ADVERTISEMENT

ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಬಸವನಿಗೆ ನಮನ

ಇಂದು ಜಿಲ್ಲೆಯಾದ್ಯಂತ ಸಂಭ್ರಮದ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 4:29 IST
Last Updated 24 ಜೂನ್ 2017, 4:29 IST

ನ್ಯಾಮತಿ: ರೈತನ ಸ್ನೇಹಿತ ಎತ್ತುಗಳಿಗೆ ವಿಶೇಷ ಪ್ರೀತಿ, ಆದರ ತೋರಿಸಿ ಅವುಗಳನ್ನು ಪೂಜಿಸುವ ವಿಶೇಷ ದಿನವೇ ಮಣ್ಣೆತ್ತಿನ ಅಮಾವಾಸ್ಯೆ.

ರೈತರು ಹಾಗೂ ಎತ್ತುಗಳ ನಡುವೆ ಅವಿನಾಭಾವ ಸಂಬಂಧವಿದೆ. ತನ್ನ ಜತೆಗೆ ಹೆಗಲುಕೊಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ತಲತಲಾಂತರದಿಂದ ರೈತರು ಈ ದಿನ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

‘ಮಣ್ಣಿನಲ್ಲಿ ಎತ್ತುಗಳ ಪ್ರತಿಕೃತಿ ರಚಿಸಿ ವಿಶೇಷ ಪೂಜೆ ಸಲ್ಲಿಸುತ್ತೇವೆ. ಸಿಹಿ ಅಡುಗೆ ತಯಾರಿಸಿ ಹಬ್ಬ ಆಚರಿಸುತ್ತೇವೆ. ಪ್ರತಿಕೃತಿಗಳನ್ನು ಹರಿಯುವ ನೀರಿನಲ್ಲಿ ಸಂಜೆ ವಿಸರ್ಜನೆ ಮಾಡುತ್ತೇವೆ. ರೈತರಲ್ಲದವರು ಕೂಡಾ ಮನೆಯಲ್ಲಿ ಪೂಜೆ ಸಲ್ಲಿಸುತ್ತಾರೆ’ ಎಂದು ಹಿರಿಯ ರೈತ ಕೋಟೆಕೇರಿ ವೀರಭದ್ರಪ್ಪ ಹೇಳುತ್ತಾರೆ.

ADVERTISEMENT

ಕೆಲವರು ಕುಂಬಾರರು ಮಾಡಿರುವ ಮಣ್ಣೆತ್ತುಗಳನ್ನು ತಂದರೆ, ಇನ್ನು ಕೆಲವರು ತಾವೇ ಎತ್ತುಗಳನ್ನು ಮಾಡಿ ಪೂಜೆ ಸಲ್ಲಿಸುತ್ತಾರೆ.

ಪಂಚಾಂಗಗಳಲ್ಲಿ ಈ ಹಬ್ಬವನ್ನು ‘ಮೃತ್ತಿಕಾ ವೃಷಭ ಪೂಜಾ’ ಎಂದು ಕರೆಯಲಾಗಿದೆ. ಸಕಲ ಜೀವರಾಶಿಗೆ ಅನ್ನ ಹಾಕುವ ಭೂಮಿ ತಾಯಿಗೂ ಮಣ್ಣಿನೊಡನೆ ಬೆರೆತು ಮಣ್ಣಾಗಿ ದುಡಿಯುವ ಬಸವಣ್ಣನಿಗೂ ತಮ್ಮ ಕೃತಜ್ಞತೆಯನ್ನು ಸೂಚಿಸಲು ಇದು ಸುಸಂದರ್ಭ ಎನ್ನುತ್ತಾರೆ ಕೋಟೆಮಲ್ಲೂರು ವಿರಕ್ತಮಠದ ಶಿವಲಿಂಗಾರಾಧ್ಯ ಶಾಸ್ತ್ರಿ.
– ಡಿ.ಎಂ.ಹಾಲಾರಾದ್ಯ

***

ಇಂದು ಅನ್ನಸಂತರ್ಪಣೆ
ಸಮೀಪದ ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಜೂನ್‌ 24ರಂದು ಮಣ್ಣೆತ್ತಿನ ಅಮಾವಾಸ್ಯೆ ಹಮ್ಮಿಕೊಳ್ಳಲಾಗಿದೆ. ಕರ್ತೃ ಗದ್ದುಗೆಗಳಿಗೆ ಮತ್ತು ಗ್ರಾಮದೇವತೆ ಗುಳ್ಯಮ್ಮದೇವಿಗೆ ಮತ್ತು ನರಸಿಂಹಸ್ವಾಮಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. 

ಬೆಂಗಳೂರಿನಲ್ಲಿ ವಾಸವಿರುವ ಅನಸೂಯಾ ಜಿ.ವಿ.ಚಂದ್ರಪ್ಪ, ಶಾಲಿನಿ ಜಿ.ಸಿ.ನಾಗೇಶ, ಕೃತ್ವಿಕ್‌ ಸೂರ್ಯ ಅವರಿಂದ ಅನ್ನಸಂತರ್ಪಣೆ ಆಯೋಜಿಸಿದ್ದಾರೆ ಎಂದು ಸೇವಾ ಸಮಿತಿ ಕಾರ್ಯದರ್ಶಿ ವಿ.ಎಚ್‌.ರುದ್ರೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.