ADVERTISEMENT

ಮತಯಂತ್ರ ವಿಶ್ವಾಸಾರ್ಹ, ಅನುಮಾನ ಬೇಡ

ಇವಿಎಂ, ವಿವಿ ಪ್ಯಾಟ್‌ ಮತಯಂತ್ರಗಳ ಕಾರ್ಯನಿರ್ವಹಣೆಯ ಪ್ರಾತ್ಯಕ್ಷಿಕೆಯಲ್ಲಿ ಜಿಲ್ಲಾಧಿಕಾರಿ ರಮೇಶ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 10:20 IST
Last Updated 11 ಏಪ್ರಿಲ್ 2018, 10:20 IST
ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಇವಿಎಂ ಮತ್ತು ವಿವಿ ಪ್ಯಾಟ್‌ ಯಂತ್ರಗಳ ಕಾರ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಇವಿಎಂ ಮತ್ತು ವಿವಿ ಪ್ಯಾಟ್‌ ಯಂತ್ರಗಳ ಕಾರ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.   

ದಾವಣಗೆರೆ: ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಮತ್ತು ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್‌) ಬಳಸಲಾಗುತ್ತಿದ್ದು, ಮತದಾರ ತಾನು ಚಲಾಯಿಸಿದ ಮತ ಯಾರಿಗೆ ಬಿದ್ದಿದೆ ಎನ್ನುವುದನ್ನು 7 ಸೆಕೆಂಡ್‌ಗಳಲ್ಲಿ ವಿವಿ ಪ್ಯಾಟ್‌ ಮೂಲಕ ಖಾತ್ರಿ ಪಡಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಹೇಳಿದರು.

ಜಿಲ್ಲಾ ನ್ಯಾಯಾಲಯದ ಆವರಣದ ವಕೀಲರ ಸಂಘದ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇವಿಎಂ ಮತ್ತು ವಿವಿ ಪ್ಯಾಟ್‌ ಯಂತ್ರಗಳ ಕಾರ್ಯ ನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇವಿಎಂ ಹಾಗೂ ವಿವಿ ಪ್ಯಾಟ್‌ ಉಪಕರಣಗಳು ಯಾವುದೇ ನೆಟ್‌ವರ್ಕ್‌ ಹಾಗೂ ವಿದ್ಯುತ್‌ ಸಂಪರ್ಕವಿಲ್ಲದೆ ಬ್ಯಾಟರಿ ಮೂಲಕ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತವೆ. ಸಾಕಷ್ಟು ಭದ್ರತೆ ಕೂಡ ಹೊಂದಿರುತ್ತವೆ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ 2 ಸಾವಿರ ಮತಗಟ್ಟೆಗಳಿದ್ದು, ಇದಕ್ಕಾಗಿಯೇ 9 ಸಾವಿರ ಮತ ಯಂತ್ರದ ಯುನಿಟ್‌ಗಳನ್ನು ಬಳಸಲಾಗುತ್ತಿದೆ. ಇವುಗಳ ಕಾರ್ಯ ನಿರ್ವಹಣೆಯ ಬಗ್ಗೆ ಈಗಾಗಲೇ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದರು.

ಒಂದು ಮತದಾನದ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 17 ರಿಂದ 18 ನಿಮಿಷ ಬೇಕಾಗುತ್ತದೆ. ಒಂದು ನಿಮಿಷದಲ್ಲಿ ಮೂರು ಮತಗಳನ್ನು ಮಾತ್ರ ಚಲಾಯಿಸಬಹುದು. ಒಂದು ಮತ ಯಂತ್ರದಲ್ಲಿ 1,200 ಮತ ಹಾಕಲು ಅವಕಾಶವಿದೆ. ಮತದಾನದ ನಂತರ ಚಲಾವಣೆಯಾದ ಮತಗಳು ಹಾಗೂ ವಿವಿ ಪ್ಯಾಟ್‌ಗಳಲ್ಲಿ ಸಂಗ್ರಹವಾದ ಚೀಟಿಗಳು ಕರಾರುವಕ್ಕಾಗಿವೆಯೇ ಎಂದು ಖಾತ್ರಿ ಪಡಿಸಲಾಗುತ್ತದೆ ಎಂದರು.

ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಹಲವು ಬಾರಿ ತಪಾಸಣೆಗೆ ಒಳಪಡಿಸಲಾಗಿದೆ. ಒಂದು ವೇಳೆ ಯಾವುದೇ ಉಪಕರಣದಲ್ಲಿ ತಾಂತ್ರಿಕ ದೋಷ ಕಂಡುಬಂದಲ್ಲಿ ಚುನಾವಣಾ ಅಭ್ಯರ್ಥಿ ಹಾಗೂ ಮತಗಟ್ಟೆ ಅಧಿಕಾರಿಗಳ ಸಮ್ಮುಖದಲ್ಲಿ ಅದನ್ನು ಬದಲಾಯಿಸಿ ಮತ್ತೊಂದು ಯಂತ್ರವನ್ನು ಅಳವಡಿಸಲಾಗುವುದು ಎಂದು ವಕೀಲರೊಬ್ಬರ ಪ್ರಶ್ನೆಯೊಂದಕ್ಕೆ ರಮೇಶ್‌ ಪ್ರತಿಕ್ರಿಯಿಸಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಹೊಸಗೌಡರ್‌, ‘ಮತದಾನ ವೇಳೆ ಯಾವುದೇ ಗೊಂದಲಕ್ಕೆ ಒಳಗಾಗದಂತೆ ಶೇ 100ರಷ್ಟು ಮತ ಚಲಾವಣೆಗೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಇದೇ ಸಮಯದಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಅಣಕು ಮತದಾನ ಮಾಡುವ ಮೂಲಕ ಇವಿಎಂ ಹಾಗೂ ವಿವಿ ಪ್ಯಾಟ್‌
ಯಂತ್ರಗಳ ಕಾರ್ಯ ನಿರ್ವಹಣೆ ಪರಿಶೀಲಿಸಿದರು.

1ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಎ.ಎಸ್‌.ಸದಲಗಿ, 2ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ನಾಗಶ್ರೀ, ಹಿರಿಯ ಸಿವಿಲ್‌ ನ್ಯಾಯಾಧೀಶ ಸಾಬಪ್ಪ ವೇಮಗಲ್‌, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಜಿನಾಲ್‌ಕರ್‌, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಪಾಲಿಕೆ ಆಯುಕ್ತ ಇಸ್ಲಾವುದ್ದೀನ್‌, ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಹಾಗೂ ವಿವಿಧ ಹಂತದ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಂಕಿಅಂಶ...

2,000

ಜಿಲ್ಲೆಯಲ್ಲಿನ ಮತಗಟ್ಟೆಗಳು

9,000

ಮತಯಂತ್ರ ಯುನಿಟ್‌ ಬಳಕೆ

17 ನಿಮಿಷ

ಒಂದು ಮತ ಪ್ರಕ್ರಿಯೆ ಪೂರ್ಣದ ಸಮಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.