ADVERTISEMENT

ಮಾದರಿ ಗ್ರಾಮಕ್ಕೆ ಪಣತೊಟ್ಟ ಮಹಿಳೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 4:58 IST
Last Updated 22 ಮೇ 2017, 4:58 IST
ಮಾದರಿ ಗ್ರಾಮಕ್ಕೆ ಪಣತೊಟ್ಟ ಮಹಿಳೆ
ಮಾದರಿ ಗ್ರಾಮಕ್ಕೆ ಪಣತೊಟ್ಟ ಮಹಿಳೆ   

ದಾವಣಗೆರೆ: ಮೀಸಲಾತಿ ಕಾರಣದಿಂದ ಮಹಿಳೆಗೆ ಅಧಿಕಾರದ ಗದ್ದುಗೆ ದೊರೆತರೂ, ಅದನ್ನು ಚಲಾಯಿಸುವವರು ಪತಿಯಂದಿರು ಎಂಬ ಭಾವನೆ ಇನ್ನೂ ಬಲವಾಗಿದೆ. ಇದಕ್ಕೆ ಅಪವಾದ ಇರುವವರು ಕಡಿಮೆ. ತಮ್ಮ ಅಧಿಕಾರ ಚಲಾಯಿಸುವುದರ ಜೊತೆಗೆ ಗ್ರಾಮದ ಅಭಿವೃದ್ಧಿಯನ್ನೂ ಮಾದರಿ ರೀತಿಯಲ್ಲಿ ನಿರ್ವಹಿಸಿದ ಛಲಗಾತಿಯರಲ್ಲಿ ಒಬ್ಬರು ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಹೇರಾ ಬಾನು.

ಮಹಿಳಾ ಪ್ರತಿನಿಧಿಗಳ ಒಕ್ಕೂಟ ‘ಸುಗ್ರಾಮ’ದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಅವರಿಗೆ ತಮ್ಮ ಅಧಿಕಾರದ ವ್ಯಾಪ್ತಿ ಏನು? ಗಂಡಂದಿರು ಅವುಗಳನ್ನು ಹೇಗೆ ಮೊಟಕುಗೊಳಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಹಾಗಾಗಿ ತಮಗೆ ಒದಗಿದ ಅಧಿಕಾರವನ್ನು ಹಸ್ತಕ್ಷೇಪಕ್ಕೆ ಅವಕಾಶ ನೀಡದೇ ತಾವೇ ಚಲಾಯಿಸುತ್ತಿದ್ದಾರೆ. ನಲ್ಲೂರನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಪಣತೊಟ್ಟಿದ್ದಾರೆ.

‘ನಾನು ಅಧ್ಯಕ್ಷೆ ಆಗುವ ಮೊದಲೂ ಕೆಲಸ ಮಾಡಿದ್ದೇನೆ. ಅಧಿಕಾರ ಹೋದ ಮೇಲೂ ಕೆಲಸ ಮಾಡುತ್ತೇನೆ. ಮಹಿಳೆಯರ ಹೆಸರಲ್ಲಿ ಪುರುಷರು ಅಧಿಕಾರ ಚಲಾಯಿಸದ ಹಾಗೆ ನೋಡಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.ಸಾಹೇರಾ ಬಾನು ಹುಟ್ಟೂರು ಕೂಡ ಇದೇ ತಾಲ್ಲೂಕಿನ ನವಿಲೇಹಾಳ್‌. ಮದುವೆಯಾಗಿ ನಲ್ಲೂರಿಗೆ ಬಂದವರು. ಪತಿ ಮತ್ತು ಇಬ್ಬರು ಮಕ್ಕಳ ಜತೆಗೆ ನಲ್ಲೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಪತಿ ನೂರುಲ್ಲಾ ಎಲೆಕ್ಟ್ರೀಷಿಯನ್‌ ಮತ್ತು ಪ್ಲಂಬಿಂಗ್‌ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಹೂಳೆತ್ತಲು ಮಾನವಶ್ರಮ: ನಲ್ಲೂರು ಕೆರೆಯ ಹೂಳೆತ್ತುವ ಕೆಲಸವನ್ನು ಜೆಸಿಬಿ ಮೂಲಕ ಮಾಡಲು ಬಿಡದೆ ಪಟ್ಟು ಹಿಡಿದು ಮಾನವ ಶ್ರಮದಿಂದಲೇ ಮಾಡಿಸಿದ್ದಾರೆ. ಇದರಿಂದ ಹೂಳೆತ್ತಲು ಹೆಚ್ಚು ದಿನಗಳು ಬೇಕಾದರೂ ಹಣ ಒಂದೇ ಕಡೆ ಹೋಗುವುದು ತಪ್ಪಿದೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ₹ 70 ಲಕ್ಷದ ಕಾಮಗಾರಿ ಮಾಡಿಸಿ ತಮ್ಮ ಗ್ರಾಮದ ಜನರಿಗೆ ಉದ್ಯೋಗ ನೀಡಿದ್ದಾರೆ. ಒಬ್ಬರ ಜಾಬ್‌ಕಾರ್ಡ್ ಮತ್ತೊಬ್ಬರು ಬಳಸದಂತೆ ಎಚ್ಚರಿಕೆ ವಹಿಸಿದ್ದಾರೆ.

