ADVERTISEMENT

ಭಾಷಾ ಬಳಕೆಯಲ್ಲಿ ಭೇದವಿದ್ದರೂ ನಾವೆಲ್ಲಾ ಒಂದೇ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 7:20 IST
Last Updated 29 ನವೆಂಬರ್ 2017, 7:20 IST

ಬಸವಾಪಟ್ಟಣ: ‘ಕನ್ನಡ ಭಾಷಾ ಬಳಕೆಯಲ್ಲಿ ಪ್ರಾದೇಶಿಕ ಭೇದವಿದ್ದರೂ ನಾವೆಲ್ಲರೂ ಒಂದೇ ಎಂಬ ಏಕತಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ವಿಮರ್ಶಕ ಡಾ.ಪ್ರಕಾಶ್‌ ಹಲಗೇರಿ ಹೇಳಿದರು.

ದಾಗಿನಕಟ್ಟೆಯಲ್ಲಿ ಸೋಮವಾರ ಕನ್ನಡ ಜಾಗೃತಿ ಸಾಂಸ್ಕೃತಿಕ ಸಂಘದ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಹಳೇ ಮೈಸೂರು ಪ್ರಾಂತ್ಯ, ಕೊಡಗು, ದಕ್ಷಿಣ ಕನ್ನಡ ಸೇರಿ ಕರಾವಳಿ ಪ್ರದೇಶಗಳಲ್ಲಿ ಆಡುಭಾಷೆಯಲ್ಲಿ ಭೇದವಿದೆ. ಆದರೆ ಕನ್ನಡ ಲಿಪಿ ಒಂದೇ ಆಗಿದೆ. ಈ ಎಲ್ಲಾ ಭಾಗಗಳಲ್ಲಿದ್ದ ಸಾಹಿತಿಗಳು ಕನ್ನಡ ಭಾಷೆಯಲ್ಲಿ ಸಮೃದ್ಧ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ತಂದಿದ್ದಾರೆ. ಅವರ ಆಶಯಗಳನ್ನು ಅರ್ಥ ಮಾಡಿಕೊಂಡು ನಾವೆಲ್ಲಾ ಒಂದಾಗಿ ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ’ ಎಂದು ಅವರು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ‘ಜನ ಸಾಮಾನ್ಯರು ಬಳಸುವ ಕನ್ನಡ ಭಾಷೆಯಲ್ಲಿ ಪಾಂಡಿತ್ಯವಿಲ್ಲದಿದ್ದರೂ ಶುದ್ಧತೆ ಇರಲಿ. ಅಸಹ್ಯ ಪದಗಳನ್ನು ಬಳಸಿ ಸಹಸ್ರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಕುಂದು ತರುವುದು ಉಚಿತವಲ್ಲ’ ಎಂದರು.

ಪ್ರಾಧ್ಯಾಪಕ ಎಂ.ಆರ್‌.ಲೋಕೇಶ್‌ ಮಾತನಾಡಿ, ‘ಇಲ್ಲಿನ ನೆಲ, ಜಲ, ಅರಣ್ಯ , ಖನಿಜ, ಕೃಷಿ, ಆಹಾರ ,ಉಡುಪು ,ಸಾಹಿತ್ಯ, ಸಂಸ್ಕೃತಿ ಎಲ್ಲವೂ ಕನ್ನಡತನದಲ್ಲಿ ಸೇರಿವೆ. ಕನ್ನಡ ಭಾಷೆಗೆ ಅದರದ್ದೇ ಆದ ಪ್ರತ್ಯೇಕ ಸ್ಥಾನವಿದೆ. ಪರಭಾಷಾ ವ್ಯಾಮೋಹದಲ್ಲಿ ಕನ್ನಡತನಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎನ್‌.ಲೋಕೇಶ್ವರಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಎಚ್‌.ಎಸ್‌.ಮಂಜುನಾಥ್‌ ಮಾತನಾಡಿದರು. ಎಂ.ಬಿ.ಜಯಪ್ಪ ಕನ್ನಡ ಗೀತ ಗಾಯನ ನಡೆಸಿಕೊಟ್ಟರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಾಲಮ್ಮ ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾಗೃತಿ ಸಮಿತಿಯ ಅಧ್ಯಕ್ಷ ಟಿ.ಸಿ.ಉಮೇಶ್‌, ಸದಸ್ಯರಾದ ಡಿ.ಆರ್‌.ರಂಗಸ್ವಾಮಿ, ಜಿ.ಬಿ.ವಿಜಯಕುಮಾರ್‌, ಬಿ.ಎಚ್‌.ನಟರಾಜ್‌, ಬಿ.ರಂಗಸ್ವಾಮಿ, ಆರ್‌.ರಾಜು ಸಮಾರಂಭದ ನೇತೃತ್ವ ವಹಿಸಿದ್ದರು. ಡಿ.ಜಿ.ರಾಮಚಂದ್ರಪ್ಪ ಸ್ವಾಗತಿಸಿದರು. ಟಿ.ಜಿ.ಬಸವನಗೌಡ ನಿರೂಪಿಸಿದರು. ಎಸ್‌.ಆರ್‌.ಸಂತೋಷ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.