ADVERTISEMENT

ಮತಗಳಿಕೆಗೆ ಸೀಮಿತವಾದ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 10:23 IST
Last Updated 15 ಏಪ್ರಿಲ್ 2017, 10:23 IST

ದಾವಣಗೆರೆ: ಬಾಬಾಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್ ಹೆಸರನ್ನು ಮತಗಳಿಕೆಗೆ ಮಾತ್ರ ಬಳಸಿಕೊಂಡ ಕಾಂಗ್ರೆಸ್‌ ಪಕ್ಷ ದಲಿತರ ಉದ್ಧಾರಕ್ಕೆ ಶ್ರಮಿಸಲಿಲ್ಲ ಎಂದು ಸಂಸದ ಜಿಎಂ.ಸಿದ್ದೇಶ್ವರ ಟೀಕಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ದಶಕಗಳ ಕಾಲ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ದಲಿತಪರ ಯೋಜನೆಗಳನ್ನು ಜಾರಿಗೆ ತರಲಿಲ್ಲ ಎಂದರು.

‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂಬೇಡ್ಕರ್ ಚಿಂತನೆಗಳಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದಲಿತರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟು ಎಲ್ಲ ಬಡ ವರ್ಗಗಳ ಅಭಿವೃದ್ಧಿಗೆ ಶ್ರಮಿಸು ತ್ತಿದ್ದಾರೆ. ಹಿಂದೆ ಯಾವ ಸರ್ಕಾರವೂ ಮಾಡದಂತಹ ಕೆಲಸವನ್ನು ಮಾಡುತ್ತಿದ್ದಾರೆ’ ಎಂದರು.

‘ಜನಧನ, ಅಟಲ್‌ ಪೆನ್ಷನ್‌, ಮುದ್ರಾ ಯೋಜನೆ ಜಾರಿಗೆ ತಂದು ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ. ದೆಹಲಿಯಲ್ಲಿ₹ 195 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಇಂಟರ್‌ನ್ಯಾಷನಲ್‌ ಸೆಂಟರ್‌, ಮುಂಬೈ ನಲ್ಲಿ ಅಂಬೇಡ್ಕರ್ ಮೆಮೊರಿಯಲ್ ಹಾಲ್‌, ಲಂಡನ್‌ನಲ್ಲಿ ಅಂಬೇಡ್ಕರ್ ವಾಸವಿದ್ದ ಮನೆ ಖರೀದಿಸಿ ಸ್ಮಾರಕ ಮಾಡಿ ಅವರ ವಿಚಾರಧಾರೆಗಳನ್ನು ಜಗತ್ತಿಗೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ನಗದು ರಹಿತ ಆರ್ಥಿಕ ವ್ಯವಸ್ಥೆ ಜಾರಿಗೆ ಬಿಜೆಪಿ ಸರ್ಕಾರ ಪಣತೊಟ್ಟಿದ್ದು, ಅದರ ಭಾಗವಾಗಿ ಭೀಮ್‌ ಆ್ಯಪ್‌ ಬಿಡುಗಡೆ ಮಾಡಿದೆ. ಎಲ್ಲ ನಗದು ವ್ಯವಹಾರಗಳಿಗೆ ಭೀಮ್‌ ಆ್ಯಪ್‌ ನೆರವಾಗಲಿದ್ದು, ಸಾರ್ವಜನಿಕರು ಹೆಚ್ಚು ಬಳಸಿಕೊಳ್ಳಬೇಕು ಎಂದರು.ಮುಖಂಡ ಬಸವರಾಜ್‌ ಮಾತನಾಡಿ, ‘ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲ, ಎಲ್ಲ ವರ್ಗಗಳ ನಾಯಕ. ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌ ಅಲ್ಲ ಎಂದರು.

ಮುಖಂಡ ಲಿಂಗಣ್ಣ ಮಾತನಾಡಿ, ‘ಅಂಬೇಡ್ಕರ್ ಆಶಯದಂತೆ ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುನ್ನಡೆಯೋಣ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಮ್ಮ,  ಶಿವಕುಮಾರ್, ರಮೇಶ್ ನಾಯ್ಕ, ಸಹನಾ ರವಿ, ರಾಜಶೇಕರ್, ಎಚ್.ಆನಂದಪ್ಪ, ಮೆಳ್ಳೆಕಟ್ಟೆ ನಾಗರಾಜ್, ಬಸವರಾಜ್‌, ರಾಜನಹಳ್ಳಿ ಶಿವಕುಮಾರ್, ಧನುಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.