ADVERTISEMENT

ಪ್ರಕೃತಿ ಮಡಿಲಲ್ಲಿ ಬದುಕಿನ ಪಾಠ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 7:18 IST
Last Updated 15 ನವೆಂಬರ್ 2017, 7:18 IST

ದಾವಣಗೆರೆ: ಎದುರು ವಿಶಾಲವಾದ ಕೆರೆ, ಸುತ್ತ ಗಿಡ, ಮರ, ಬಳ್ಳಿಯ ತಣ್ಣನೆಯ ವಾತಾವರಣ. ಪ್ರಕೃತಿ ಮಡಿಲಲ್ಲಿ ಚಿರಸ್ಥಾಯಿಯಾದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರವರ್ತಕ ಕೊಂಡಜ್ಜಿ ಬಸಪ್ಪರ ಸಮಾಧಿ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಶಿಸ್ತಿನ ವಿದ್ಯಾರ್ಥಿಗಳಿಗೆ ಇಲ್ಲಿ ಸ್ಮರಣೆ ಹಾಗೂ ಶಿಸ್ತಿನ ಪಾಠ.

ಮಂಗಳವಾರ ಹರಿಹರದ ಕೊಂಡಜ್ಜಿಯಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಮ್ಮಿಕೊಂಡಿರುವ ರಾಜ್ಯ ಪುರಸ್ಕಾರ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳ ರಾಜ್ಯ ಮಟ್ಟದ ಪದಕ ತರಬೇತಿ ಶಿಬಿರದ ಉದ್ಘಾಟನೆ ಮತ್ತು ಕೊಂಡಜ್ಜಿ ಬಸಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳಿವು.

ಐದು ದಿನಗಳ ಶಿಬಿರದಲ್ಲಿ ಐದುನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಕೊಂಡಜ್ಜಿ ಬಸಪ್ಪ ಸ್ಮರಣೆ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಸಮಾಧಿಗೆ ಅತಿಥಿ ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ, ‘ಇದು ಪ್ರತಿ ವರ್ಷ ನಡೆಯುವ ಶಿಬಿರ. ಇಲ್ಲಿಗೆ ರಾಜ್ಯದ 17 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಇವರೆಲ್ಲರಿಗೂ ಜೀವನದ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಅಂಗಿ ಗುಂಡಿ ಹೇಗೆ ಹೊಲೆದುಕೊಳ್ಳಬೇಕು? ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು? ಸಾರ್ವಜನಿಕರ ಸ್ಥಳಗಳಲ್ಲಿ ನಡವಳಿಕೆ ಹೇಗಿರಬೇಕು? ಇವುಗಳ ಕುರಿತು ತರಬೇತಿ, ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡುತ್ತಾರೆ’ ಎಂದರು.

ADVERTISEMENT

‘ಕಲಿಕೆಗೆ ಈ ಪ್ರಕೃತಿ ಅನುಕೂಲ ಕರವಾಗಿದೆ. ಮಕ್ಕಳು ಖುಷಿಯಿಂದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ, ಬದುಕಿನ ಪಾಠ ಕಲಿಯುತ್ತಿದ್ದಾರೆ’ ಎಂದು ಹೇಳಿದರು.

ಮಾಜಿ ಸಚಿವ ಎಸ್‌.ಎ.ರವೀಂದ್ರ ನಾಥ ಮಾತನಾಡಿ, ‘ಕೊಂಡಜ್ಜಿ ಬಸಪ್ಪ ಈ ಭಾಗದ ಜನರಲ್ಲಿ ರಾಜಕೀಯ ಪ್ರಜ್ಞೆಯನ್ನು ಬಿತ್ತಿದವರು. ಪ್ರತಿ ಹಳ್ಳಿಯಲ್ಲೂ ಸಹಕಾರ ಸಂಘಗಳನ್ನು ರಚಿಸಿ, ಸಹಕಾರದ ತತ್ವಗಳನ್ನು ಅಂದಿನ ಕಾಲದಲ್ಲೇ ಗ್ರಾಮೀಣ ಪ್ರದೇಶದಲ್ಲಿ ಅಳವಡಿಸಿದವರು.

ರೈತರ ಸಮಸ್ಯೆ ತಿಳಿದಿದ್ದ ಅವರು ನಿಜವಾದ ರೈತ ನಾಯಕರಾಗಿದ್ದರು. ರಾಷ್ಟ್ರನಾಯಕ ನಿಜಲಿಂಗಪ್ಪ ಅವರ ನಂತರ ಈ ಭಾಗದಲ್ಲಿ ಹೆಸರು ಮಾಡಿದ್ದು ಕೊಂಡಜ್ಜಿ ಬಸಪ್ಪ ಅವರು; ಅಂದು ಅವರು ಮಾಡಿದ ಕೆಲಸಗಳ ಲಾಭಗಳನ್ನು ನಾವು ಇಂದು ಪಡೆಯುತ್ತಿದ್ದೇವೆ’ ಎಂದು
ಸ್ಮರಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಉಪಾಧ್ಯಕ್ಷ ಹಾಗೂ ಕೊಂಡಜ್ಜಿ ಬಸಪ್ಪ ಅವರ ಮಗ ಕೊಂಡಜ್ಜಿ ಷಣ್ಮುಖಪ್ಪ ಮಾತನಾಡಿ, ‘ಕಳೆದ 34 ವರ್ಷಗಳಿಂದ ಈ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿಯ ಸುಂದರ ಪರಿಸರ ದಿನದಿಂದ ದಿನಕ್ಕೆ ಆಕರ್ಷಿಸುತ್ತಿದೆ’ ಎಂದರು.

‘ರಾಜ್ಯದಲ್ಲಿ 4.50 ಲಕ್ಷ ವಿದ್ಯಾರ್ಥಿಗಳು ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿದ್ದಾರೆ. 33 ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ಸಂಸ್ಥೆ ಇದೆ. ಅಲ್ಲದೇ, 258 ಸ್ಥಳೀಯ ಸಂಸ್ಥೆಗಳಿವೆ. ಸಮವಸ್ತ್ರ ಧರಿಸುವ ಇಷ್ಟು ದೊಡ್ಡ ಸಮೂಹ ಇರುವುದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಾತ್ರ’ ಎಂದು ಅವರು ಮಾಹಿತಿ ನೀಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯರೂ ಆದ ಕೊಂಡಜ್ಜಿ ಬಸಪ್ಪ ಅವರ ಇನ್ನೊಬ್ಬ ಮಗ ಮೋಹನ್‌ ಕೊಂಡಜ್ಜಿ, ಕೊಂಡಜ್ಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಶಾಲಾಕ್ಷಮ್ಮ ನಾರಪ್ಪ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಮಹಮದ್‌ ವಾಜಿದ್, ಜಿಲ್ಲಾ ಮುಖ್ಯ ಆಯುಕ್ತ ಮುರುಘ ರಾಜೇಂದ್ರ ಚಿಗಟೇರಿ, ರೋವರ್‌ ಲೀಡರ್ ರಾಜೇಶ್‌ ಅವಲಕ್ಕಿ, ಜಿಲ್ಲಾ ಸಂಘಟನಾ ಸಮಿತಿಯ ಶಿವಣ್ಣ, ರಾಜ್ಯ ಸಂಘಟನಾ ಆಯುಕ್ತ (ಸ್ಕೌಟ್ಸ್) ಎಂ.ಪ್ರಭಾಕರ ಭಟ್, ಆಯುಕ್ತ (ಗೈಡ್ಸ್) ಸಿ.ಮಂಜುಳಾ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.