ನಲ್ಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಕ್ಕಾಗಿ ಚೀಟಿ ನೀಡಿ ಹೊರಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ. ಪ್ರತಿ ವಾರ ಆಸ್ಪತ್ರೆಗೆ ಭೇಟಿ ನೀಡಿ ಯಾವ ಔಷಧದ ಕೊರತೆ ಇದೆ ಎಂದು ತಿಳಿದುಕೊಂಡು ನೇರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಸಂಪರ್ಕಿಸಿ, ಔಷಧ ತರಿಸುತ್ತಿದ್ದಾರೆ. ಇದರಿಂದ ರೋಗಿಗಳು ಔಷಧಿಗಾಗಿ ಅಲೆದಾಟ ತಪ್ಪಿದೆ.

ಬಯಲುಶೌಚ ಮುಕ್ತ ಗ್ರಾಮವನ್ನಾಗಿ ಮಾಡುವುದಕ್ಕಾಗಿ ಮನೆ ಮನೆಗೆ ಭೇಟಿ ನೀಡಿ ಶೌಚಾಲಯ ಕಟ್ಟಲು ಜನರ ಮನವೊಲಿಸಿದ್ದಾರೆ. ಒಪ್ಪೊತ್ತಿನ ಊಟಕ್ಕೂ ತೊಂದರೆ ಇರುವ 20 ಮನೆಗಳಿಗೆ ತಾವೇ ನೆರವಾಗಿ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. 10 ಸರ್ಕಾರಿ ಮತ್ತು ನಾಲ್ಕು ಖಾಸಗಿ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡುತ್ತಿದ್ದಾರಾ ಎಂದು ಪರಿಶೀಲಿಸುತ್ತಿರುತ್ತಾರೆ.

ಶಾಲೆಗಳಿಗೆ ನೀರಿನ ಉಚಿತ ಕೂಪನ್‌ ನೀಡಲಾಗಿದ್ದು, ಶುದ್ಧ ನೀರಿನ ಘಟಕದಿಂದ ಮಕ್ಕಳಿಗೆ ಎಷ್ಟು ಬೇಕಾದರೂ ನೀರು ಒಯ್ಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಸ್ಪತ್ರೆ ಮತ್ತು ಅಂಗನವಾಡಿಗಳಿಗೆ ಉಚಿತವಾಗಿ ಶುದ್ಧ ನೀರು ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಇದಲ್ಲದೆ ಗ್ರಾಮ ಪಂಚಾಯ್ತಿಯ ಸಾಮಾನ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದಾರೆ.

‘ಕತ್ತಲಲ್ಲಿ ಬಯಲು ಹುಡುಕುವುದು ತಪ್ಪಿದೆ’
ಮೂರು ತಿಂಗಳ ಹಿಂದಿನವರೆಗೆ ನಾವು ಕತ್ತಲಾದ ಮೇಲೆ ಬಯಲಿಗೆ ನೀರು ಹಿಡಿದುಕೊಂಡು ಹೋಗಬೇಕಿತ್ತು. ಸಾಹೇರಾ ಬಾನು ಬಂದು ಶೌಚಾಲಯದ ಅಗತ್ಯದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಶೌಚಾಲಯ ಕಟ್ಟಲು ನೆರವು ನೀಡಿದ್ದರಿಂದ ಈಗ ಕತ್ತಲಲ್ಲಿ ಬಯಲು ಹುಡುಕುವುದು ತಪ್ಪಿದೆ. ಅತ್ತೆ, ಮಾವ ಅವರಿಗೆ ಕಣ್ಣು ಕಾಣಿಸುವುದಿಲ್ಲ. ಅವರಿಗೆ ಬಯಲಿಗೆ ಹೋಗಲು ಬಹಳ ತೊಂದರೆಯಾಗುತ್ತಿತ್ತು. ಈಗ ಆ ಸಮಸ್ಯೆ ತಪ್ಪಿದೆ. ಅವರಿಬ್ಬರಿಗೆ ಸಂಧ್ಯಾ ಸುರಕ್ಷಾ ವೇತನ ಕೂಡಾ ಬರುವಂತೆ ಅಧ್ಯಕ್ಷರು ಮಾಡಿದ್ದಾರೆ.
ರೂಪಾ ಹಾಲೇಶ್‌, ನಲ್ಲೂರು

* * 

ಮಹಿಳಾ ಜನಪ್ರತಿನಿಧಿಗಳ ಒಕ್ಕೂಟ ಸುಗ್ರಾಮವು ನಮ್ಮ ಅಧಿಕಾರ ಎಷ್ಟು ಎಂಬುದನ್ನು ತಿಳಿಸಿಕೊಟ್ಟಿದ್ದಷ್ಟೆ ಅಲ್ಲದೆ, ಜನೋಪಯೋಗಿಯಾಗಿ ಕೆಲಸ ಮಾಡುವುದು ಹೇಗೆ ಎಂಬುದನ್ನೂ ಕಲಿಸಿದೆ.

ಸಾಹೇರಾ ಬಾನು, ಅಧ್ಯಕ್ಷೆ ,ನಲ್ಲೂರು ಗ್ರಾ.ಪಂ

ಬಾಲಕೃಷ್ಣ ಪಿ.ಎಚ್‌. ಶಿಬಾರ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.