ADVERTISEMENT

ಮಳೆ ಇಲ್ಲ, ಮೀನುಮರಿ ಉತ್ಪಾದನೆಯೂ ಇಲ್ಲ

ಪ್ರಕಾಶ ಕುಗ್ವೆ
Published 7 ಜುಲೈ 2017, 6:12 IST
Last Updated 7 ಜುಲೈ 2017, 6:12 IST

ದಾವಣಗೆರೆ: ಮೀನುಮರಿ ಉತ್ಪಾದನೆ ಸತತ ಎರಡನೇ ವರ್ಷವೂ ಜಿಲ್ಲೆಯಲ್ಲಿ ಕುಂಠಿತಗೊಂಡಿದೆ. ಮಳೆ ಕೊರತೆ ಈ ವರ್ಷವೂ ಮುಂದುವರಿದ ಕಾರಣ ಮೀನುಗಾರಿಕೆ ಇಲಾಖೆಯ ಉತ್ಪಾದನಾ ನರ್ಸರಿಗಳು ಬಣಗುಡುತ್ತಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ಮೀನುಮರಿ ಉತ್ಪಾದನೆ ಗುರಿ ಇದ್ದಿದ್ದು 40 ಲಕ್ಷ. ಆದರೆ, ಉತ್ಪಾದನೆಯಾಗಿದ್ದು 27.50 ಲಕ್ಷ ಮಾತ್ರ. ಈ ವರ್ಷ ಇದುವರೆಗೂ ಉತ್ಪಾದನೆಯಾಗಿದ್ದು ಕೇವಲ 4 ಲಕ್ಷ.

ಜಿಲ್ಲೆಯ ಕೊಂಡಜ್ಜಿ, ಹರಪನಹಳ್ಳಿ, ಹೊನ್ನಾಳಿ ಹಾಗೂ ಜಗಳೂರಿನಲ್ಲಿ ಮೀನುಮರಿ ಉತ್ಪಾದಿಸುವ ನಾಲ್ಕು ನರ್ಸರಿಗಳಿವೆ. ಕೊಂಡಜ್ಜಿ ಕೆರೆವೊಂದರಲ್ಲೇ ಪ್ರತಿ ವರ್ಷ 20 ಲಕ್ಷ ಮರಿ ಉತ್ಪಾದಿಸಲಾಗುತ್ತಿತ್ತು. ಈ ವರ್ಷ ಈ ಕೆರೆ ಸಂಪೂರ್ಣ ಬತ್ತಿಹೋಗಿದೆ. ಹಾಗಾಗಿ, ಹೊನ್ನಾಳಿ ಹಾಗೂ ಹರಪನಹಳ್ಳಿಯ ನರ್ಸರಿಗಳಲ್ಲಿ ತಲಾ 2 ಲಕ್ಷ ಮರಿ ಉತ್ಪಾದಿಸಲಾಗಿದೆ. ಹೊನ್ನಾಳಿಯಲ್ಲಿ ರೋಹು, ಹರಪನಹಳ್ಳಿಯಲ್ಲಿ ಸಾಮಾನ್ಯ ಗೆಂಡೆ ಮೀನುತಳಿಗಳು ಈಗ ಬಿತ್ತನೆಗೆ ಸಿದ್ಧಗೊಂಡಿವೆ.

ಈ ಎರಡೂ ನರ್ಸರಿಗಳಿಗೆ ಸದ್ಯಕ್ಕೆ ಬೋರ್‌ವೆಲ್‌ ನೀರೇ ಗತಿ. ಉಳಿದ ಕಡೆಗಳಲ್ಲಿ ಕೆರೆ, ಬೋರ್‌ವೆಲ್‌ ಎರಡೂ ಬತ್ತಿ ಹೋಗಿದ್ದರಿಂದ ತೊಟ್ಟು ನೀರೂ ಇಲ್ಲ. ಹಾಗಾಗಿ, ಉತ್ಪಾದನೆ ಸದ್ಯಕ್ಕೆ ಇಲ್ಲ. ಮುಂದೆ ಮಳೆ ಬಂದರೆ ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸಬಹುದು ಎನ್ನುತ್ತಾರೆ ಜಿಲ್ಲಾ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ಉಮೇಶ್.

ADVERTISEMENT

‘ಜಿಲ್ಲೆಯಲ್ಲಿ ಕಳೆದ ವರ್ಷ 1.60 ಕೋಟಿ ಮೀನುಮರಿ ಬಿತ್ತನೆ ಗುರಿ ಇತ್ತು. ಮಳೆ ಕೊರತೆ ಕಾರಣ 69.05 (ಶೇ 37) ಲಕ್ಷ ಮೀನುಮರಿ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ ಸಿಕ್ಕಿದ್ದು ಶೇ 5ರಿಂದ 10  ಮೀನು ಅಷ್ಟೆ’ ಎಂಬುದು ಅವರ ಮಾಹಿತಿ.

