ADVERTISEMENT

ಬಾಲ್ಯವಿವಾಹ ತಡೆದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 6:42 IST
Last Updated 25 ಏಪ್ರಿಲ್ 2014, 6:42 IST

ಹರಪನಹಳ್ಳಿ: ಕೇವಲ 13 ವರ್ಷದ ಬಾಲಕಿಯನ್ನು ಬಾಲ್ಯ ವಿವಾಹ ಕೂಪದಿಂದ ಅಧಿಕಾರಿಗಳು ರಕ್ಷಿಸಿದ ಘಟನೆ ದಾವಣಗೆರೆ ತಾಲ್ಲೂಕಿನ ಮಾಳಗೊಂಡನ ಹಳ್ಳಿಯಲ್ಲಿ (ಕೋಡಿಕ್ಯಾಂಪ್) ಬುಧವಾರ ಸಂಜೆ ನಡೆದಿದೆ.

ಹರಪನಹಳ್ಳಿ ಪಟ್ಟಣದ ಮ್ಯಾಸರಗೇರಿ ನಿವಾಸಿ ಚೌಟ್ಗಿ ಬಸಪ್ಪ– ಕರಿಯಮ್ಮ ದಂಪತಿ ಪುತ್ರ 21 ವರ್ಷದ ಕರಿಬಸಪ್ಪ ಎಂಬಾತನೊಂದಿಗೆ ಏ. 24ರಂದು ವರನ ಸ್ವಗೃಹದ ಮುಂದೆ ಮದುವೆ ಮಾಡಿಸಲು ಬಾಲಕಿಯ ಪೋಷಕರಾದ ಅಡವಿಹಳ್ಳಿ ಭರಲಿಂಗಪ್ಪ– ಚೌಡಮ್ಮ ದಂಪತಿ ಹಾಗೂ ವರನ ಮನೆಯವರು ಸಿದ್ಧತೆ ಮಾಡಿಕೊಂಡಿದ್ದರು.

ಆದರೆ, ಮಕ್ಕಳ ಸಹಾಯವಾಣಿಗೆ ಬಂದ ಕರೆ ಆಧರಿಸಿ, ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬಾಲ್ಯ
ವಿವಾಹ ತಡೆಗಟ್ಟುವಲ್ಲಿ ಯಶಸ್ವಿಯಾದರು.

ಬುಧವಾರ ಸಂಜೆ ಬಾಲಕಿಯ ಮನೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯ ಮದುವೆ ನಿಲ್ಲಿಸುವಂತೆ ಸೂಚಿಸಿದರು. ಬಾಲಕಿಗೆ 18 ವರ್ಷಕ್ಕಿಂತ ಮೊದಲು ಮದುವೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಕೆ ನೀಡಿದರು. ಇದರಿಂದ ಭಯಗೊಂಡ ಬಾಲಕಿಯ ಪೋಷಕರು ಆಕೆಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟರು.

ವರನ ಮನೆಗೂ ಭೇಟಿ ನೀಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್‌.ಸಿದ್ದೇಶಪ್ಪ ನೇತೃತ್ವದ ಅಧಿಕಾರಿಗಳ ತಂಡ, ವಧುವಿಗೆ 18 ವರ್ಷ ಮೀರುವವರೆಗೂ ಮದುವೆ ಮಾಡಿಕೊಳ್ಳುವುದು ಅಪರಾಧ. ಹೀಗಾಗಿ, ಮದುವೆ ತಡೆಯುವಂತೆ ವರ ಹಾಗೂ ಆತನ ಪೋಷಕರಿಂದಲೂ ಮುಚ್ಚಳಿಕೆ ಬರೆಸಿಕೊಂಡರು.

ಎಎಸ್‌ಐ ಕೆ.ನಾಗರಾಜ, ಗ್ರಾಮ ಲೆಕ್ಕಿಗ ಅರವಿಂದ್‌ ಇತರ ಅಧಿಕಾರಿಗಳು ಹಾಜರಿದ್ದರು.

‘ಆತಂಕಕಾರಿ ಸಂಗತಿ’
ಮೂಢನಂಬಿಕೆಗೆ ಜೋತು ಬಿದ್ದಿರುವ ಕುಟುಂಬಗಳು ಬಾಲಕಿಯರ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಬಾಲ್ಯ ವಿವಾಹ ತಡೆಯಲು ಸಾರ್ವಜನಿಕರಲ್ಲಿ ಅರಿವು ಹಾಗೂ  ಜಾಗೃತಿ ಮೂಡಿಸಲು ಇಲಾಖೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಲ್ಯ ವಿವಾಹದಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಸಂಭವಿಸುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೂ, ಪೋಷಕರು ಇಂತಹ ಮೌಢ್ಯದಿಂದ ಹೊರಬರದಿರುವುದು ಆತಂಕಕಾರಿ ಸಂಗತಿ.

–ಆರ್‌.ಸಿದ್ದೇಶಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT