ADVERTISEMENT

ಮಹಿಳೆ ದೇವರಲ್ಲ, ಮನುಷ್ಯಳು

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಮೇಶ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 4:53 IST
Last Updated 9 ಮಾರ್ಚ್ 2017, 4:53 IST
ದಾವಣಗೆರೆ: ‘ಮಹಿಳೆಯರನ್ನು ದೇವರಾಗಿ ನೋಡುವ ಅವಶ್ಯಕತೆ ಇಲ್ಲ, ಅವರನ್ನು ಮನುಷ್ಯರಾಗಿ ಕಾಣಬೇಕು. ಸಮಾಜದಲ್ಲಿ ಪುರುಷನಿಗೆ ಬದುಕಲು ಎಷ್ಟು ಹಕ್ಕು ಮತ್ತು ಸ್ವಾತಂತ್ರ್ಯ ಇದೆಯೋ ಅವರಿಗೂ ಅಷ್ಟೇ ಇದೆ. ಗಂಡು–ಹೆಣ್ಣು ಎಂಬ ಭೇದ ಇಲ್ಲದ ಸಮಾನತೆಯ ವಾತಾವರಣವನ್ನು ಸಮಾಜದಲ್ಲಿ ನಿರ್ಮಿಸಬೇಕು’ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಹೇಳಿದರು.
 
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
‘ಪ್ರಪಂಚದಲ್ಲಿ ಇರುವುದು ಒಂದೇ ಕುಲ. ಅದು ಮನುಷ್ಯ ಕುಲ. ಪುರುಷ ಹೇಗೆ ಬದುಕುತ್ತಿದ್ದಾನೆ, ಅದೇ ರೀತಿ ಮಹಿಳೆ ಕೂಡ ಬದುಕಬೇಕು. ಆದರೆ, ಮಹಿಳೆಗೆ ಅಂತಹ ಹಕ್ಕು ಮತ್ತು ಸ್ವಾತಂತ್ರ್ಯ ನೀಡಿದ್ದೇವೆಯೇ? ಎಂಬುದು ಪ್ರಶ್ನೆ’ ಎಂದು ವಿಶ್ಲೇಷಿಸಿದರು.
 
ಭಾರತದಲ್ಲಿ ಹೆಣ್ಣಿಗೆ ಕೊಟ್ಟಷ್ಟು ಸ್ಥಾನ ಬೇರೆ ಎಲ್ಲಿಯೂ ಕೊಟ್ಟಿಲ್ಲ. ಪರಿಪೂರ್ಣತೆಯ ಸಂಕೇತವಾಗಿದ್ದರಿಂದ ಆಕೆಯನ್ನು ತಾಯಿ ಹಾಗೂ ದೇವರ ರೂಪದಲ್ಲಿ ಕಾಣುತ್ತೇವೆ. ದೇವರನ್ನು ಗುಡಿಯಲ್ಲಿಟ್ಟು ದಿಗ್ಬಂಧನ ಹಾಕಿದಂತೆ ಮಹಿಳೆಯರನ್ನೂ ದೇವರನ್ನಾಗಿ ಮಾಡಿ, ಬಂಧಿಸಿಟ್ಟಿದ್ದೇವೆ. ಇದು ತಪ್ಪು; ಆಕೆಯೂ ಮನುಷ್ಯಳು, ಆಕೆಗೆ ಸಮಾನವಾದ ಅವಕಾಶ ನೀಡಬೇಕು’ ಎಂದರು.
 
ಮಹಿಳೆಯರಿಗೆ ಉತ್ತಮ ಸ್ಥಾನ ಕಲ್ಪಿಸಿದಂತಹ ಈ ಸಮಾಜದಲ್ಲಿ ಹೆಣ್ಣಿಗೆ ನಿಜವಾಗಿಯೂ ಸಮಾನ ಪ್ರೀತಿ, ವಾತ್ಸಲ್ಯ ನೀಡುತ್ತಿಲ್ಲ. ಮಹಿಳೆಯನ್ನು ದೇವರನ್ನಾಗಿ ಮಾಡಬೇಡಿ, ಮನುಷ್ಯಳಾಗಿ ಕಾಣಿ’ ಎಂದು ಸಲಹೆ ನೀಡಿದರು.
 
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಮೊದಲಿಗೆ ಪ್ರತಿಪಾದಿಸಿದ್ದು ಬಸವಣ್ಣ. ಅವರ ಸ್ಮರಣೆ ಇಂದು ಅಗತ್ಯ ಎಂದು ಹೇಳಿದರು.
 