ಜಿಲ್ಲೆಯಲ್ಲಿ ಪ್ರತಿ ವರ್ಷ ಬೇಡಿಕೆಯ ಅರ್ಧದಷ್ಟು ಮಾತ್ರ ಮೀನುಮರಿ ಉತ್ಪಾದಿಸಲಾಗುತ್ತಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿರುವ ಬಿಆರ್‌ಪಿಯ ಮೀನು ಉತ್ಪಾದನಾ ಕೇಂದ್ರದಿಂದ 50 ಲಕ್ಷ ಮೀನುಮರಿ, ಜಿಲ್ಲೆಯ ಖಾಸಗಿ ಮೀನುಮರಿ ಉತ್ಪಾದಕರಿಂದ 15 ಲಕ್ಷ ಮರಿಗಳನ್ನು ಪಡೆದುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಉಮೇಶ್.

ಜಿಲ್ಲೆಯಲ್ಲಿ ರೈತರು ಮೀನುಕೃಷಿಯತ್ತ ಆಕರ್ಷಿತರಾಗುತ್ತಿದ್ದ ಸಂದರ್ಭದಲ್ಲೇ ಸತತವಾಗಿ ಮಳೆ ಕೈಕೊಟ್ಟಿದೆ. ಇದರಿಂದ ಜಿಲ್ಲೆಯ ಮೀನುಕೃಷಿ ಮೇಲೆ ಪರಿಣಾಮ ಬೀರಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕಳೆದ ವರ್ಷ 96 ಎಕರೆಯಲ್ಲಿ 1.10 ಲಕ್ಷ ಮೀನುಮರಿ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ ಶೇ 5ರಷ್ಟೂ ಫಲ ಸಿಗಲಿಲ್ಲ. ಸರ್ಕಾರ ಈ ವರ್ಷ ಉಚಿತವಾಗಿ ಗುತ್ತಿಗೆ ನವೀಕರಣ ಮಾಡಿ ಉಪಕರಿಸಿದೆ. ಆದರೆ, ಕಳೆದ ವರ್ಷ ಮೀನುಕೊಳ ಸಿದ್ಧತೆ, ಮೀನುಮರಿ ಖರೀದಿಗೆ ಬಳಸಿದ ಹಣ ಮರುಪಾವತಿಸಬೇಕು’ ಎಂದು ಒತ್ತಾಯಿಸುತ್ತಾರೆ ದಾವಣಗೆರೆ ತಾಲ್ಲೂಕು ಕಂದಗಲ್ಲ ಶ್ರೀಮತ್ಸ್ಯಾಂಜನೇಯ ಮೀನು ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ಆರ್‌.ರುದ್ರೇಶ್.

* ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ 40 ಹೆಕ್ಟೇರ್‌ಗಿಂತ ಕಡಿಮೆ ಅಚ್ಚುಕಟ್ಟು ಇರುವ ಕೆರೆಗಳು 100
* 2016–17ನೇ ಸಾಲಿನಲ್ಲಿ ಕೆರೆ ಮೀನು ಗುತ್ತಿಗೆಯಿಂದ ಇಲಾಖೆಗೆ  ₹42 ಲಕ್ಷ ಆದಾಯ ಬಂದಿತ್ತು. ಆದರೆ, ಇದೇ ಸಾಲಿನಲ್ಲಿ ಮಳೆ ಕೊರತೆಯಾಗಿದ್ದರಿಂದ ಶೂನ್ಯ ಆದಾಯ    ನವೀಕರಣ ಯೋಜನೆಯಡಿ ಮೀನುಗಾರರಿಗೆ 2017–18ನೇ ಸಾಲಿನಲ್ಲಿ ಯಾವುದೇ ಹಣ ಕಟ್ಟಿಸಿಕೊಳ್ಳದೆ ನವೀಕರಿಸಲಾಗಿದೆ.
* ಜಿಲ್ಲೆಯಲ್ಲಿ 22 ಮೀನುಗಾರರ ಸಹಕಾರ ಸಂಘಗಳಿವೆ.
* 2,600 ಪೂರ್ಣಕಾಲಿಕ ಕುಟುಂಬಗಳು ಮೀನುಗಾರಿಕೆ ಆಶ್ರಯಿಸಿವೆ.
* 2,900 ಕುಟುಂಬಗಳು ಅರೆಕಾಲಿಕವಾಗಿ ಆಶ್ರಯಿಸಿವೆ.
* 2011ರಿಂದ ಈ ವರ್ಷದವರೆಗೆ 30 ಹೆಕ್ಟೇರ್‌ ಪ್ರದೇಶದಲ್ಲಿ ಮೀನು ಕೃಷಿ ವಿಸ್ತರಿಸಲಾಗಿದೆ. ಜಿಲ್ಲೆಯ 50 ರೈತರು ಈ ಕೃಷಿಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ₹ 1.20 ಕೋಟಿ   ವ್ಯವಹಾರ ನಡೆಯುತ್ತದೆ.

* * 

ಜಿಲ್ಲೆಯ ಯಾವ ಕೆರೆಯಲ್ಲೂ ನೀರಿಲ್ಲ. ಮೀನುಮರಿ ಬಿತ್ತನೆಗೆ ಕೃಷಿಕರಿಂದ  ಯಾವುದೇ ಬೇಡಿಕೆ ಬಂದಿಲ್ಲ. ಬಂದರೆ ಹೊರ ಜಿಲ್ಲೆಗಳಿಂದ ಪೂರೈಸಲು ಇಲಾಖೆ ಸಿದ್ಧವಿದೆ.
–ಡಾ.ಉಮೇಶ್  ಹಿರಿಯ ಸಹಾಯಕ ನಿರ್ದೇಶಕ,
ಮೀನುಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.