ADVERTISEMENT

ಬಿರುಗಾಳಿ ಮಳೆ: ಧರೆಗುರುಳಿದ ಅಡಿಕೆ ಮರ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:57 IST
Last Updated 25 ಮೇ 2017, 5:57 IST

ಸಂತೇಬೆನ್ನೂರು: ಸಮೀಪದ ಸೋಮಲಾಪುರ ಗ್ರಾಮದ ಸುತ್ತಮುತ್ತ ಮಂಗಳವಾರ ತಡರಾತ್ರಿ ಬಿರುಗಾಳಿಯೊಂದಿಗೆ ಆರಂಭವಾದ ಮಳೆಯಿಂದ ಅಪಾರ ಹಾನಿಯಾಗಿದೆ.

ಸೋಮಲಾಪುರ ಹಾಗೂ ತಾಂಡಾ ಗ್ರಾಮಗಳಲ್ಲಿ ಆರು ಮನೆಗಳ ಚಾವಣಿ ಹಾರಿಹೋಗಿವೆ. ಹೆಂಚು, ತಗಡುಗಳು ದೂರದಲ್ಲಿ ಬಿದ್ದಿವೆ. ಫಲಭರಿತ ಅಡಿಕೆ ಮರಗಳು ನೆಲಕಚ್ಚಿವೆ. ಬಾಳೆ ಗಿಡಗಳೂ ಮಳೆಯ ಆರ್ಭಟಕ್ಕೆ ನಲುಗಿವೆ.

‘ಮಳೆಗೆ ಮುನ್ನ ಬೀಸಿದ ಬಿರುಗಾಳಿಯಿಂದ ಹೆಚ್ಚು ಹಾನಿ ಸಂಭವಿಸಿದೆ. ನಮ್ಮ ಎರಡು ತೋಟಗಳ 60 ಅಡಿಕೆ ಮರಗಳು ಉರುಳಿವೆ. ಗೊಂಚಲು ಹಿಡಿದ ಮರಗಳು ಬಿದ್ದಿರುವುದು ಸಂಕಟ ತಂದಿದೆ. ಒಂದು ಮರದಲ್ಲಿ ಕನಿಷ್ಠ ₹ 1,500ರಷ್ಟು ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಬದುವಿನಲ್ಲಿನ ತೇಗದ ಮರಗಳು ಉರುಳಿವೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ’ ಎನ್ನುತ್ತಾರೆ ರೈತ ಕುಮಾರ್.

ಒಟ್ಟು 12 ರೈತರ ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿದೆ. 500 ಅಡಿಕೆ ಗಿಡಗಳು, 250 ಬಾಳೆಗಿಡಗಳು ನಾಶವಾಗಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸ
ಲಾಗಿದೆ. ತೋಟಗಾರಿಕಾ ಇಲಾಖೆ  ನಷ್ಟದ ಅಂದಾಜು ಮಾಡಲಿದೆ ಎಂದು ಗ್ರಾಮಲೆಕ್ಕಾಧಿಕಾರಿ ಕುಮಾರ್ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.