ADVERTISEMENT

ಮಾರಿಕಾಂಬಾ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 5:49 IST
Last Updated 19 ಜುಲೈ 2017, 5:49 IST

ಹೊನ್ನಾಳಿ: ಹೊನ್ನಾಳಿಯಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ ಕುಂಬಾರಕೇರಿಯಲ್ಲಿರುವ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಮಾರಿಕಾಂಬ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ದೇವಿಗೆ ಬ್ರಾಹ್ಮಣ ಸಮಾಜದ ನಾಡಿಗೇರ ವಂಶಸ್ಥರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ನಂತರ ಪಟೇಲ್ ವಂಶಸ್ಥರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ವಿವಾಹದ ವಿಧಿ ವಿಧಾನಗಳ ಪ್ರಕಾರ  ಪಟೇಲ್ ವಂಶದ ಹಿರಿಯರೊಬ್ಬರಿಂದ ದೇವಿಗೆ ಮಾಂಗಲ್ಯ ಧಾರಣೆ ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಎಚ್.ಬಿ. ಗಿಡ್ಡಪ್ಪ, ಧರ್ಮಪ್ಪ, ಬಿ. ಸಿದ್ದಪ್ಪ, ಮಾಲತೇಶ್ ಪಟೇಲ್, ಎಚ್.ಎ. ರಾಜಪ್ಪ, ಪುಟ್ಟಕೆಂಚಪ್ಪ, ಉಪಸ್ಥಿತರಿದ್ದರು. ಈ ಮೂಲಕ ಮಾರಿಕಾಂಬ ದೇವಿಯ ಜಾತ್ರೆಗೆ ಚಾಲನೆ ನೀಡಲಾಯಿತು. ನಂತರ ರಾತ್ರಿ 9ಗಂಟೆಗೆ ದೇವಿಯ ಮೆರವಣಿಗೆಯು ಕುಂಬಾರ ಬೀದಿಯ ದುರ್ಗಾಂಬಿಕೆ ದೇವಿಯ ದೇವಸ್ಥಾನದಿಂದ ಡೊಳ್ಳು ಭಜನೆಯೊಂದಿಗೆ ಹೊರಟು ಹಳದಮ್ಮದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀದೇವಿ ಗದ್ದಿಗೆಯಲ್ಲಿ ನೆಲೆಗೊಳಿಸಲಾಯಿತು. ದೇವಿಗೆ ಮಹಾಮಂಗಳಾರತಿ, ಹುಲುಸಿನಜೋಳ ಹಾಕುವುದು ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  

ADVERTISEMENT

19ಕ್ಕೆ ಸಂಜೆ 5 ಗಂಟೆಗೆ ಗಾವು ಮರಿ ತರುವುದು, ಹುಲುಸಿನ ಜೋಳ ಒಡೆಯುವುದು, ಅಸಾದಿ ಹೊಗಳಿಕೆ ಕಾರ್ಯಕ್ರಮಗಳು ನಡೆಯಲಿವೆ. 20ಕ್ಕೆ ಮಧ್ಯಾಹ್ನ 1.29 ಕ್ಕೆ ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ಮಹಾ ಮಂಗಳಾರತಿಯೊಂದಿಗೆ ರಾಜ ಬೀದಿಗಳಲ್ಲಿ ಮೆರವಣಿಗೆ ಹೊರಟು ತುಮ್ಮಿನಕಟ್ಟೆ ರಸ್ತೆಯ ಕೊನೆಯ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಮೆರವಣಿಗೆ ಮುಕ್ತಾಯ ಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷ ಧರ್ಮಪ್ಪ ಹಾಗೂ ಬಿ. ಸಿದ್ದಪ್ಪ ತಿಳಿಸಿದರು.

ಹಬ್ಬಕ್ಕೆ ಮೆರುಗು ತಂದ ಮಳೆ : ಒಂದು ವಾರದಿಂದ ಮಾರಿಹಬ್ಬದ ಸಿದ್ಧತೆಗಳು ನಡೆಯುತ್ತಿರುವಂತೆಯೇ ಜಿಟಿ ಜಿಟಿ ಮಳೆ ಕೂಡಾ ಆರಂಭವಾಗಿದೆ. ಹಬ್ಬದ ದಿನ ಹತ್ತಿರ ಬರುತ್ತಿದ್ದಂತೆ ಮಳೆ ಜೋರಾಗಿದೆ. ಕಳೆಗುಂದಿದ್ದ ರೈತರ ಮೊಗದಲ್ಲಿ ಮಳೆಯ ಕಾರಣದಿಂದ ಉತ್ಸಾಹದ ವಾತಾವರಣ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.