ವೃತ್ತಿಯಲ್ಲಿ ಪುರುಷರಿಗಿಂತ ಹೆಚ್ಚು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಇನ್ನಷ್ಟು ಉತ್ತಮ ಸ್ಥಾನಮಾನಗಳು ಸಿಗಬೇಕು ಎಂದು ಹೇಳಿದರು.
ಒಳ್ಳೆಯ ಕೆಲಸ ಮಾಡುವ ಆಸೆ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್ ಮಾತನಾಡಿ, ‘ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ರಾಜಕೀಯ ಕ್ಷೇತ್ರ ಹೊಸದು. ನನ್ನ ಭಾವ ಎಂ.ಪಿ.ರೇಣುಚಾರ್ಯ ಅವರ ಸ್ಫೂರ್ತಿಯಿಂದ ಈ ಕ್ಷೇತ್ರಕ್ಕೆ ಬಂದೆ. ಅಧಿಕಾರಾವಧಿಯಲ್ಲಿ ಬಡವರಿಗೆ ಒಳ್ಳೆಯದು ಮಾಡಬೇಕೆಂಬ 
ಆಸೆ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.
 
ಸಭೆಯಲ್ಲಿ ದಾವಣಗೆರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಮೇಯರ್‌ ರೇಖಾ ನಾಗರಾಜ್, ಸಿಇಒ ಎಸ್‌.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಡಿಡಿಪಿಐ ಎಚ್‌.ಎಂ.ಪ್ರೇಮಾ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸೌಮ್ಯಾ ಬಾಪಟ್, ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ಸಮಾಜಸೇವಕಿ ಮಿಮಲಾ ದಾಸ್, ಜಿಲ್ಲಾ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್ ಸ್ವಾಗತಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. 
 
ಮಹಿಳಾ ಅಧಿಕಾರಿಗಳಿಗೆ ದಾವಣಗೆರೆ ಸುರಕ್ಷಿತ
ದಾವಣಗೆರೆ ಸುರಕ್ಷಿತ ಜಿಲ್ಲೆ. ಹಾಗಾಗಿ ಮಹಿಳಾ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ವರ್ಗಾವಣೆ ಬಯಸಿಬಂದಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಜಿಲ್ಲೆಯಲ್ಲಿ ಯಾರ ತೊಂದರೆಯೂ ಇಲ್ಲ ಎನ್ನುವ ಅಭಿಪ್ರಾಯ ಹೆಣ್ಣುಮಕ್ಕಳಲ್ಲಿ ಇದೆ. ಸುರಕ್ಷಿತ ಪ್ರದೇಶ ಎಂಬ ಮನೋಭಾವದಿಂದಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಬರುತ್ತಿದ್ದಾರೆ ಎಂದರು.

ಅಸಾಧಾರಣ  ಪ್ರತಿಭೆಯ  ಮಕ್ಕಳಿಗೆ  ಸನ್ಮಾನ
ಸಮಾರಂಭದಲ್ಲಿ 2016–17ನೇ ಸಾಲಿನ ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಅಸಾಧಾರಣ ಪ್ರತಿಭೆಯ ಮಕ್ಕಳನ್ನು ಸನ್ಮಾನಿಸಲಾಯಿತು. ಸಾಗರ್‌ ಪಿ.ಬಣಕಾರ್, ಎಚ್‌.ಎಸ್‌.ಪುಷ್ಪಲತಾ (ನಾವಿನ್ಯತೆ), ಎಸ್‌.ಬಿ.ರಂಜಿತ, ಕೆ.ಜಿ.ಭರತ್ (ತಾರ್ಕಿಕ), ನೂರ್‌ ಇ ಸಾನಿಯಾ, ಎಲ್‌.ಮಣಿಕಂಠ (ಕ್ರೀಡೆ), ಸಿ.ಪ್ರಶಾಂತ್, ಪಿ.ರಿಷಿ (ಕಲೆ), ಎ.ಟಿ.ಅಮೂಲ್ಯ, ಅನುಷಾ ಎಂ.ಶಿಲವಂತರು (ಸಾಂಸ್ಕೃತಿಕ), ಎಂ.ಸಿರಿ, ಉಜ್ಜನಿ ಬಿಮೇಶ್ (ಸಮಾಜ ಸೇವೆ), ವಿ.ಎಸ್‌.ಭೂಮಿಕಾ, ಎಚ್‌.ಜಿ.ಆದರ್ಶ (ಸಂಗೀತ) ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.