದ ಹೊರವಲಯದಲ್ಲಿ ರೈತರಿಂದ 50:50 ಯೋಜನೆಗೆ (ರೈತರಿಗೆ ಶೇ 50 ಹಾಗೂ ದೂಡಾಗೆ ಶೇ 50 ಅನುಪಾತದಲ್ಲಿ) ಜಮೀನು ಪಡೆದು ವಸತಿ ಸಂಕಿರ್ಣ ನಿರ್ಮಾಣ ಮಾಡಲು ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಮಾತನಾಡಿ, ‘ನಗರದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಲ್ಲಿನ ದೂರದೃಷ್ಟಿ ಹಾಗೂ ಗುಣಮಟ್ಟದ ಶಾಶ್ವತ ಕಾಮಗಾರಿಗಳಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆಯಲಿ’ ಎಂದು ಹಾರೈಸಿದರು.

ADVERTISEMENT

ಉಪ ಮೇಯರ್‌ ಬೆಳವನೂರು ನಾಗರಾಜಪ್ಪ, ಪಾಲಿಕೆ ಸದಸ್ಯ ಶಿವಗಂಗಾ ಬಸವರಾಜ್‌, ಹದಡಿ ಉಚ್ಚಂಗೆಪ್ಪ, ಅಜ್ಜಂಪುರದ ಮೃತ್ಯುಂಜಯಪ್ಪ, ಶಾಮನೂರು ರಾಮಚಂದ್ರಪ್ಪ, ಗೌಡ್ರು ರಾಜಶೇಖರಪ್ಪ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್‌ ಮುಖಂಡ ಆರ್‌.ಎಸ್‌.ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.